ಬೆಂಗಳೂರು: ದೇಶದ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ (Electricity) ಕಲ್ಪಿಸಿಕೊಡುವ ನಿಟ್ಟಿನಲ್ಲಿ ದೇಶವು ಮಹತ್ತರ ಸಾಧನೆ ಮಾಡಿದೆ. ದೇಶದ ಬಡ ಕುಟುಂಬಗಳ ವಿದ್ಯುತ್ ಲಭ್ಯತೆ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ‘ಒಆರ್ಎಫ್ ಆನ್ಲೈನ್ (ORF Online)’ ಪ್ರಾಧ್ಯಾಪಕಿ, ಅರ್ಥಶಾಸ್ತ್ರಜ್ಞೆ ಪ್ರೊ. ಶಮಿಕಾ ರವಿ (Prof. Shamika Ravi) ಅಂಕಿಅಂಶ ಸಹಿತ ಟ್ವೀಟ್ ಮಾಡಿದ್ದಾರೆ. ಭಾರತದ ನೈಜ ಆರ್ಥಿಕತೆ ಕಳೆದ 5 ವರ್ಷಗಳಲ್ಲಿ ಕ್ರಾಂತಿ ಮಾಡಿದೆ. ಬಡ ಜನರ ವಿದ್ಯುತ್ ಲಭ್ಯತೆ ಪ್ರಮಾಣ ಶೇ 53ರಿಂದ 86ಕ್ಕೆ ತಲುಪಿದೆ. 19 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಶೇ 95ಕ್ಕೆ ತಲುಪಿದೆ. ಬಡ ರಾಜ್ಯಗಳಲ್ಲೇ ಹೆಚ್ಚಿನ ಪ್ರಗತಿಯಾಗಿದೆ ಎಂದು ಅವರು ಅಂಕಿಅಂಶದ ಗ್ರಾಫ್ ಸಹಿತ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ ವರದಿಯಿಂದ ಕಲೆಹಾಕಿದ ಅಂಕಿಅಂಶಗಳ ಆಧಾರದಲ್ಲಿ ಶಮಿಕಾ ರವಿ ಗ್ರಾಫ್ ಸಿದ್ಧಪಡಿಸಿದ್ದಾರೆ.
India’s real economy underwent a revolution within mere 5 years. Access to electricity among the poorest population went up significantly – from 53% to 86% – and is >95% across 19 states & UTs! The biggest gains were made in the poorest states. #KnowIndia pic.twitter.com/nphx1g8yMI
— Prof. Shamika Ravi (@ShamikaRavi) January 16, 2023
ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ದೊರೆತ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಬಡ ಕುಟುಂಬಗಳ ವಿದ್ಯುತ್ ಲಭ್ಯತೆ ಪ್ರಮಾಣ ಶೇ 91ರಿಂದ 95ಕ್ಕೆ ತಲುಪಿದೆ. ದೆಹಲಿ, ಪಂಜಾಬ್, ಹರಿಯಾಣ, ಕೇರಳ ಮತ್ತು ತೆಲಂಗಾಣಗಳಲ್ಲಿ ಶೇ 98ಕ್ಕೆ ತಲುಪಿದೆ. ಆಂಧ್ರ ಪ್ರದೇಶದಲ್ಲಿ ಶೇ 97ಕ್ಕೆ ತಲುಪಿದ್ದರೆ ತಮಿಳುನಾಡಿನಲ್ಲಿ ಶೇ 96ಕ್ಕೆ ತಲುಪಿದೆ.
ಜಾರ್ಖಂಡ್, ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕ್ರಮವಾಗಿ ಶೇ 77, 69 ಮತ್ತು 63 ಆಗಿದೆ.
ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಗೋವಾದಲ್ಲಿ ಶೇ 100 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಿಕ್ಕಿಂ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಶೇ 98 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದ್ವೀಪದಲ್ಲಿ ಶೇ 100 ಮನೆಗಳಿಗೆ ಸಂಪರ್ಕ ದೊರೆತಿದೆ. ಉಳಿದಂತೆ ಪುದುಚೇರಿ, ಲಡಾಖ್, ಚಂಡೀಗಢಗಳಲ್ಲಿ ಶೇ 99, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 97, ಅಂಡಮಾನ್, ನಿಕೋಬಾರ್ ದ್ವೀಪಸಮೂಹಗಳಲ್ಲಿ ಶೇ 88ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.