ಮಮತಾ ಬ್ಯಾನರ್ಜಿ ಪಕ್ಕಾ ಬಿಜೆಪಿಯ ಏಜೆಂಟ್; ನಮ್ಮೊಂದಿಗೆ ವಿಲೀನವಾಗಿ ಎಂದ ದೀದಿಗೆ ಕಾಂಗ್ರೆಸ್ ತಿರುಗೇಟು
ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಅವರನ್ನು ಅಧೀರ್ ರಂಜನ್ ಚೌಧರಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಕಾಂಗ್ರೆಸ್ ವಿರುದ್ಧ ಯಾಕೆ ಮಾತನಾಡುತ್ತೀರಿ? ಕಾಂಗ್ರೆಸ್ ಇಲ್ಲದೆ ಇದ್ದರೆ, ಮಮತಾ ಬ್ಯಾನರ್ಜಿಯಂಥ ಅದೆಷ್ಟೋ ಜನ ರಾಜಕೀಯದಲ್ಲಿ ಹುಟ್ಟುತ್ತಲೇ ಇರಲಿಲ್ಲ ಎಂದೂ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಹೋರಾಡಲು ವಿಫಲವಾಗಿದೆ. ಬಿಜೆಪಿಯನ್ನು ಎದುರಿಸಲು ಶಕ್ತಿ ಇರುವ ಏಕೈಕ ಪಕ್ಷ ನಮ್ಮದಾಗಿದ್ದು, ಕಾಂಗ್ರೆಸ್ ನಮ್ಮೊಂದಿಗೆ ವಿಲೀನವಾಗಬಹುದು ಎಂದು ವ್ಯಂಗ್ಯವಾಡಿದ್ದರು. ಹೀಗೆ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದ ಮಮತಾ ಬ್ಯಾನರ್ಜಿಯವರಿಗೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ತಿರುಗೇಟು ನೀಡಿದ್ದಾರೆ. ಟಿಎಂಸಿ ಬಿಜೆಪಿಯ ಏಜೆಂಟ್ ಆಗಿದೆ. ನಮ್ಮ ಕಾಂಗ್ರೆಸ್ ಪಕ್ಷ ರಾಷ್ಟ್ರಾದ್ಯಂತ ಅಸ್ತಿತ್ವ ಹೊಂದಿದೆ. ಒಟ್ಟಾರೆ ಪ್ರತಿಪಕ್ಷಗಳ ಮತದಲ್ಲಿ ಶೇ.20ರಷ್ಟು ಪಾಲು ಇದೆ. ಆದರೆ ಟಿಎಂಸಿ ವೆಸ್ಟ್ ಬೆಂಗಾಲ್ ಬಿಟ್ಟರೆ ಇನ್ನೆಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಅದರ ಬೆನ್ನಲ್ಲೇ ಶುಕ್ರವಾರ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಸೋಲಿಸಲು ಎಲ್ಲ ರಾಜಕೀಯ ಪಕ್ಷಗಳೂ ಬಯಸುತ್ತವೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಆ ಪಕ್ಷವನ್ನು ಸೋಲಿಸಬೇಕು. ಆದರೆ ಕಾಂಗ್ರೆಸ್ ವಿಶ್ವಾಸಾರ್ಹವಾಗಿಲ್ಲ. ಹೀಗಾಗಿ ಅದನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದರು. ಇದೀಗ ಸ್ವಲ್ಪ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ ಅಧೀರ್ ರಂಜನ್ ಚೌಧರಿ, ಬುದ್ಧಿ ಭ್ರಮಣೆಯಾಗಿರುವ ವ್ಯಕ್ತಿಗೆ ಪ್ರತಿಕ್ರಿಯೆ ನೀಡಲು ಸರಿಯಾಗುವುದಿಲ್ಲ. ಆದರೂ ಹೇಳುತ್ತಿದ್ದೇನೆ, ಕಾಂಗ್ರೆಸ್ ದೇಶಾದ್ಯಂತ 700 ಶಾಸಕರನ್ನು ಹೊಂದಿದೆ. ಆದರೆ ದೀದಿಯವರ ಪಕ್ಷದಲ್ಲಿ ಇಷ್ಟು ಶಾಸಕರು ಇದ್ದಾರಾ? ಒಟ್ಟಾರೆ ಪ್ರತಿಪಕ್ಷಗಳ ಮತದಲ್ಲಿ ಶೇ.20ರಷ್ಟನ್ನು ಕಾಂಗ್ರೆಸ್ ಹೊಂದಿದೆ. ದೀದಿ ಹೊಂದಿದ್ದಾರಾ? ಬಿಜೆಪಿಯನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಮತಾ ಬ್ಯಾನರ್ಜಿ ಮೊದಲು ಕಾಂಗ್ರೆಸ್ನಲ್ಲಿಯೇ ಇದ್ದವರು. 1997ರಲ್ಲಿ ಬೇರೆಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟಾಗಿಸಲು ಸದಾ ಪ್ರಯತ್ನ ಮಾಡುತ್ತಿರುವ ಮಮತಾ ಬ್ಯಾನರ್ಜಿ ಮೊದಲು ಕಾಂಗ್ರೆಸ್ನೊಂದಿಗೆ ಚೆನ್ನಾಗಿಯೇ ಇದ್ದರೂ, ಇತ್ತೀಚಿನ ದಿನಗಳಲ್ಲಿ ಕೈ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಅವರನ್ನು ಅಧೀರ್ ರಂಜನ್ ಚೌಧರಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಕಾಂಗ್ರೆಸ್ ವಿರುದ್ಧ ಯಾಕೆ ಮಾತನಾಡುತ್ತೀರಿ? ಕಾಂಗ್ರೆಸ್ ಇಲ್ಲದೆ ಇದ್ದರೆ, ಮಮತಾ ಬ್ಯಾನರ್ಜಿಯಂಥ ಅದೆಷ್ಟೋ ಜನ ರಾಜಕೀಯದಲ್ಲಿ ಹುಟ್ಟುತ್ತಲೇ ಇರಲಿಲ್ಲ. ಅದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಗೋವಾಕ್ಕೆ ಹೋಗಿದ್ದೇ ಬಿಜೆಪಿಯನ್ನು ಓಲೈಸಲು. ಅಲ್ಲಿ ಕಾಂಗ್ರೆಸ್ ಸೋಲಲು ಕಾರಣವೇ ನೀವು ಮತ್ತು ನಿಮ್ಮ ಟಿಎಂಸಿ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಾರಿಯುಪೋಲ್ ಹೆರಿಗೆ ಆಸ್ಪತ್ರೆಯು ಉಕ್ರೇನಲ್ಲಿ ಧ್ವಂಸಗೊಂಡಿರುವ ಮೂರನೇ ಆಸ್ಪತ್ರೆಯಾಗಿದೆ: ವಿಶ್ವಸಂಸ್ಥೆ
Published On - 9:50 am, Sun, 13 March 22