ಮಧ್ಯಪ್ರದೇಶ; ನರ್ಮದಾ ನದಿಗೆ ಉರುಳಿದ ಮಹಾರಾಷ್ಟ್ರದ ಬಸ್, 13 ಮಂದಿ ಸಾವು

ಮಧ್ಯಪ್ರದೇಶದ ಧರ್ ಎಂಬಲ್ಲಿ ನರ್ಮದಾ ನದಿಗೆ ಉರುಳಿ, 13 ಮಂದಿ ಮೃತಪಟ್ಟ ಘಟನೆ ನಡೆದಿದೆ.

ಮಧ್ಯಪ್ರದೇಶ; ನರ್ಮದಾ ನದಿಗೆ ಉರುಳಿದ ಮಹಾರಾಷ್ಟ್ರದ ಬಸ್, 13 ಮಂದಿ ಸಾವು
ನದಿಗೆ ಬಿದ್ದ ಬಸ್ ಮೇಲೆತ್ತಲು ಪರಿಹಾರ ತಂಡಗಳ ಪ್ರಯತ್ನ
Edited By:

Updated on: Jul 18, 2022 | 3:06 PM

ಭೂಪಾಲ್: ಮಹಾರಾಷ್ಟ್ರ ಸರ್ಕಾರದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸು (Maharashtra Roadways Bus) ಮಧ್ಯಪ್ರದೇಶದ ಧರ್ ಎಂಬಲ್ಲಿ ನರ್ಮದಾ ನದಿಗೆ (Narmada River) ಉರುಳಿ, 13 ಮಂದಿ ಮೃತಪಟ್ಟ ಘಟನೆ ನಡೆದಿದೆ. ಗುಜರಾತ್​ನ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ನರ್ಮದಾ ನದಿ ಉಕ್ಕಿ ಹರಿಯುತ್ತಿತ್ತು. ಅಪಘಾತಕ್ಕೆ ನಿಖರ ಕಾರಣ ಮತ್ತು ಗಾಯಾಳುಗಳ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಬಸ್ಸಿನಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ನರ್ಮದಾ ನದಿಯ ಸೇತುವೆ ಮೇಲೆ ಬಸ್ ಸಂಚರಿಸುತ್ತಿದ್ದಾಗ ನದಿಗೆ ಉರುಳಿತು. ಸುಮಾರು 10 ಅಡಿ ಎತ್ತರದಿಂದ ಬಸ್ಸು ನದಿಗೆ ಬಿದ್ದಿದೆ. ನದಿಯಲ್ಲಿ ಪ್ರವಾಹದ ಸೆಳೆತ ಹೆಚ್ಚಾಗಿದ್ದ ಕಾರಣ 9 ಶವಗಳು ಕೊಚ್ಚಿ ಹೋಗಿವೆ. ಧಮ್​ನೊದ್ ಪೊಲೀಸ್​ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು.

‘ಅಪಘಾತದಲ್ಲಿ ಮೃತಪಟ್ಟಿರುವವರ ನಿಖರ ಸಂಖ್ಯೆ ನಮಗೆ ತಿಳಿದಿಲ್ಲ. ಬಸ್ಸು ಪೂರ್ಣ ಪ್ರಮಾಣದಲ್ಲಿ ನದಿಯಲ್ಲಿ ಮುಳುಗಿತ್ತು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೆಳೆತ ತೀವ್ರವಾಗಿದೆ. ಬಹುತೇಕ ಎಲ್ಲರೂ ಮೃತಪಟ್ಟಿರಬಹುದು’ ಎಂಬ ಪೊಲೀಸ್ ಅಧಿಕಾರಿ ರಾಜ್​ಕುಮಾರ್ ಯಾದವ್​ ಅವರ ಹೇಳಿಕೆಯನ್ನು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಈ ಬಸ್ಸು ಮಹಾರಾಷ್ಟ್ರದ ಇಂದೋರ್​ನಿಂದ ಪುಣೆಗೆ ತೆರಳುತ್ತಿತ್ತು. ಈ ವೇಳೆ ಸೇತುವೆಯ ತಡೆಗೋಡೆಗೆ ಗುದ್ದಿ ನದಿಗೆ ಉರುಳಿತು. ಬಸ್ಸನ್ನು ಮೇಲೆತ್ತಲು ಕ್ರೇನ್​ ಸೇರಿದಂತೆ ಅಗತ್ಯ ಯಂತ್ರೋಪಕರಣಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ಧಾವಿಸಿದೆ. ಸ್ಥಳೀಯ ಮೀನುಗಾರರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಇಂದೋರ್ ಮತ್ತು ಧರ್​ ನಗರಗಳಿಂದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಇಂದೋರ್ ಮತ್ತು ಧರ್​ ನಗರಗಳಿಂದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಸ್ಸಿನಲ್ಲಿ ಸುಮಾರು 60 ಪ್ರಯಾಣಿಕರು ಇದ್ದರು ಎಂದು ಹೇಳಲಾಗುತ್ತಿದೆ. ನಿಖರ ವಿವರಗಳು ಲಭ್ಯವಾಗಿಲ್ಲ.

‘ಪರಿಹಾರ ಕಾರ್ಯಾಚರಣೆಗಾಗಿ ಜಿಲ್ಲಾಡಳಿತದ ತಂಡವೊಂದು ಸ್ಥಳಕ್ಕೆ ಧಾವಿಸಿದೆ. ಬಸ್ಸನ್ನು ಈಗಾಗಲೇ ಮೇಲೆತ್ತಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.

Published On - 11:51 am, Mon, 18 July 22