ಪಂಜಾಬ್ನ ಅಮೃತಸರದಲ್ಲಿ ಇಂದು ಆಪ್ ವಿಜಯಯಾತ್ರೆ: ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಭಾಗಿ
ಪಂಜಾಬ್ ಜನರಿಗೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ನೀಡುವಂತೆ ಗುರು ಸಾಹೀಬರ ಆಶೀರ್ವಾದ ಪಡೆದುಕೊಳ್ಳುತ್ತೇವೆ ಎಂದರು.
ಚಂಡೀಗಡ: ಆಮ್ ಆದ್ಮಿ ಪಕ್ಷದ (Aam Admi Party – AAP) ಪಂಜಾಬ್ ಘಟಕದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್ ಮತ್ತು ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಭಾನುವಾರ (ಮಾರ್ಚ್ 13) ಅಮೃತಸರದಲ್ಲಿ ವಿಜಯಯಾತ್ರೆ ನಡೆಸಲಿದ್ದಾರೆ. ತಮಗೆ ಬಹುಮತ ತಂದುಕೊಟ್ಟ ಜನರಿಗೆ ರೋಡ್ಷೋ ಮೂಲಕ ಜನರಿಗೆ ಧನ್ಯವಾದ ಅರ್ಪಿಸಲಿದ್ದಾರೆ. ಅಮೃತಸರಕ್ಕೆ ಹೊರಡುವ ಮುನ್ನ ಸಂಗೂರ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಂಜಾಬ್ ಜನರಿಗೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ನೀಡುವಂತೆ ಗುರು ಸಾಹೀಬರ ಆಶೀರ್ವಾದ ಪಡೆದುಕೊಳ್ಳುತ್ತೇವೆ. ನಮ್ಮ ರಾಷ್ಟ್ರೀಯ ಸಂಯೋಜಕರೂ ಅಮೃತಸರಕ್ಕೆ ಬಂದು ರೋಡ್ಷೋದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದರು.
ಧುರಿ ಕ್ಷೇತ್ರದಲ್ಲಿ 58,000 ಮತಗಳ ಅಂತರದಿಂದ ಭಗವಂತ ಮಾನ್ ಜಯಗಳಿಸಿದ್ದರು. ಮೊಹಾಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಂಜಾಬ್ ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಅವರನ್ನು ಚಂಡೀಗಡದ ರಾಜಭವನದಲ್ಲಿ ಶನಿವಾರ ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು.
ಹುತಾತ್ಮ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮಸ್ಥಳ ಖತ್ಕರ್ ಕಲನ್ನಲ್ಲಿ ಮಾರ್ಚ್ 16ರಂದು ಭಗವಂತ್ ಮಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಆಮ್ ಆದ್ಮಿ ಪಕ್ಷವು ಪಂಜಾಬ್ನಲ್ಲಿ 92 ಸ್ಥಾನಗಳನ್ನು ಜಯಗಳಿಸಿದೆ. ಕಳೆದ ಎರಡು ಅವಧಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷವು ಕೇವಲ 18 ಸ್ಥಾನಗಳಲ್ಲಿ ಜಯಗಳಿಸಲು ಯಶಸ್ವಿಯಾಗಿತ್ತು. ಬಿಜೆಪಿ 2, ಶಿರೋಮಣಿ ಅಕಾಲಿದಳವು 3 ಸ್ಥಾನಗಳಲ್ಲಿ ಜಯಗಳಿಸಿತ್ತು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಪ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಆಪ್ ಟಾರ್ಗೆಟ್: ಪಂಜಾಬ್ ಆಯ್ತು ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದ ಆಮ್ ಆದ್ಮಿ ಪಾರ್ಟಿ ಮುಖಂಡ
ಇದನ್ನೂ ಓದಿ: ಮಾರ್ಚ್ 16ರಂದು ಎಎಪಿಯ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ