ದೆಹಲಿ ಮೇ 23: ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮೇ 13 ರಂದು ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದಾಗ ದೆಹಲಿ ಮುಖ್ಯಮಂತ್ರಿ ನಿವಾಸದಲ್ಲೇ ಇದ್ದರು ಎಂದು ಸ್ವಾತಿ ಹೇಳಿದ್ದಾರೆ. ಮೇ 13ರ ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ ಎಂದು ಕೇಜ್ರಿವಾಲ್ ಬುಧವಾರ ಹೇಳಿದ್ದರು. ಸ್ವಾತಿ ಮಲಿವಾಲ್ ಅವರು ಬಿಭವ್ ವಿರುದ್ಧ ದೂರಿನಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಎಫ್ಐಆರ್ ನಲ್ಲಿ ಅವರು ಪೂರ್ತಿ ಘಟನೆಯನ್ನು ವಿವರಿಸಿದ್ದರು. ಆದಾಗ್ಯೂ, ಸ್ವಾತಿ ಮಲಿವಾಲ್ ಈ ಘಟನೆಯನ್ನು ಮೌಖಿಕವಾಗಿ ವಿವರಿಸಿದ್ದು ಇದೇ ಮೊದಲು.
“ನಾನು ಮೇ 13 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಕೇಜ್ರಿವಾಲ್ ಅವರ ನಿವಾಸಕ್ಕೆ ಹೋಗಿದ್ದೆ. ಸಿಬ್ಬಂದಿ ನನ್ನನ್ನು ಡ್ರಾಯಿಂಗ್ ರೂಮ್‌ನಲ್ಲಿ ಕೂರಿಸಿದರು. ಅಲ್ಲಿ ಕಾಯುತ್ತಿರಿ, ಭೇಟಿಯಾಗಲು ಕೇಜ್ರಿವಾಲ್ ಬರುತ್ತಾರೆ ಎಂದು ಅವರು ನನಗೆ ಹೇಳಿದರು. ಅಷ್ಟರೊಳಗೆ ಬಿಭವ್ ಕೋಣೆಗೆ ನುಗ್ಗಿದರು. ಅರವಿಂದ್ ಜೀ ಅವರನನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ನಾನು ಅವರಲ್ಲಿ ಹೇಳಿದಾಗ, ಏನು ವಿಷಯ ಎಂದು ಕೇಳಿದ ಅವರು ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಲು ಶುರು ಮಾಡಿದರು. ನಾನು ಅವನನ್ನು ತಳ್ಳಲು ಪ್ರಯತ್ನಿಸಿದಾಗ ಅವನು ನನ್ನ ಕಾಲುಗಳನ್ನು ಹಿಡಿದು ನೆಲದ ಮೇಲೆ ಎಳೆದು ಹಾಕಿದ್ದಾನೆ. ನಾನು ನೆಲದ ಮೇಲೆ ಬಿದ್ದಾಗ ಅವನು ನನ್ನನ್ನು ಒದೆಯಲು ಪ್ರಾರಂಭಿಸಿದನು. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಸ್ವಾತಿ ಮಲಿವಾಲ್ ಹೇಳಿದರು.
#WATCH | “…Agar meri Rajya Sabha ki seat unhe chahiye thi, woh pyaar se maangte toh main jaan de deti, MP toh bohot choti baat hain… Ab chaahe duniya ki koi bhi shakti lag jaye main resign nahi karungi”…says AAP Rajya Sabha MP Swati Maliwal pic.twitter.com/2mYqoK5nYM
— ANI (@ANI) May 23, 2024
“ಯಾರೂ ನನಗೆ ಸಹಾಯ ಮಾಡಲು ಬರದಿರುವುದು ವಿಚಿತ್ರವಾಗಿದೆ. ನಾನು ಕಿರುಚುತ್ತಿದ್ದೆ” ಎಂದು ಸ್ವಾತಿ ಮಲಿವಾಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ನಿಮಗೆ ಥಳಿಸಲು ಬಿಭವ್ ಅವರಿಗೆ ನಿರ್ದೇಶಿಸಲಾಗಿತ್ತೇ? ಎಂಬ ಪ್ರಶ್ನೆಗೆ ಸ್ವಾತಿ ಮಲಿವಾಲ್ ಅವರು, “ಅವರು ಅವರಾಗಿಯೇ ಈ ರೀತಿ ವರ್ತಿಸಿದ್ದಾರೆಯೇ ಅಥವಾ ಹಾಗೆ ಮಾಡಲು ಸೂಚಿಸಲಾಗಿದೆಯೇ ಎಂಬುದು ತನಿಖೆಯ ವಿಷಯವಾಗಿದೆ. ನಾನು ತನಿಖೆಗೆ ಸಹಕರಿಸುತ್ತಿದ್ದೇನೆ” ಎಂದು ಹೇಳಿದರು.
“ನಾನು ಯಾರಿಗೂ ಯಾವುದೇ ಕ್ಲೀನ್ ಚಿಟ್ ನೀಡುತ್ತಿಲ್ಲ. ವಾಸ್ತವವೆಂದರೆ ನನ್ನ ಮೇಲೆ ಹಲ್ಲೆ ನಡೆದಿದೆ. ಆ ಹೊತ್ತಲ್ಲಿ ಅರವಿಂದ್ ಕೇಜ್ರಿವಾಲ್ ಅಲ್ಲಿದ್ದರು” ಎಂದು ಸಂಸದೆ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಜ್ರಿವಾಲ್ ಅವರ ಪೋಷಕರ ಹೇಳಿಕೆಯನ್ನು ದಾಖಲಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದರು. ಏಕೆಂದರೆ ಸ್ವಾತಿ ಮೇಲೆ ಹಲ್ಲೆ ನಡೆದಾಗ ಅವರೂ ಇದ್ದರು. ಆದರೆ ದೆಹಲಿ ಪೊಲೀಸರು ಇಂದು ಕೇಜ್ರಿವಾಲ್ ಅವರ ಪೋಷಕರ ಹೇಳಿಕೆಗಳನ್ನು ದಾಖಲಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
“ನಾನು ನನ್ನ ಪೋಷಕರು ಮತ್ತು ಹೆಂಡತಿಯೊಂದಿಗೆ ಪೊಲೀಸರಿಗಾಗಿ ಕಾಯುತ್ತಿದ್ದೇನೆ. ನಿನ್ನೆ ಪೊಲೀಸರು ನನ್ನ ಪೋಷಕರಿಗೆ ಕರೆ ಮಾಡಿ ವಿಚಾರಣೆಗೆ ಸಮಯ ಕೇಳಿದರು. ಆದರೆ ಅವರು ಬರುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ” ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಸಭಾ ಸ್ಥಾನವನ್ನು ತೆರವು ಮಾಡುವಂತೆ ಪಕ್ಷವು ಮಾಡಿದ ಯಾವುದೇ ಮನವಿಯಿಂದ ಎಎಪಿ ಜೊತೆಗಿನ ಭಿನ್ನಾಭಿಪ್ರಾಯ ಉದ್ಭವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಲಿವಾಲ್, “ನನಗೆ ವಿನಯದಿಂದ ಕೇಳಿದ್ದರೆ, ನಾನು ನನ್ನ ಪ್ರಾಣವನ್ನೇ ನೀಡುತ್ತಿದ್ದೆ. ಸಂಸದ ಸ್ಥಾನ ತುಂಬಾ ಚಿಕ್ಕದು ನನ್ನ ಸಂಪೂರ್ಣ ವೃತ್ತಿಜೀವನವನ್ನು ನೀವು ನೋಡಿದರೆ, ನಾನು 2006 ರಲ್ಲಿ ನನ್ನ ಎಂಜಿನಿಯರಿಂಗ್ ಕೆಲಸವನ್ನು ಬಿಟ್ಟು ಕೇಜ್ರಿವಾಲ್ ಜತೆ ಸೇರಿದೆ. ನಾನು ತಳಮಟ್ಟದಿಂದಲೇ ಕೆಲಸ ಮಾಡಿದ್ದೆ.
ಇದನ್ನೂ ಓದಿ: ಸ್ವಾತಿ ಮಲಿವಾಲ್ ಪ್ರಕರಣ: ಇಂದು ಕೇಜ್ರಿವಾಲ್ ಪೋಷಕರ ಹೇಳಿಕೆ ಪಡೆಯುವುದಿಲ್ಲ ಎಂದ ಪೊಲೀಸರು
ನಾನು ಯಾವುದೇ ಪೋಸ್ಟ್ ಇಲ್ಲದೆ ಕೆಲಸ ಮಾಡಬಹುದು. ಆದರೆ ಈಗ ನನ್ನನ್ನು ನಿರ್ದಯವಾಗಿ ಥಳಿಸಲಾಗಿದ್ದು, ಈಗ ನಾನು ನನ್ನ ರಾಜ್ಯಸಭಾ ಸ್ಥಾನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಾನು ಅತ್ಯಂತ ಕಿರಿಯ ಮಹಿಳಾ ಸಂಸದೆ. ನಾನು ತುಂಬಾ ಕಷ್ಟಪಟ್ಟು ದುಡಿಯುತ್ತೇನೆ ಮತ್ತು ಆದರ್ಶ ಸಂಸದೀಯ ಪಟು ಆಗುತ್ತೇನೆ ಎಂದು ಮಲಿವಾಲ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Thu, 23 May 24