ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (NDRF) ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ (Karnataka) 941.04 ಕೋಟಿ ರೂ. ಹೆಚ್ಚುಚವರಿ ಅನುದಾನ ಘೋಷಿಸಿದೆ. ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್ಗಳಿಗೂ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಐದು ರಾಜ್ಯಗಳಿಗೆ ಒಟ್ಟು 1,816.162 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2022ರಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತ, ಮೇಘಸ್ಫೋಟ ಮತ್ತಿತರ ಪ್ರಾಕೃತಿಕ ವಿಪತ್ತುಗಳನ್ನು ಗಮನದಲ್ಲಿಟ್ಟುಕೊಂಡು ಈ ಅನುದಾನ ಘೋಷಿಸಲಾಗಿದೆ. ಪ್ರಾಕೃತಿಕ ವಿಕೋಪಗಳನ್ನು ಎದುರಿಸಿದ ಐದು ರಾಜ್ಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಹೊಂದಿರುವ ಒಲವನ್ನು ಇದು ತೋರಿಸಿಕೊಟ್ಟಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
ಕರ್ನಾಟಕಕ್ಕೆ 941.04 ಕೋಟಿ ರೂ, ಅಸ್ಸಾಂಗೆ 520.466 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 239.3 ಕೋಟಿ ರೂ, ಮೇಘಾಲಯಕ್ಕೆ 47.326 ಕೋಟಿ ರೂ, ನಾಗಾಲ್ಯಾಂಡ್ಗೆ 68.02 ಕೋಟಿ ರೂ. ದೊರೆಯಲಿದೆ.
ಈ ಹೆಚ್ಚುವರಿ ನೆರವು ಈಗಾಗಲೇ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ (SDRF) ಮೀಸಲಿಟ್ಟಿರುವುದನ್ನು ಹೊರತುಪಡಿಸಿದ್ದಾಗಿದೆ. 2022-23ನೇ ಸಾಲಿನಲ್ಲಿ 25 ರಾಜ್ಯಗಳಿಗೆ ಎಸ್ಡಿಆರ್ಎಫ್ ಅಡಿ 15,770.40 ಕೋಟಿ ರೂ ಹಾಗೂ ಎನ್ಡಿಆರ್ಎಫ್ ಅಡಿ ನಾಲ್ಕು ರಾಜ್ಯಗಳಿಗೆ 502.744 ಕೋಟಿ ರೂ. ಅನುದಾನ ನೀಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಹೆಚ್ಚುವರಿ ಅನುದಾನ ಘೋಷಿಸಿರುವುದು ಗಮನಾರ್ಹ.
ಇದನ್ನೂ ಓದಿ: ಆರ್ಥಿಕವಾಗಿ ಶಕ್ತಿ ಇಲ್ಲ ಸರ್, ನಿಮ್ಮೊಂದಿಗೆ ನಾವಿದ್ದೇವೆ: ವೈಎಸ್ವಿ ದತ್ತರಿಗೆ 101 ರೂ. ಹಣ ಕಳುಹಿಸಿದ ಅಭಿಮಾನಿ
ಕೇಂದ್ರ ಸರ್ಕಾರ ಉತ್ತರದ ರಾಜ್ಯಗಳಿಗೆ ವಿಶೇಷ ಹಣಕಾಸು ಅನುದಾನಗಳನ್ನು ನೀಡುತ್ತಿದ್ದು, ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳಿವೆ. ಜಿಎಸ್ಟಿ ಪಾಲು ವಿಚಾರದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅನೇಕ ಬಾರಿ ಆಕ್ರೋಶ ವ್ಯಕ್ತಪಡಿಸಿವೆ. ಈ ಎಲ್ಲೆ ಬೆಳವಣಿಗೆಗಳ ಮಧ್ಯೆಯೇ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಹಠಾತ್ ನಿರ್ಧಾರ ಕೈಗೊಂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Mon, 13 March 23