ಬೇತಮಂಗಲ ನೀರು ಸರಬರಾಜು ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಡಿತ: ಕೆಜಿಎಫ್ಗೆ ನೀರು ಸರಬರಾಜು ಅಸ್ತವ್ಯಸ್ತ
ಕೆಜಿಎಫ್ ನಗರಸಭೆಯು ಬಿಲ್ ಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂ ಹೇಳಿದೆ.
ಕೋಲಾರ: ಬೇತಮಂಗಲ ನೀರು ಸರಬರಾಜು (Bethamangala) ಕೇಂದ್ರದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ (BESCOM) ಕಡಿತಗೊಳಿಸಿದೆ. ನೀರು ಸರಬರಾಜು ಘಟಕವು ಕಳೆದ 4 ತಿಂಗಳಿನಿಂದ ₹ 38 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಕೆಜಿಎಫ್ ನಗರಸಭೆಯು ಬಿಲ್ ಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂ ಹೇಳಿದೆ. ಈ ಘಟಕವು ಕೆಜಿಎಫ್ ನಗರ ಮತ್ತು ಬೇತಮಂಗಲ ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿತ್ತು ಎಂದು ನೀರು ಸರಬರಾಜು ಕೇಂದ್ರದ ಸಹಾಯಕ ಇಂಜಿನಿಯರ್ ರಶ್ಮಿ ‘ಟಿವಿ9’ಗೆ ಮಾಹಿತಿ ನೀಡಿದರು.
ಜಗಳೂರು: ವಿದ್ಯುತ್ ಬಿಲ್ ಪಾವತಿಸದ 22 ಗ್ರಾಮ ಪಂಚಾಯಿತಿ
ಚಿತ್ರದುರ್ಗ: ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಪಾವತಿಸಿಲ್ಲ. ಬಾಕಿ ಮೊತ್ತವು ₹ 2.91 ಕೋಟಿ ದಾಟಿದ್ದು, ಬಿಲ್ ಕಟ್ಟಿಸಿಕೊಳ್ಳುವುದು ಹೇಗೆ ಎಂದು ಬೆಸ್ಕಾಂ ಅಧಿಕಾರಿಗಳು ಚಿಂತೆ ಮಾಡುತ್ತಿದ್ದಾರೆ. ಕುಡಿಯುವ ನೀರು ಹಾಗೂ ಬೀದಿದೀಪಗಳಿಗೆ ಮೀಟರ್ ಅಳವಡಿಸಲಾಗಿದೆ. ಆದರೆ ಬಿಲ್ ಪಾವತಿಯಾಗುತ್ತಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಜನರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಬೆಸ್ಕಾಂ ಸಹ ಈವರೆಗೆ ಸಂಪರ್ಕ ಕಡಿತ ಮಾಡಿಲ್ಲ.
ಸಂಪರ್ಕ ಪುನರ್ಸ್ಥಾಪನೆ ಇನ್ನು ಕಷ್ಟ
ಸಾಮಾನ್ಯ ಗ್ರಾಹಕರು ಸತತ 3 ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ಬೆಸ್ಕಾಂ ಸಿಬ್ಬಂದಿ ಸಂಪರ್ಕ ಕಡಿತಗೊಳಿಸುತ್ತಾರೆ. ಅಷ್ಟೇ ಅಲ್ಲ, ಸಂಪರ್ಕದ ಒಪ್ಪಂದವೂ ರದ್ದಾಗುತ್ತವೆ. ಇಂಥ ಮನೆಗಳು ಮತ್ತೆ ವಿದ್ಯುತ್ ಸಂಪರ್ಕ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಬೆಸ್ಕಾಂ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು. ಇಷ್ಟು ದಿನ ಬೆಸ್ಕಾಂ ಸಿಬ್ಬಂದಿ ಕೇವಲ ಮನೆಯ ಫ್ಯೂಸ್ ತೆಗೆದು ಎಚ್ಚರಿಕೆ ನೀಡುತ್ತಿದ್ದರು. ವಿದ್ಯುತ್ ಬಿಲ್ ಪಾವತಿಸಿದ ನಂತರ ಮತ್ತೆ ಫ್ಯೂಸ್ ಹಾಕಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸುತ್ತಿದ್ದರು. ಆದರೆ ಇದೀಗ ನಿಯಮ ಬದಲಾವಣೆಯಾಗಿವೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕೋಲಾರದ ಸರ್ಕಾರಿ ಕಾಲೇಜು ಆವರಣದಲ್ಲಿ ಪಿಂಕ್ ರೂಂಗೆ ಚಾಲನೆ ಕೊಟ್ಟ ಹೃದಯ ಫೌಂಡೇಶನ್
ಬೆಸ್ಕಾಂ ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದಲ್ಲಿ, ವಿದ್ಯುತ್ ಸಂಪರ್ಕ ಒಪ್ಪಂದವನ್ನು ರದ್ದುಗೊಳಿಸಲು ಬೆಸ್ಕಾಂ ಕ್ರಮ ಕೈಗೊಳ್ಳುತ್ತದೆ. ಒಪ್ಪಂದ ರದ್ದತಿಯ ನಂತರ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ. pic.twitter.com/1KndWfqwsr
— Managing Director, BESCOM (@mdbescom) November 11, 2022
ಆನ್ಲೈನ್ ಪಾವತಿ ಸುಲಲಿತ
ಬೆಸ್ಕಾಂ ಬಿಲ್ ಆನ್ಲೈನ್ ಪಾವತಿಗೆ ಬೆಸ್ಕಾಂ ಆ್ಯಪ್, ಫೋನ್ಪೆ, ಗೂಗಲ್ಪೆ ಸೇರಿದಂತೆ ಹಲವು ಡಿಜಿಟಲ್ ವೇದಿಕೆಗಳಲ್ಲಿ ಅವಕಾಶವಿದೆ. ಆದರೆ ಕೆಲವೊಮ್ಮೆ ಬಿಲ್ ಮೊತ್ತವು ಸರಿಯಾಗಿ ಅಪ್ಡೇಟ್ ಆಗದೆ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಬೆಸ್ಕಾಂ ಇದೀಗ ಸರಿಪಡಿಸಿದೆ. ಇನ್ನು ಮುಂದೆ ಎಂದಿನಂತೆಯೇ ಆನ್ಲೈನ್ನಲ್ಲಿ ಬಿಲ್ ಪಾವತಿಸಬಹುದು ಎಂದು ಬೆಸ್ಕಾಂ ತಿಳಿಸಿದೆ.
ಡಿಜಿಟಲ್ ಮೀಟರ್ ಅಳವಡಿಕೆ
ಬೆಂಗಳೂರು ನಗರದಲ್ಲಿ ಬೆಸ್ಕಾಂ ಮನೆಗಳಿಗೆ ಹೊಸ ಡಿಜಿಟಲ್ ಮೀಟರ್ ಅಳವಡಿಸುತ್ತಿದೆ. ಮೆಕ್ಯಾನಿಕಲ್ ಮೀಟರ್ಗಳ ಬಲದಾಗಿ ಡಿಜಿಟಲ್ ಮೀಟರ್ಗಳು ಇನ್ನು ಮುಂದೆ ಕಾರ್ಯನಿರ್ವಹಿಸಲಿವೆ. ಇದನ್ನು ಬೆಸ್ಕಾಂ ಉಚಿತವಾಗಿ ಅಳವಡಿಸಿಕೊಡುತ್ತಿದ್ದು, ಗ್ರಾಹಕರು ಹಣ ಪಾವತಿಸಬೇಕಿಲ್ಲ.
ಕೋಲಾರ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Thu, 1 December 22