ಡಿಜೆ ಸೆಟ್ಗೆ ಹಾಕಿದ್ದ ಜನರೇಟರ್ ವೈರಿಂಗ್ ಅವ್ಯವಸ್ಥೆ: ವಿದ್ಯುತ್ ಶಾಕ್ಗೆ ಪಿಕಪ್ ವಾಹನದಲ್ಲಿದ್ದ 10 ಮಂದಿ ಸಾವು
ಘಟನೆಗೆ ಜನರೇಟರ್ನ ವೈರಿಂಗ್ ಸಮಸ್ಯೆ ಕಾರಣ ಎಂದು ಶಂಕಿಸಲಾಗಿದೆ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು.
ಕೂಚ್ ಬೆಹಾರ್: ಪಶ್ಚಿಮ ಬಂಗಾಳದ (West Bengal) ಕೂಚ್ ಬೆಹಾರ್ ಜಿಲ್ಲೆಯಲ್ಲಿ ಜಲ್ಪೇಶ್ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಪ್ರವಹಿಸಿ (Electrocution) ಅದರಲ್ಲಿ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟು, ಇತರ 16 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಜಲ್ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಡು ಹಾಕಲೆಂದು ಪಿಕಪ್ ವಾಹನಕ್ಕೆ ಡಿಜೆ ಸಿಸ್ಟಮ್ ಅಳವಡಿಸಲಾಗಿತ್ತು. ಡಿಜೆ ಸಿಸ್ಟಮ್ಗಾಗಿ ಬಳಸುತ್ತಿದ್ದ ಜನರೇಟರ್ನ ವೈರಿಂಗ್ನಲ್ಲಿ ಉಂಟಾದ ಸಮಸ್ಯೆಯೇ ವಿದ್ಯುತ್ ಪ್ರವಹಿಸಲು ಮುಖ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
‘ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಮೆಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಲ್ಪೇಶ್ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಪ್ರವಹಿಸಿದೆ. ಘಟನೆಗೆ ಜನರೇಟರ್ನ ವೈರಿಂಗ್ ಸಮಸ್ಯೆ ಕಾರಣ ಎಂದು ಶಂಕಿಸಲಾಗಿದೆ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು’ ಎಂದು ಮಾತಭಂಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.
ಗಾಯಾಳುಗಳನ್ನು ತಕ್ಷಣವೇ ಚಂದ್ರಬಂಧಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಪ್ರಾಥಮಿಕ ಚಿಕಿತ್ಸೆ ಕೊಟ್ಟ ಸ್ಥಾನಿಕ ವೈದ್ಯಾಧಿಕಾರಿಯು ಅವರನ್ನು ಜಲ್ಪೈಗುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದರು. ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ 10 ಮಂದಿ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ. ಘಟನೆಗೆ ಕಾರಣವಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಚಾಲಕ ಪರಾರಿಯಾಗಿದ್ದಾನೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಸಿತಾಲ್ಕುಚಿ ಪ್ರದೇಶಕ್ಕೆ ಸೇರಿದವರು. ಎಲ್ಲರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 6:49 am, Mon, 1 August 22