ನಾಗಪುರ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ (Accident in Maharashtra) ಬುಧವಾರ ಸಂಜೆ ಜನರನ್ನು ಕೊಂಡೊಯ್ಯುತ್ತಿದ್ದ ವ್ಯಾನ್ ಒಂದು ಆಳದ ಕಮರಿಗೆ ಉರುಳಿ ಬಿದ್ದ ಕಾರಣ ನಾಲ್ವರು ಮೃತಪಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಾಳುಗಳು ಅಕೋಲ ಜಿಲ್ಲೆಯ ಅಕೊಟ್ ಗ್ರಾಮದವರು. ಸುಸುರ್ದಾ ಗ್ರಾಮ ವಾರದ ಸಂತೆಯಲ್ಲಿ ತರಕಾರಿ ಮಾರಲು ಹೋಗಿದ್ದ ಇವರು ಮನೆಗಳಿಗೆ ಪಿಕಪ್ ವ್ಯಾನ್ನಲ್ಲಿ ಹಿಂದಿರುಗುತ್ತಿದ್ದರು.
ಮೇಲ್ಘಾಟ್ ಪ್ರದೇಶದ ರಾಣಿಗಾವ್ ಎಂಬಲ್ಲಿ ವಾಹನವು ರಾತ್ರಿ 7 ಗಂಟೆ ಸುಮಾರಿಗೆ ವಾಹನವು ಕಮರಿಗೆ ಉರುಳಿತು ಎಂದು ಪೊಲೀಸರು ಹೇಳಿದ್ದಾರೆ. ಗಾಯಾಳುಗಳನ್ನು ಅಕೋಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಅಪಘಾತ, ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲು
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಮುಗಿಸಿ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದು ರಾಹುಲ್ ಗಾಂಧಿ ಭದ್ರತೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಬೈಕ್ ಅಪಘಾತವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಬಸವರಾಜ ಗಾಯಗೊಂಡವರು. ಕಲಘಟಗಿಯಿಂದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯತ್ತ ಬರುತ್ತಿದ್ದಾಗ ಘಟನೆ ನಡೆದಿದೆ. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಬೈಕ್ ಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕೀಡ್ ಆಗಿ ಬಿದ್ದು ಬಸವರಾಜ ತಲೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಗಾಯಗೊಂಡಿದ್ದ ಬಸವರಾಜ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.