ಆಜಾದಿ ಕಾ ಅಮೃತ್ ಮಹೋತ್ಸವ: ಭಗತ್ ಸಿಂಗ್​ರೊಂದಿಗೆ ದೆಹಲಿ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿದ ಬಟುಕೇಶ್ವರ್ ದತ್​ರನ್ನು ಭಾರತ ಬೇಗ ಮರೆತುಬಿಟ್ಟಿತು

ಬಟುಕೇಶ್ವರ್ ದತ್ ಬಗ್ಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲದಿರುವುದು ನಿಜಕ್ಕೂ ದುರಂತ. ಬದುಕಿನ ಕೊನೆದಿನಗಳಲ್ಲಿ ಅವರು ಒಮ್ಮೆ ಸಿಗರೇಟು ಕಂಪನಿಯಲ್ಲಿ ಕೆಲಸ ಮಾಡಿದರೆ ಕೆಲವೊಮ್ಮೆ ಟೂರಿಸ್ಟ್ ಗೈಡ್ ಆಗಿ ಪಾಟ್ನಾದ ಬೀದಿಗಳಲ್ಲಿ ಅಲೆದಾಡುತ್ತಿದ್ದರು.

ಆಜಾದಿ ಕಾ ಅಮೃತ್ ಮಹೋತ್ಸವ: ಭಗತ್ ಸಿಂಗ್​ರೊಂದಿಗೆ ದೆಹಲಿ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿದ ಬಟುಕೇಶ್ವರ್ ದತ್​ರನ್ನು ಭಾರತ ಬೇಗ ಮರೆತುಬಿಟ್ಟಿತು
ಸ್ವತಂತ್ರ ಭಾರತ ಬೇಗ ಮರೆತುಗೋದ ಮಹಾನ್ ಸೇನಾನಿ ಬಟುಕೇಶ್ವರ್ ದತ್
TV9kannada Web Team

| Edited By: Apurva Kumar Balegere

Aug 04, 2022 | 1:55 PM

Azadi Ka Amrit Mahotsav | ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ (Central Assembly) ಏಪ್ರಿಲ್ 1929ರಲ್ಲಿ ಇದ್ದಕ್ಕಿದ್ದಂತೆ ಬಾಂಬ್‌ (bomb) ಸ್ಪೋಟಗೊಂಡು ಕೋಲಾಹಲ ಸೃಷ್ಟಿಸಿತ್ತು. ಇಬ್ಬರು ಯುವಕರು ತಾವು ಕೂತಿದ್ದ ಸ್ಥಳಗಳಿಂದ ಎದ್ದುನಿಂತು ಕೆಲವು ಕರಪತ್ರಗಳನ್ನು ಎಸೆಯುತ್ತಾ ‘ಇಂಕ್ವಿಲಾಬ್ ಜಿಂದಾಬಾದ್’ (Inquilab Zindabad) ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಹಾಗೆ ಕೂಗಿ ಅವರು ಅಲ್ಲಿಂದ ಓಡಿಹೋಗಬಹುದಾಗಿದಿತ್ತು. ಆದರೆ ತಮ್ಮ ಧ್ವನಿ ಜನಸಾಮಾನ್ಯರಿಗೆ ತಲುಪಬೇಕಾದರೆ ತಾವು ಬಂಧನಕ್ಕೊಳಗಾಗುವುದು ಅತ್ಯಗತ್ಯವೆಂದು ಅವರು ಅರಿತಿದ್ದರು. ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಈ ಯುವಕರು ಬೇರೆ ಯಾರೂ ಅಲ್ಲ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್!

ಬಂಧನಕ್ಕೊಳಗಾದ ನಂತರ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಬಾಂಬ್ ಸ್ಫೋಟಗೊಳಿಸುವ ಮೂಲಕವೇ ಕಿವಿಯಿದ್ದೂ ಕೇಳದಂತಿದ್ದ ಜನರ ಕಿವಿಗಳನ್ನು ತೆರೆಸಬಹುದು ಅಂತ ಅವರು ಭಾವಿಸಿದ್ದರು. ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಮಹತ್ತರ ಘಟನೆಗಳಲ್ಲಿ ಒಂದಾಗಿರುವ ಈ ಬಾಂಬ್ ಪ್ರಕರಣದಲ್ಲಿ ಇಬ್ಬರಿಬ್ಬರು ಭಾಗಿಯಾಗಿದ್ದರೂ ನಮಗೆ ನೆನಪಾಗೋದು ಮತ್ತು ನೆನಪಿರೋದು ಭಗತ್ ಸಿಂಗ್ ಮಾತ್ರ. ಸ್ವತಂತ್ರ ಭಾರತದಲ್ಲಿ ವೀರರಂತೆ ಆರಾಧಿಸಲ್ಪಡಬೇಕಾದ ಕೆಲವರು ನೇಪಥ್ಯದಲ್ಲೇ ಉಳಿದುಬಿಟ್ಟರು, ಅವರಲ್ಲೊಬ್ಬರು ಬಟುಕೇಶ್ವರ್ ದತ್!

ಬಟುಕೇಶ್ವರ್ ದತ್ ಬಗ್ಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲದಿರುವುದು ನಿಜಕ್ಕೂ ದುರಂತ. ಬದುಕಿನ ಕೊನೆದಿನಗಳಲ್ಲಿ ಅವರು ಒಮ್ಮೆ ಸಿಗರೇಟು ಕಂಪನಿಯಲ್ಲಿ ಕೆಲಸ ಮಾಡಿದರೆ ಕೆಲವೊಮ್ಮೆ ಟೂರಿಸ್ಟ್ ಗೈಡ್ ಆಗಿ ಪಾಟ್ನಾದ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅವರ ಕೊನೆಯ ಆಸೆಯಂತೆ, ಭಗತ್ ಸಿಂಗ್ ಅವರ ಸಮಾಧಿ ಇರುವ ಸ್ಥಳದ ಪಕ್ಕದಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಯಿತು. Tv9 ನ ಅಜಾದಿ ಕಾ ಅಮೃತ್ ಮಹೋತ್ಸವ ವಿಶೇಷ ಸರಣಿಯ ಮೂಲಕ ಭಾರತಮಾತೆಯ ಈ ವೀರ ಪುತ್ರನಿಗೆ ನಮನಗಳನ್ನು ಸಲ್ಲಿಸುತ್ತದೆ.

ಹುಟ್ಟಿದ್ದು ಪಶ್ಚಿಮ ಬಂಗಾಳದಲ್ಲಿ, ಓದಿದ್ದು ಕಾನ್ಪುರದಲ್ಲಿ

ಬಟುಕೇಶ್ವರ್ ದತ್ ಅವರು 18 ನವೆಂಬರ್ 1910 ರಂದು ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿದರು. ತಮ್ಮ ಹೆಸರನ್ನು ಸಂಕ್ಷಿಪ್ತವಾಗಿ ಬಿ.ಕೆ. ದತ್ ಅಂತ ಬರೆಯುವುದು ಅವರ ರೂಢಿಯಾಗಿತ್ತು. ಅವರ ತಂದೆಯ ಹೆಸರು ಗೋಸ್ತ ಬಿಹಾರಿ ದತ್ ಮತ್ತು ತಾಯಿಯ ಹೆಸರು ಕಾಮಿನಿ ದೇವಿ. ಆರಂಭಿಕ ಶಿಕ್ಷಣದ ನಂತರ ಬಟುಕೇಶ್ವರ್ ದತ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾನ್ಪುರಗೆ ಹೋಗಿ ಪಿಪಿಎನ್ ಕಾಲೇಜಿನಲ್ಲಿ ಪದವಿಗೆ ಸೇರಿಕೊಂಡರು. ಆ ಸಮಯದಲ್ಲೇ ಕೆಲ ಕ್ರಾಂತಿಕಾರಿಗಳನ್ನು ಭೇಟಿಯಾದ ಅವರು ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ (ಹೆಚ್ ಆರ್ ಎ) ಸೇರಿದರು.

ಭಗತ್ ಸಿಂಗ್ ರನ್ನು ಭೇಟಿಯಾದರು ಬಟುಕೇಶ್ವರ್!

ಬಟುಕೇಶ್ವರ್ ದತ್ 1924 ರಲ್ಲಿ ಅಂದರೆ ಕೇವಲ 14 ನೇ ವಯಸ್ಸಿನಲ್ಲಿ ಹೆಚ್ ಆರ್ ಎ ಸೇರಿದರು. ಭಗತ್ ಸಿಂಗ್ ಕೂಡ ಹೆಚ್ಚು ಕಡಿಮೆ ಅದೇ ಸಮಯದಲ್ಲಿ ಆ ಸಂಘಟನೆ ಸೇರಿದ್ದರು. ಮನಸ್ಸು ಮತ್ತು ಹೃದಯದಲ್ಲಿ ಕ್ರಾಂತಿಕಾರಿ ಯೋಚನೆಗಳನ್ನಿಟ್ಟುಕೊಂಡಿದ್ದ ಸಮಾನ ಮನಸ್ಕರಿಬ್ಬರು ಉತ್ತಮ ಸ್ನೇಹಿತರಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಕಾನ್ಪುರದ ಇತಿಹಾಸ ಪುಸ್ತಕದ ಪ್ರಕಾರ ಅವರಿಬ್ಬರು ಚಂದ್ರಶೇಖರ್ ಆಜಾದ್ ಅವರನ್ನು ಭೇಟಿಯಾಗಿದ್ದು ಅದೇ ಊರಲ್ಲಿ.

ಕಾಕೋರಿ ಘಟನೆಯ ನಂತರ ಹೆಚ್ ಆರ್ ಎ ಹೋಗಿ ಹೆಚ್ ಎಸ್ ಅರ್ ಎ ಆಯಿತು

ಕಾಕೋರಿಯಲ್ಲಿ ಸರ್ಕಾರೀ ಖಜಾನೆ ದರೋಡೆ ಮಾಡಿದ ನಂತರ, ಬ್ರಿಟಿಷರು ಕ್ರಾಂತಿಕಾರಿಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ ಅವರನ್ನು ಹತ್ತಿಕ್ಕಲಾರಂಭಿಸಿದರು. ಅವರ ಧೋರಣೆ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (HRA) ಮೇಲೆ ಪ್ರಭಾವ ಬೀರಿದ್ದು ಸಹಜವಾಗಿತ್ತು. ಹಾಗಾಗೇ, ಚಂದ್ರಶೇಖರ್ ಆಜಾದ್ ಅವರು ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸುವ ಉದ್ದೇಶದಿಂದ ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಆರ್ಮಿ (HSRA) ಅನ್ನು ರಚಿಸಿದರು.

ಬಾಂಬ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದರು!

ಕೇಂದ್ರ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ನಂತರ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಬ್ರಿಟಿಷರಿಗೆ ಶರಣಾದರು. ಇಬ್ಬರನ್ನು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಒಟ್ಟಿಗೆ ಇರಿಸಲಾಗಿತ್ತು. ನಂತರ ವಿಚಾರಣೆ ನಡೆದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅದಾದ ಮೇಲೆ ಭಗತ್ ಸಿಂಗ್ ಅವರನ್ನು ಲಾಹೋರ್ ಪಿತೂರಿ ಪ್ರಕರಣಕ್ಕೆ (ಸೌಂಡರ್ಸ್ ಹತ್ಯೆ) ಸಂಬಂಧಿಸಿದಂತೆ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗಿ ಸುಖದೇವ್ ಮತ್ತು ರಾಜಗುರು ಅವರೊಂದಿಗೆ ಗಲ್ಲಿಗೇರಿಸಲಾಯಿತು. ಕಾಲಾ ಪಾನಿ ಶಿಕ್ಷೆಯ ಭಾಗವಾಗಿ ಬಟುಕೇಶ್ವರ್ ದತ್ ಅವರನ್ನು ಅಂಡಮಾನ್ ಜೈಲಿಗೆ ಕಳುಹಿಸಲಾಯಿತು.

ಭಗತ್ ಸಿಂಗ್ ಬಟುಕೇಶ್ವರ್ ದತ್ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದರು!

ಶಹೀದ್ ಭಗತ್ ಸಿಂಗ್ ಅವರು ಬಟುಕೇಶ್ವರ್ ದತ್ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದರು, ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಅವರು ಒಟ್ಟಿಗೆ ಇದ್ದಾಗ ಭಗತ್ ಸಿಂಗ್ ಅವರು ದತ್ ಅವರ ಆಟೊಗ್ರಾಫ್ ತೆಗೆದುಕೊಂಡಿದ್ದರು! ಈ ಆಟೋಗ್ರಾಫ್ ಭಗತ್ ಸಿಂಗ್ ಅವರ ಮೂಲ ಡೈರಿಯಲ್ಲಿ ಈಗಲೂ ಇದ್ದು ಅದರ ಮೇಲೆ ಜುಲೈ 12, 1930 ಎಂದು ಬರೆಯಲಾಗಿದೆ. ಭಗತ್ ಸಿಂಗ್ ಅವರ ವಂಶಸ್ಥ ಯದ್ವೇಂದ್ರ ಸಿಂಗ್ ಸಂಧು ಸದರಿ ಡೈರಿಯನ್ನು ಜೋಪಾನವಾಗಿಟ್ಟುಕೊಂಡಿದ್ದಾರೆ.

ಅನಾರೋಗ್ಯದ ಕಾರಣ ದತ್ ರನ್ನು ಬಂಕಿಪುರ ಜೈಲಿಗೆ ಕಳುಹಿಸಲಾಯಿತು

ಅಂಡಮಾನ್ ಜೈಲಿನಲ್ಲಿ ಬಟುಕೇಶ್ವರ್ ದತ್ ಆರೋಗ್ಯ ಹದಗೆಡಲಾರಂಭಿಸಿತ್ತು. ಹಾಗಾಗಿ, 1937 ರಲ್ಲಿ ಅವರನ್ನು ಬಿಹಾರದ ಬಂಕಿಪುರ ಜೈಲಿಗೆ ಸ್ಥಳಾಂತರಿಸಲಾಯಿತು. ಇಲ್ಲೂ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ 1938 ರಲ್ಲಿ ಅವರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಕೂಡದು ಎಂಬ ಷರತ್ತಿನೊಂದಿಗೆ ಬಿಡುಗಡೆ ಮಾಡಲಾಯಿತು. ಆದರೆ ಬಟುಕೇಶ್ವರ್ ದತ್ 1942 ರಲ್ಲಿ ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದಾಗ ಅವರನ್ನು ಮತ್ತೆ ಬಂಧಿಸಿ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಲಾಯಿತು.

‘ನಾನು ಈ ರೀತಿ ದೆಹಲಿಗೆ ಬರುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ!’

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಬಟುಕೇಶ್ವರ್ ದತ್ ತೆರೆಮರೆ ಸರಿದುಬಿಟ್ಟರು, ಅವರ ಸಾಹಸ ಪರಾಕ್ರಮ ಮತ್ತು ತ್ಯಾಗಗಳನ್ನು ಅಂದಿನ ಜನ ಬೇಗ ಮರೆತುಬಿಟ್ಟಿದ್ದರು. ಆದರೆ ದತ್ ಬದುಕನ್ನು ನಡೆಸಲೇ ಬೇಕಿತ್ತಲ್ಲ, ಹಾಗಾಗಿ ಸಿಗರೇಟ್ ತಯಾರಿಸುವ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಳಿಕ ಪಾಟ್ನಾದಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಸಹ ಕೆಲಸ ಮಾಡಿದರು. 1964 ರಲ್ಲಿ, ಅವರ ದೇಹಸ್ಥಿತಿ ತೀವ್ರವಾಗಿ ಹದಗೆಟ್ಟಿತು.

ಅಂದಿನ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ, ನಡೆಯಲು ಸಹ ಆಗದಂಥ ಸ್ಥಿತಿಯಲ್ಲಿ ಅವರನ್ನು ದೆಹಲಿಗೆ ಕರೆತರಲಾಗಿತ್ತು. ಸಫ್ದರ್‌ಗಂಜ್ ಆಸ್ಪತ್ರೆ ತಲುಪಿದ ಅವರು ಸುದ್ದಿಗಾರರೊಂದಿಗೆ ನಡೆಸಿದ ಸಂವಾದವೊಂದರಲ್ಲಿ ವಿಧಾನಸಭೆಯಲ್ಲಿ ಬಾಂಬ್ ಸ್ಫೋಟಿಸಿ ಇಡೀ ದೆಹಲಿಯನ್ನೇ ತತ್ತರಿಸುವಂತೆ ಮಾಡಿದ್ದ ತಾವು ಪುನಃ ಆ ನಗರಕ್ಕೆ ಅಂಥ ಸ್ಥಿತಿಯಲ್ಲಿ ಬರಬಹದು ಅಂತ ಕನಸಲ್ಲೂ ಯೋಚಿಸಿರಲಿಲ್ಲ ಎಂದಿದ್ದರು.

ಭಗತ್ ಸಿಂಗ್ ಸಮಾಧಿ ಪಕ್ಕದಲ್ಲೇ ದತ್ ರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಬಟುಕೇಶ್ವರ್ ದತ್ ಅವರ ಅನಾರೋಗ್ಯದ ವಿಷಯ ತಿಳಿದ ಅಂದಿನ ಪಂಜಾಬ್ ಮುಖ್ಯಮಂತ್ರಿ ರಾಮಕಿಶನ್ ಅವರು ದತ್ ರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು. ತನ್ನ ಪ್ರಾಣಸ್ನೇಹಿತ ಭಗತ್ ಸಿಂಗ್ ಸಮಾಧಿ ಪಕ್ಕದಲ್ಲೇ ತನ್ನ ಅಂತ್ಯಸಂಸ್ಕಾರ ನಡೆಸಬೇಕೆಂಬ ತಮ್ಮ ಕೊನೆಯಾಸೆಯನ್ನು ಬಟುಕೇಶ್ವರ್ ದತ್ ಅವರು ರಾಮಕಿಶನ್ ಬಳಿ ಹೇಳಿಕೊಂಡರು. ಜುಲೈ 20. 1965 ರಂದು, ಭಾರತಮಾತೆಯ ಈ ಧೈರ್ಯಶಾಲಿ ಮಗ ಕೊನೆಯುಸಿರೆಳೆದು ಅಮರನಾದರು.

ಭಾರತ-ಪಾಕ್ ಗಡಿಭಾಗದಲ್ಲಿರುವ ಹುಸೇನಿವಾಲಾದಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಸಮಾಧಿಗಳ ಪಕ್ಕದಲ್ಲೇ ಬಟುಕೇಶ್ವರ್ ದತ್ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada