ದೆಹಲಿ ನಗರ ಪಾಲಿಕೆ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP)ಭರ್ಜರಿ ಜಯಸಾಧಿಸಿದೆ. ಒಟ್ಟು 5 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಪ್ 4 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲಾಗದೆ ತೀವ್ರ ಮುಖಭಂಗ ಅನುಭವಿಸಿದೆ. ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿಗೆ ಇದೊಂದು ಆಘಾತವೇ ಆಗಿದೆ.
ಭಾನುವಾರ ದೆಹಲಿ ನಗರ ಪಾಲಿಕೆಯ ಐದು ವಾರ್ಡ್ಗಳಿಗೆ ಚುನಾವಣೆ ನಡೆದಿತ್ತು. ಈ ಐದರಲ್ಲಿ ಆಪ್-ಕಾಂಗ್ರೆಸ್ 4-1 ಸೀಟುಗಳನ್ನು ಹಂಚಿಕೊಂಡಿವೆ. ವಾರ್ಡ್ ನಂ.32 ಎನ್, ವಾರ್ಡ್ ನಂ.62 ಎನ್, ವಾರ್ಡ್ ನಂ.02 ಇ, ವಾರ್ಡ್ ನಂ.08-ಇ ಮತ್ತು ವಾರ್ಡ್ ನಂ.41-ಇ ಗಳಿಗೆ ಫೆಬ್ರವರಿ 28ರಂದು ಚುನಾವಣೆ ನಡೆದು ಶೇ.50ಕ್ಕಿಂತಲೂ ಹೆಚ್ಚು ಮತದಾನ ನಡೆದಿತ್ತು. ಉಪಚುನಾವಣೆಗೂ ಮೊದಲು ಈ ಐದು ವಾರ್ಡ್ಗಳಲ್ಲಿ ನಾಲ್ಕು ವಾರ್ಡ್ಗಳು ಆಪ್ ಕೈಯಲ್ಲಿದ್ದವು, ಒಂದು ವಾರ್ಡ್ ಬಿಜೆಪಿ ಕೈಯಲ್ಲಿತ್ತು. ಆದರೆ ಈಗ ಬಿಜೆಪಿಗೆ ಒಂದೂ ವಾರ್ಡ್ ಕೂಡ ಸಿಗಲಿಲ್ಲ.
ಆಪ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, 5ವಾರ್ಡ್ಗಳಲ್ಲಿ, 4 ವಾರ್ಡ್ಗಳನ್ನು ಗೆದ್ದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸುತ್ತೇನೆ. ದೆಹಲಿ ಜನರು ಬಿಜೆಪಿ ಆಡಳಿತವನ್ನು ಯಾವ ಕಾರಣಕ್ಕೂ ಇಷ್ಟಪಡುತ್ತಿಲ್ಲ. ಬರುವ 2022ರಲ್ಲಿ ದೆಹಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದ್ದು, ಈ ಉಪಚುನಾವಣೆ ಅದರ ಪ್ರತಿಬಿಂಬವಾಗಿದೆ. ಇದೀಗ ಆಪ್ ನಾಲ್ಕು ವಾರ್ಡ್ ಗೆದ್ದು, ಬಿಜೆಪಿ ಸಂಪೂರ್ಣ ಸೋತಿದೆ. ಹಾಗೇ ಮುಂದಿನ ವರ್ಷ 272 ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಯಲ್ಲೂ ಇದೇ ಮರುಕಳಿಸಲಿದೆ. ಬಿಜೆಪಿ ಸಂಪೂರ್ಣವಾಗಿ ಸೋಲುಣ್ಣಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಮೇಲುಗೈ, ಆಪ್ ಗಮನಾರ್ಹ ಸಾಧನೆ