ನಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ: ಜಾಹೀರಾತು ನೀಡಿ ಅದಾನಿ ಸಮೂಹ ಸ್ಪಷ್ಟನೆ

| Updated By: ಸಾಧು ಶ್ರೀನಾಥ್​

Updated on: Dec 22, 2020 | 10:43 AM

’ನಮ್ಮ ವಿರುದ್ಧ ಯೋಜಿತ ಅಪಪ್ರಚಾರ ನಡೆಯುತ್ತಿದೆ. ಸತ್ಯವನ್ನು ಅರಿಯಿರಿ, ಅಪಪ್ರಚಾರದ ವಿರುದ್ಧ ಧ್ವನಿ ಎತ್ತಿ ಎಂದು ಪಂಜಾಬಿನ ಪ್ರಮುಖ ಪತ್ರಿಕೆಗಳಲ್ಲಿ ಇಡೀ ಪುಟದ ಅದಾನಿ ಸಮೂಹ ಜಾಹೀರಾತು ನೀಡಿದೆ.

ನಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ: ಜಾಹೀರಾತು ನೀಡಿ ಅದಾನಿ ಸಮೂಹ ಸ್ಪಷ್ಟನೆ
ಗೌತಮ್ ಅದಾನಿ
Follow us on

ಅಮೃತಸರ: ದೆಹಲಿ ಚಲೋ ಆರಂಭವಾದ ನಂತರ ಅದಾನಿ, ಅಂಬಾನಿ ಕಂಪನಿಗಳು ಕೃಷಿಭೂಮಿಯನ್ನು ಗುತ್ತಿಗೆಗೆ ಪಡೆದು ರೈತರನ್ನು ಶೋಷಿಸುತ್ತಿವೆ ಎಂದು ಆರೋಪಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್​ಗಳನ್ನು ಬರೆಯುತ್ತಿರುವವರ ಸಂಖ್ಯೆಯೂ ಕಡಿಮೆಯಿಲ್ಲ. ಈ ದೂರನ್ನು ಅದಾನಿ ಗ್ರೂಪ್ ಗಂಭೀರವಾಗಿ ಪರಿಗಣಿಸಿದೆ.

‘ನಮ್ಮ ವಿರುದ್ಧ ಯೋಜಿತ ಅಪಪ್ರಚಾರ ನಡೆಸಲಾಗುತ್ತಿದೆ. ಸತ್ಯವನ್ನು ಅರಿಯಿರಿ, ಅಪಪ್ರಚಾರದ ವಿರುದ್ಧ ಧ್ವನಿ ಎತ್ತಿ’ ಎಂದು ಪಂಜಾಬಿನ ಪ್ರಮುಖ ಪತ್ರಿಕೆಗಳಲ್ಲಿ ಅದಾನಿ ಸಮೂಹ ಪೂರ್ಣಪುಟದ ಜಾಹೀರಾತು ನೀಡಿದೆ. ಅದಾನಿ ಸಮೂಹ ರೈತರಿಗೆ ಹಾನಿಯಾಗಬಲ್ಲ ಯಾವುದೇ ಯೋಜನೆಯ ಭಾಗವಾಗಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಗುತ್ತಿಗೆ ಕೃಷಿಯ (ಕಾಂಟ್ರಾಕ್ಟ್ ಫಾರ್ಮಿಂಗ್) ಹೆಸರಲ್ಲಿ ರೈತರ ಹಿತಾಸಕ್ತಿಗೆ ಧಕ್ಕೆ ತಂದಿಲ್ಲ. ಕೃಷಿ ರಂಗದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ನಮ್ಮ ಕಂಪನಿಯ ಹೆಸರಿಗೆ ಪಟ್ಟಭದ್ರ ಹಿತಾಸಕ್ತಿಗಳು ಮಣ್ಣೆರೆಚಲು ಪ್ರಯತ್ನಿಸುತ್ತಿವೆ. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಭದ್ರತೆ ನೀಡುವುದು ಮತ್ತು ಸುಲಲಿತ ಸಾಗಣೆಗೆ ಸಹಕರಿಸುವುದಷ್ಟೇ ನಮ್ಮ ಕಂಪನಿಯ ಉದ್ದೇಶ ಎಂದು ತಿಳಿಸಿದೆ.

 

ರೈತರಿಂದ ಯಾವುದೇ ಕೃಷಿ ಉತ್ಪನ್ನಗಳನ್ನು ಅದಾನಿ ಗ್ರೂಪ್ ಖರೀದಿಸುವುದಿಲ್ಲ. ಕೇವಲ, ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾಗೆ (FCI) ಸರಕು ಸಂಗ್ರಹ ಮತ್ತು ಸಾಗಾಟ ಪ್ರಕ್ರಿಯೆಯಲ್ಲಿ ಅನುವು ಮಾಡಿಕೊಡುತ್ತದೆ. ನಾವು ನೀಡುವ ಸೇವೆಯನ್ನೇ ನೀಡುವ ಇನ್ನೂ ಹಲವು ಕಂಪನಿಗಳಿವೆ ಎಂದು ಜಾಹೀರಾತು ಸ್ಪಷ್ಟಪಡಿಸಿದೆ.

ಸಂಗ್ರಹ ಮತ್ತು ಸಾಗಾಟವಷ್ಟೇ ನಮ್ಮ ಕೆಲಸ
ನಾವು ಕೇವಲ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ರೈತರ ಬೆಳೆಗೆ ಬೆಲೆ ನಿಗದಿಪಡಿಸುವ, ಕೃಷಿ ಉತ್ಪನ್ನ ಕೊಳ್ಳುವ ಯಾವುದೇ ಪ್ರಕ್ರಿಯೆಯಲ್ಲಿ ಅದಾನಿ ಗ್ರೂಪ್ ತೊಡಗಿಕೊಂಡಿಲ್ಲ. ಧಾನ್ಯಗಳ ರಕ್ಷಣೆಗಾಗಿ FCI ಗೆ ಗೋದಾಮು ನಿರ್ಮಿಸಿಕೊಟ್ಟಿದ್ದೇವೆಯೇ ಹೊರತು, ಇನ್ನಾವ ಪ್ರಕ್ರಿಯೆಯಲ್ಲೂ ಭಾಗಿಯಾಗಿಲ್ಲ ಎಂದು ಜಾಹೀರಾತು ವಿವರಿಸುತ್ತದೆ.

ಕೃಷಿ ಭೂಮಿಯನ್ನು ಅದಾನಿ ಗ್ರೂಪ್ ವಶಪಡಿಸಿಕೊಂಡಿದೆ ಎಂಬ ವದಂತಿಗಳು ಹರಡುತ್ತಿವೆ. ಆದರೆ, FCI ಗೆ ಗೋದಾಮು ನಿರ್ಮಿಸಲಷ್ಟೇ ಸರ್ಕಾರ ಭೂಮಿ ಒದಗಿಸಿದೆ. ಗೋದಾಮು ನಿರ್ಮಿಸಿದ ನಂತರ ನಾವು ಯಾವುದೇ ಹಂತದಲ್ಲೂ FCI ನ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ. 2005 ರಲ್ಲಿ ಸ್ಥಾಪನೆಯಾದ ಅದಾನಿ ಟ್ರಾನ್ಸ್ ಪೋರ್ಟೇಶನ್ ದೇಶಾದ್ಯಂತ ಧಾನ್ಯಗಳ ರಕ್ಷಣೆಗೆ ಗೋದಾಮುಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.

ರೈತರ ಪ್ರತಿಭಟನೆಯ ಕಿಡಿ ಅಂಬಾನಿ, ಅದಾನಿಗಳ ವಿರುದ್ಧ ತಿರುಗಿರುವ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ, ಜಿಯೋಸಿಮ್​ಗೆ ವಿದಾಯ ಹೇಳುವ ಚಳವಳಿಯೂ ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

R.S. Deshpande interview: ಕೃಷಿ ಮಸೂದೆ ವಿರುದ್ದದ ಹೋರಾಟದಲ್ಲಿ ರಾಜಕಾರಣಿಗಳ ಬೇಳೆಕಾಳು ಬೇಯತ್ತಿರೋದು ನಿಜ

Published On - 7:38 pm, Mon, 21 December 20