ಹೈದರಾಬಾದ್: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಹಳ್ಳಿಯೊಂದರ ಸಮೀಪ ಭಾನುವಾರ ನಸುಕಿನ 3 ಗಂಟೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರು ಶಿವಾಜಿನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಚಾಲಕ ಮೃತಪಟ್ಟಿದ್ದಾರೆ. ಎಸ್ಐ ಸೇರಿದಂತೆ ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಪ್ರಕರಣವೊಂದರ ತನಿಖೆಗಾಗಿ ಈ ತಂಡವು ತೆರಳುತ್ತಿದ್ದಾಗ ಚಿತ್ತೂರು ಜಿಲ್ಲೆ ಪೂತಲಪಟ್ಟು ತಾಲ್ಲೂಕಿನ ಹಳ್ಳಿಯೊಂದರಲ್ಲಿ ರಸ್ತೆ ವಿಭಜಕಕ್ಕೆ ಇನ್ನೋವಾ ಕಾರು ಡಿಕ್ಕಿಯಾಯಿತು.
ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಅವಿನಾಶ್ (29) ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ರೋಲವಾಡಿ ಗ್ರಾಮದವರು. ಕಾನ್ಸ್ಟೆಬಲ್ ಅನಿಲ್ ಮುಲಿಕ್ (26) ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಳಕೆರೆ ಗ್ರಾಮದವರು. ಖಾಸಗಿ ಕ್ಯಾಬ್ ಚಾಲಕ ಜೋಸೆಫ್ ಸಹ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್ಐ ದೀಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೋರ್ವ ಗಾಯಾಳು ಕಾನ್ಸ್ಟೆಬಲ್ ಶರಣಬಸವ ಅವರನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಮಾಹಿತಿ ಲಭ್ಯವಾದ ತಕ್ಷಣ ಪುಲಕೇಶಿನಗರ ಎಸಿಪಿ ಅಬ್ದುಲ್ಲಾ ಮತ್ತು ಶಿವಾಜಿನಗರ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ
ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವ ವಿಷಯ ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ‘ಆಂಧ್ರ ಪ್ರದೇಶದ ಚಿತ್ತೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ತನಿಖೆಗೆ ತೆರಳಿದ್ದ ಶಿವಾಜಿನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಈ ಕುರಿತು ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವುದು ಅತ್ಯಂತ ನೋವು ತಂದಿದೆ’ ಎಂದು ಅವರು ಹೇಳಿದ್ದಾರೆ.
ಪ್ರವೀಣ್ ಸೂದ್ ಸಂತಾಪ
ರಸ್ತೆ ಅಪಘಾತದಲ್ಲಿ ಪಿಎಸ್ಐ ಸೇರಿದಂತೆ ಮೂವರ ದುರ್ಮರಣಕ್ಕೆ ಟ್ವೀಟ್ ಮೂಲಕ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸಂತಾಪ ಸೂಚಿಸಿದ್ದಾರೆ. ಕರ್ತವ್ಯದ ಮೇಲೆ ತೆರಳುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಮೃತಪಟ್ಟ ಪೊಲೀಸ್ ಸಿಬ್ಬಂದಿ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬದ ಜೊತೆ ಇಲಾಖೆ ಇರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Published On - 7:38 am, Sun, 24 July 22