ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಮೇಲುಗೈ, ಆಪ್ ಗಮನಾರ್ಹ ಸಾಧನೆ

Gujarat local body election results 2021: ಚುನಾವಣಾ ಸೋಲಿನ ಹೊಣೆ ಹೊತ್ತಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚವ್ಡಾ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಗೆಲುವಿಗೆ ಕಾರಣರಾದ ಮತದಾರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಗುಜರಾತ್ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

  • TV9 Web Team
  • Published On - 21:01 PM, 2 Mar 2021
ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಮೇಲುಗೈ, ಆಪ್ ಗಮನಾರ್ಹ ಸಾಧನೆ
ಬಿಜೆಪಿ ಧ್ವಜ

ದೆಹಲಿ: ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗು ಬೀರಿದೆ. ಗುಜರಾತ್​ನ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಮತ್ತು ನಗರ ಪಾಲಿಕೆಗಳ ಒಟ್ಟು 8,474 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 2,085 ಸ್ಥಾನಗಳಲ್ಲಿ ಜಯಗಳಿಸಿದೆ. ಇದೇ ಮೊದಲ ಬಾರಿಗೆ ಗುಜರಾತ್ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಿದ್ದ ಆಮ್​ಆದ್ಮಿ ಪಕ್ಷವೂ ಗಮನಾರ್ಹ ಸಾಧನೆ ಮಾಡಿದ್ದು, 15 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್​ಗೆ ಈ ಚುನಾವಣೆಯೂ ಅಷ್ಟೇನು ಉತ್ತಮ ಫಲ ನೀಡಿಲ್ಲ. ಕೆಲ ಕ್ಷೇತ್ರಗಳ ಫಲಿತಾಶ ಇನ್ನೂ ಘೋಷಣೆಯಾಗಬೇಕಿದೆ.

31 ಜಿಲ್ಲಾ ಪಂಚಾಯತ್​ಗಳ ಪೈಕಿ 30 ಜಿಲ್ಲಾ ಪಂಚಾಯತ್​ಗಳಲ್ಲಿ ಬಿಜೆಪಿ ಜಯ ಗಳಿಸಿದೆ. 231 ತಾಲೂಕಾ ಪಂಚಾಯತ್​ಗಳ ಪೈಕಿ 197ರಲ್ಲಿ ಕಮಲ ಪಕ್ಷವು ಗೆದ್ದಿದೆ. ಕಾಂಗ್ರೆಸ್ 14 ತಾಲೂಕಾ ಪಂಚಾಯತ್​ಗಳಲ್ಲಿ​ ಗೆಲುವು ಸಾಧಿಸಿದ್ದು, ಗ್ರಾಮೀಣ ಭಾಗದಲ್ಲೊಂದೇ ಅಲ್ಲದೇ, ನಗರ ಪಾಲಿಕೆಗಳಲ್ಲೂ ಬಿಜೆಪಿಗೆ ಸಿಹಿ ದೊರೆತಿದೆ. 81 ನಗರ ಪಾಲಿಕೆಗಳಲ್ಲಿ 77ರಲ್ಲಿ ಬಿಜೆಪಿ ಜಯಗಳಿಸಿದ್ದು, 1 ಕಾಂಗ್ರೆಸ್​ ತೆಕ್ಕೆಗೆ ಸೇರಿದೆ. ಆಮ್​ಆದ್ಮಿ 1 ನಗರ ಪಾಲಿಕೆಯಲ್ಲಿ ಮುನ್ನಡೆಯಲ್ಲಿದ್ದು ಇನ್ನೂ ಒಂದು ಪಾಲಿಕೆಯ ಫಲಿತಾಂಶ ಈವರೆಗೂ ಸ್ಪಷ್ಟ ಚಿತ್ರಣ ಬಂದಿಲ್ಲ.

ಖಾತೆ ತೆರೆದ ಎಐಎಂಐಎಂ
ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸಹ ತನ್ನ ಅಭ್ಯರ್ಥಿಗಳನ್ನು ಕೆಲ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಗೋಧ್ರಾ ನಗರ ಪಾಲಿಕೆಯ 6ನೇ ವಾರ್ಡ್​ನಲ್ಲಿ ಎಐಎಂಐಎಂ ಅಭ್ಯರ್ಥಿ ಜಯಗಳಿಸಿದ್ದು, ಪ್ರಧಾನಿ ನರೇಂದ್ರ ಮೊದಿ ತವರಲ್ಲಿ ಅಸಾದುದ್ದೀನ್ ಓವೈಸಿ ಖಾತೆ ತೆರೆಯಲು ಸಫಲರಾಗಿದ್ದಾರೆ. ಮೂರು ಸ್ಥಳೀಯ ಪಾಲಿಕೆಗಳ 8,474 ಸ್ಥಾನಗಳ ಪೈಕಿ 8,235 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಇನ್ನುಳಿದ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಚುನಾವಣಾ ಸೋಲಿನ ಹೊಣೆ ಹೊತ್ತಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚವ್ಡಾ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಗೆಲುವಿಗೆ ಕಾರಣರಾದ ಮತದಾರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಗುಜರಾತ್ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: Gujarat Civic Poll Results 2021: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 294 ಸೀಟು ಗೆದ್ದ ಬಿಜೆಪಿ, ಸಂಭ್ರಮಾಚರಣೆ ಶುರು

ಇದನ್ನೂ ಓದಿ: ಪ್ರಧಾನಿ ಮೋದಿ ನಾಡಲ್ಲಿ ಆಮ್ ​ಆದ್ಮಿ ಪಕ್ಷದ ಗೆಲುವು; ಗುಜರಾತ್ ರಾಜಕೀಯದ ಒಳಗುಟ್ಟು ಉಸುರುವುದೇನು?