ಮಾ.19-20ಕ್ಕೆ ಭಾರತಕ್ಕೆ ಭೇಟಿ ನೀಡಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ; ಉಕ್ರೇನ್ ಬಿಕ್ಕಟ್ಟಿನ ಬಗ್ಗೆಯೂ ನಡೆಯಲಿದೆ ಚರ್ಚೆ
2019 ರಲ್ಲಿ ಭಾರತದ ಅಸ್ಸಾಂ ಸೇರಿ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಹೀಗಾಗಿ 2019ರ ಡಿಸೆಂಬರ್ 15-17ರವರೆಗೆ ಜಪಾನ್ನ ಅಂದಿನ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡುವುದು ರದ್ದಾಗಿತ್ತು.
ಜಪಾನ್ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿದಾ (Fumio Kishida)ಮಾರ್ಚ್ 19-20ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ವಾರ್ಷಿಕ ಶೃಂಗಸಭೆಗಾಗಿ ಅವರು ಮಾರ್ಚ್ 19ರ ಮಧ್ಯಾಹ್ನದ ಹೊತ್ತಿಗೆ ಭಾರತಕ್ಕೆ ತಲುಪಲಿದ್ದು, ಮರುದಿನ ಮಾರ್ಚ್ 20ರಂದು ವಾಪಸ್ ತೆರಳಲಿದ್ದಾರೆ. ಭಾರತ ಮತ್ತು ಜಪಾನ್ ನಡುವೆ ಹೊಸ ಹೂಡಿಕೆಗಳಿಗೆ ಉತ್ತೇಜನ ನೀಡುವ ಮತ್ತು ದ್ವಿಪಕ್ಷೀಯ ಸಹಭಾಗಿತ್ವ ಬಲ ಪಡಿಸಲು ಇದೊಂದು ಸದಾವಕಾಶವಾಗಿದೆ. ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಮಂತ್ರಿ ಫ್ಯುಮಿಯೋ ಕಿಶಿದಾ ನಡೆಸಲಿರುವ ಈ ಶೃಂಗಸಭೆಯಲ್ಲಿ, ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಬಂಧ ಚರ್ಚೆ ನಡೆಯಲಿದೆ. ಇಂಡೋ-ಫೆಸಿಪಿಕ್ ಸಮಸ್ಯೆಗಳು ಮತ್ತು ಉಕ್ರೇನ್ ಬಿಕ್ಕಟ್ಟಿನ ಕುರಿತೂ ಇಬ್ಬರು ದಿಗ್ಗಜರು ವಿಸ್ತೃತ ಮಾತುಕತೆ ನಡೆಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
2019 ರಲ್ಲಿ ಭಾರತದ ಅಸ್ಸಾಂ ಸೇರಿ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಹೀಗಾಗಿ 2019ರ ಡಿಸೆಂಬರ್ 15-17ರವರೆಗೆ ಜಪಾನ್ನ ಅಂದಿನ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡುವುದು ರದ್ದಾಗಿತ್ತು. ಅದಾದ ಬಳಿಕ 2021ರ ಸೆಪ್ಟೆಂಬರ್ನಲ್ಲಿ ಜಪಾನ್ ಪ್ರಧಾನಿಯಾಗಿ ಕಿಶಿದಾ ಅಧಿಕಾರ ವಹಿಸಿಕೊಂಡಿದ್ದಾರೆ. ಅಂದು ರದ್ದಾದ, ಆಗಿನ ಪ್ರಧಾನಿ ಶಿಂಜೋ ಅಬೆ ಮತ್ತು ಪ್ರಧಾನಿ ಮೋದಿ ನಡುವಿನ ಭೇಟಿಯ ಮುಂದುವರಿದ ಭಾಗವಾಗಿ ಇದೀಗ ಕಿಶಿದಾ ಮತ್ತು ಮೋದಿ ಭೇಟಿಯಾಗಿ, ವಿವಿಧ ವಿಷಯಗಳ ಚರ್ಚೆ ನಡೆಸಲಿದ್ದಾರೆ. ಅತ್ತ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಜಾಗತಿಕವಾಗಿ ಪ್ರಕ್ಷುಬ್ಧತೆ ಉಂಟಾಗಿದೆ. ಈಗಾಗಲೇ ಕ್ವಾಡ್ ನಾಯಕರು ಅಂದರೆ ಭಾರತದ ಪ್ರಧಾನಿ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಜಪಾನ್ ಪ್ರಧಾನಿ ಕಿಶಿದಾ ವರ್ಚ್ಯುವಲ್ ಆಗಿ ಸಭೆ ನಡೆಸಿದ್ದಾರೆ. ಹೀಗಿದ್ದಾಗ್ಯೂ ಜಪಾನ್, ಭಾರತದ ಪ್ರಧಾನಿಯವರೊಂದಿಗೆ ಶೃಂಗಸಭೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ಹೇಳಿತ್ತು ಎಂದೂ ವರದಿಯಾಗಿದೆ.
ಕಿಶಿದಾ ದೆಹಲಿ ಭೇಟಿಯ ವೇಳೆ ಉದ್ಯಮಕ್ಕೆ ಸಂಬಂಧಪಟ್ಟ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ, ಮುಂಬೈ-ಅಹ್ಮದಾಬಾದ್ ಕಾರಿಡಾರ್ ಆಚೆಗೂ ಬುಲೆಟ್ ರೈಲು ಯೋಜನೆ ವಿಸ್ತರಣೆ ಮಾಡುವ ನಿಟ್ಟಿನಲ್ಲೂ ಭಾರತ-ಜಪಾನ್ ಮಾತುಕತೆಗಳು ನಡೆಯಲಿವೆ. ಜಾಗತಿಕವಾಗಿ ನಡೆಯುವ ಸಣ್ಣಮಟ್ಟದ ರಾಜಕೀಯಗಳಿಗೆ ಪ್ರಭಾವಿತರಾಗದೆ, ಎರಡೂ ರಾಷ್ಟ್ರಗಳೂ ಸದಾ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕು. ಭಾರತ ಮತ್ತು ಜಪಾನ್ ಮಧ್ಯೆ ಪೂರೈಕೆ ಸರಪಳಿ ಸರಾಗವಾಗಿ ಇರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆಯೂ ದಿಗ್ಗಜರು ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: Russia Ukraine Conflict: ಇನ್ನೂ ಎರಡು ತಿಂಗಳು ಯುದ್ಧ ಮುಂದುವರಿಯಲಿದೆ ಎಂದು ಉಕ್ರೇನ್: ದಾಳಿ ತೀವ್ರಗೊಳಿಸಿದ ರಷ್ಯಾ
Published On - 9:55 am, Tue, 15 March 22