ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತಮ್ಮದೊಂದು ಅಭಿಪ್ರಾಯ ವ್ಯಕ್ತಪಡಿಸಿ, ಸಿಕ್ಕಾಪಟೆ ಟೀಕೆಗೆ ಗುರಿಯಾಗಿದ್ದಾರೆ. ಯೋಗವನ್ನು ಮಾಡುವಾಗ ಓಂ ಎಂದು ಉಚ್ಛರಿಸುವ ಬಗ್ಗೆ ಮಾತನಾಡಿದ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು, ‘ಓಂ’ ಶಬ್ದ ಉಚ್ಚರಿಸುವ ಮೂಲಕ ಯೋಗಾಭ್ಯಾಸ ಮಾಡಿದರೆ ಯೋಗದ ಮಹತ್ವ ಹೆಚ್ಚಾಗುವುದಿಲ್ಲ..‘ಅಲ್ಲಾ’ ಎಂದು ಉಚ್ಚರಿಸುತ್ತ ಯೋಗ ಮಾಡಿದಾಕ್ಷಣ ಅದರ ಶಕ್ತಿ ಏನೂ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದೇ ಈ ವಿವಾದಕ್ಕೆ ಕಾರಣ.
ಶತಮಾನಗಳಿಂದಲೂ ಯೋಗಾಭ್ಯಾಸ ಮಾಡುವಾಗ ಓಂ ಎಂದು ದೀರ್ಘಸ್ವರ ಉಚ್ಚಾರ ಮಾಡಲಾಗುತ್ತದೆ. ಅದನ್ನೇ ಈಗ ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ. ಇವರ ಟ್ವೀಟ್ಗೆ ಯೋಗ ಗುರು ಬಾಬಾ ರಾಮ್ ದೇವ್ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ಓಂ ಶಬ್ದ ಪಠಣ ಯಾವುದೇ ಧರ್ಮ, ಜಾತಿಯ ಪ್ರತಿಬಿಂಬಕವಲ್ಲ. ಎಲ್ಲ ಧರ್ಮ, ಜಾತಿ-ಮತದವರಿಗೂ ದೇವರು ಒಬ್ಬನೇ. ಅಲ್ಲಾ..ಈಶ್ವರ, ಪರಮಾತ್ಮ ಎಲ್ಲರೂ ಒಂದೇ. ದೇವರನ್ನು ನಂಬುವವರಿಗೆ ಓಂ ಶಬ್ದ ಯಾವ ಕಾರಣಕ್ಕೂ ನಿಷೇಧವಲ್ಲ. ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಧೈರ್ಯವಾಗಿ ಓಂ ಪಠಣ ಮಾಡುತ್ತಾರೆ ಎಂದಿದ್ದಾರೆ.
ಸಿಂಘ್ವಿಯಿಂದ ಮತ್ತೊಂದು ಟ್ವೀಟ್
ತಮ್ಮ ಟ್ವೀಟ್ ವಿವಾದ ಸೃಷ್ಟಿಸುತ್ತಿದ್ದಂತೆ ಅಭಿಷೇಕ್ ಮನು ಸಿಂಘ್ವಿ ಮತ್ತೊಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಶ್ರೀರಾಮನ ಹೆಸರಲ್ಲಿ ಕೋಟ್ಯಂತರ ಭಕ್ತರನ್ನು ಲೂಟಿ ಮಾಡುತ್ತಿರುವವರು ಇದೀಗ ನನ್ನ ನಂಬಿಕೆಯನ್ನು ಪ್ರಶ್ನಿಸುವ ಮೂಲಕ ತಮ್ಮ ಪಾಪವನ್ನು ಅಳಿಸಿಕೊಳ್ಳಲು ನೋಡುತ್ತಿದ್ದಾರೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಯೋಗ ಆಚರಣೆಯಲ್ಲಿದೆ..ಇದು ನಮ್ಮ ಪರಂಪರೆ ಎಂಬುದು ನನಗೆ ಗೊತ್ತಿದೆ. ನನ್ನ ನಂಬಿಕೆಯ ಬಗ್ಗೆ ಯಾವುದೇ ಸೋ ಕಾಲ್ಡ್ ರಾಷ್ಟ್ರೀಯವಾದಿಗಳಿಂದ ಪ್ರಮಾಣ ಪತ್ರ ಬೇಕಾಗಿಲ್ಲ. ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಹೇಳಿದ್ದಾರೆ.
श्री राम के नाम पर करोड़ों भक्तों के चंदे की लूट मचाने वाले लोग मेरी आस्था पर सवाल उठा अपनी झेंप मिटा रहे हैं।
जान लें कि योग सनातन समय से भारत के कण-कण में है। न तो योग की विद्या को और न ही मेरी आस्था को किसी धूर्त राष्ट्रवादी के सर्टिफ़िकेट की ज़रूरत है। दुष्प्रचार से बचें। https://t.co/NDIpA9ryLR
— Abhishek Singhvi (@DrAMSinghvi) June 21, 2021
ಈ ವರ್ಷ ನಡೆಯುತ್ತಿರುವುದು ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಜಗತ್ತಿನ ಹಲವು ದೇಶಗಳಲ್ಲಿ ಅನೇಕರು ಇಂದು ಯೋಗಾಭ್ಯಾಸವನ್ನು ಒಂದು ಹಬ್ಬದಂತೆ ಆಚರಿಸಿದ್ದಾರೆ. ಸೂರ್ಯನಮಸ್ಕಾರ, ಪ್ರಾಣಾಯಾಮಗಳನ್ನು ಮಾಡಿದ್ದಾರೆ. ಹೀಗೆ ಯೋಗ ಮಾಡುವಾಗ ಸರ್ವೇ ಸಾಮಾನ್ಯವಾಗಿ ಓಂ ಎಂದೇ ಹೇಳಲಾಗುತ್ತದೆ. ಅಷ್ಟಕ್ಕೂ ಈ ಯೋಗ ಎಂಬುದು ಭಾರತ ಜಗತ್ತಿಗೆ ನೀಡಿದ ಅತ್ಯದ್ಭುತ ಕೊಡುಗೇ ಎಂದೇ ಹೇಳಲಾಗುತ್ತದೆ. ಆದರೆ ಅದರಲ್ಲಿ ಓಂ ಶಬ್ದ ಉಚ್ಚರಿಸುವ ಬಗ್ಗೆ ಮಾತನಾಡಿದ ಅಭಿಷೇಕ್ ಮನು ಸಿಂಘ್ವಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ, ಮಗ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ; ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ: ಸಿದ್ದರಾಮಯ್ಯ