ಮಮತಾ ಬ್ಯಾನರ್ಜಿ ನಿಜಕ್ಕೂ ಮಹಾನ್ ನಾಯಕಿ, ಬಂಗಾಳದ ಹುಲಿ; ಟಿಎಂಸಿಗೆ ಸೇರ್ಪಡೆಯಾದ ಶತ್ರುಘ್ನ ಸಿನ್ಹಾ ಬಣ್ಣನೆ

ಕಾಂಗ್ರೆಸ್ ತೊರೆದು ಟಿಎಂಸಿ ಸೇರಿರುವ ಶತ್ರುಘ್ನ ಸಿನ್ಹಾ ಏಪ್ರಿಲ್ 12ರಂದು ನಡೆಯಲಿರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಅಸನ್ಸೋಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮಮತಾ ಬ್ಯಾನರ್ಜಿ ನಿಜಕ್ಕೂ ಮಹಾನ್ ನಾಯಕಿ, ಬಂಗಾಳದ ಹುಲಿ; ಟಿಎಂಸಿಗೆ ಸೇರ್ಪಡೆಯಾದ ಶತ್ರುಘ್ನ ಸಿನ್ಹಾ ಬಣ್ಣನೆ
ಶತ್ರುಘ್ನ ಸಿನ್ಹಾ
Updated By: ಸುಷ್ಮಾ ಚಕ್ರೆ

Updated on: Mar 15, 2022 | 1:15 PM

ನವದೆಹಲಿ: ಹಿರಿಯ ನಟ ಶತ್ರುಘ್ನ ಸಿನ್ಹಾ (Shatrughan Sinha) ಇಂದು (ಮಾರ್ಚ್ 15) ಕಾಂಗ್ರೆಸ್‌ ಪಕ್ಷದಿಂದ ತೃಣಮೂಲ ಕಾಂಗ್ರೆಸ್‌ಗೆ (TMC) ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ ಸೇರುವ ಮುನ್ನ ಶತ್ರುಘ್ನ ಸಿನ್ಹಾ ಬಿಜೆಪಿ ನಾಯಕರಾಗಿದ್ದರು. ಟಿಎಂಸಿ ಸೇರ್ಪಡೆಯಾಗಿರುವ ಕುರಿತು ಟ್ವೀಟ್ ಮಾಡಿರುವ ಶತ್ರುಘ್ನ ಸಿನ್ಹಾ, “ಬಂಗಾಳದ ಹುಲಿ” ಮಮತಾ ಬ್ಯಾನರ್ಜಿ (Mamata Banerjee) ಅವರ ಆಹ್ವಾನದ ಮೇರೆಗೆ ನಾನು ಟಿಎಂಸಿಗೆ ಸೇರಿದ್ದೇನೆ. ನಮ್ಮ ಬಂಗಾಳದ ಹುಲಿ, ಬಹಳ ಯಶಸ್ವಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಹ್ವಾನದ ಮೇರೆಗೆ ನಾನು ಟಿಎಂಸಿಗೆ ಸೇರಿರುವ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಓರ್ವ ಮಹಾನ್ ಮಹಿಳೆ, ಮಹಾನ್ ನಾಯಕಿಯ ನಾಯಕತ್ವದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಮಮತಾ ಬ್ಯಾನರ್ಜಿ ನಿಜವಾದ ಅರ್ಥದಲ್ಲಿ ಮಹಾನ್ ನಾಯಕಿ” ಎಂದು ಟ್ವೀಟ್ ಮಾಡಿದ್ದಾರೆ.

ಶತ್ರುಘ್ನ ಸಿನ್ಹಾ ಅವರು 2019ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಬಿಜೆಪಿ ಒನ್ ಮ್ಯಾನ್ ಶೋ ಆಗಿ ಮಾರ್ಪಟ್ಟಿದೆ ಮತ್ತು ಎಲ್ಲಾ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಕಚೇರಿಯೇ ತೆಗೆದುಕೊಳ್ಳುತ್ತದೆ ಎಂದು ಅವರು ಆರೋಪಿಸಿದ್ದರು.

ಇದೀಗ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿರುವ ಶತ್ರುಘ್ನ ಸಿನ್ಹಾ ಏಪ್ರಿಲ್ 12ರಂದು ನಡೆಯಲಿರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಅಸನ್ಸೋಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಂಗಾಳ ಸಿಎಂ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೊ ರಾಜೀನಾಮೆ ನೀಡಿದ ನಂತರ ಅಸನ್ಸೋಲ್ ಸಂಸದೀಯ ಸ್ಥಾನವು ತೆರವಾಗಿತ್ತು.

ಕಳೆದ ವರ್ಷ ನವೆಂಬರ್ 4ರಂದು ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದ ಟಿಎಂಸಿ ಶಾಸಕ ಸುಬ್ರತಾ ಮುಖರ್ಜಿ ಅವರ ನಿಧನದ ನಂತರ ತೆರವಾದ ಬ್ಯಾಲಿಗುಂಜ್ ಕ್ಷೇತ್ರದಿಂದ ಬಾಬುಲ್ ಸುಪ್ರಿಯೊ ಸ್ಪರ್ಧಿಸಲಿದ್ದಾರೆ. ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸುಬ್ರತಾ ಮುಖರ್ಜಿ ಸಚಿವರಾಗಿದ್ದರು.

ಶತ್ರುಘ್ನ ಸಿನ್ಹಾ ಅವರು ಅಸನ್ಸೋಲ್ ಮತ್ತು ಪಶ್ಚಿಮ ಬಂಗಾಳದ ಜನರಿಗೆ ಹೇಗೆ ಸೇವೆ ಸಲ್ಲಿಸುತ್ತಾರೆ ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ಬದುಕುತ್ತಾರೆ ಎಂಬುದನ್ನು ನಾನು ನೋಡಬಯಸುತ್ತೇನೆ ಎಂದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ಇದನ್ನೂ ಓದಿ: ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಲಿದ್ದಾರೆ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೋ

ಮಮತಾ ಬ್ಯಾನರ್ಜಿ ಪಕ್ಕಾ​ ಬಿಜೆಪಿಯ ಏಜೆಂಟ್​; ನಮ್ಮೊಂದಿಗೆ ವಿಲೀನವಾಗಿ ಎಂದ ದೀದಿಗೆ ಕಾಂಗ್ರೆಸ್​ ತಿರುಗೇಟು

Published On - 1:11 pm, Tue, 15 March 22