ದೇಶದಲ್ಲಿ ಕಡಲ ಭದ್ರತೆಗೆ ಹೆಚ್ಚಿನ ಒತ್ತು: ನೌಕಾಪಡೆಯ ನೂತನ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್

| Updated By: ರಶ್ಮಿ ಕಲ್ಲಕಟ್ಟ

Updated on: Nov 30, 2021 | 10:34 AM

ನೌಕಾಪಡೆಯ ನೂತನ ಮುಖ್ಯಸ್ಥ ಆರ್. ಹರಿ ಕುಮಾರ್ ಸೌತ್ ಬ್ಲಾಕ್ ಲಾನ್ಸ್ ನಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ  ಅವರು "ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕಡಲ ಭದ್ರತೆಗೆ ಹೆಚ್ಚಿನ ಒತ್ತು: ನೌಕಾಪಡೆಯ ನೂತನ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್
ಆರ್ ಹರಿ ಕುಮಾರ್
Follow us on

ದೆಹಲಿ: ನೌಕಾಪಡೆಯ ನೂತನ ಮುಖ್ಯಸ್ಥರಾಗಿ (Navy chief) ಅಡ್ಮಿರಲ್ ಆರ್. ಹರಿ ಕುಮಾರ್ (Admiral R Hari Kumar) ಮಂಗಳವಾರ ಅಧಿಕಾರ ವಹಿಸಿಕೊಂಡರು. 30 ತಿಂಗಳ ಅಧಿಕಾರಾವಧಿಯ ನಂತರ ಅಡ್ಮಿರಲ್ ಕೆಬಿ ಸಿಂಗ್ (Admiral KB Singh)ಅವರು ಇಂದು ಸೇವೆಯಿಂದ ನಿವೃತ್ತರಾದರು. ನೌಕಾಪಡೆಯ ನೂತನ ಮುಖ್ಯಸ್ಥ ಆರ್. ಹರಿ ಕುಮಾರ್ ಸೌತ್ ಬ್ಲಾಕ್ ಲಾನ್ಸ್ ನಲ್ಲಿ(South Block lawns)  ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ  ಅವರು “ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ. ಭಾರತೀಯ ನೌಕಾಪಡೆಯು ನಮ್ಮ ರಾಷ್ಟ್ರೀಯ ಕಡಲ ಹಿತಾಸಕ್ತಿ ಮತ್ತು ಸವಾಲುಗಳ ಮೇಲೆ ಕೇಂದ್ರೀಕರಿಸಿದೆ” ಎಂದು  ಹೇಳಿದರು. ಅವರು ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 12, 1962 ರಂದು ಜನಿಸಿದ ಅಡ್ಮಿರಲ್ ಕುಮಾರ್ ಅವರು ಜನವರಿ 1, 1983 ರಂದು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲ್ಪಟ್ಟರು. ಅವರು ಸುಮಾರು 39 ವರ್ಷಗಳ ಕಾಲ ತಮ್ಮ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಸೂಚನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ಅವರ ಸಮುದ್ರ ಕಮಾಂಡ್‌ಗಳಲ್ಲಿ ಐಎನ್‌ಎಸ್ ನಿಶಾಂಕ್, ಐಎನ್‌ಎಸ್ ಕೋರಾ ಮತ್ತು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಐಎನ್‌ಎಸ್ ರಣವೀರ್ ಸೇರಿವೆ. ಅವರು ವಿಮಾನವಾಹಕ ನೌಕೆ ವಿರಾಟ್​​ನ್ನು ನಿರ್ವಹಿಸಿದ್ದು ವೆಸ್ಟರ್ನ್ ಫ್ಲೀಟ್‌ನ ಫ್ಲೀಟ್ ಕಾರ್ಯಾಚರಣೆ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

FOC-in-C ವೆಸ್ಟರ್ನ್ ನೇವಲ್ ಕಮಾಂಡ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ಪ್ರಧಾನ ಕಚೇರಿಯ ಇಂಟಿಗ್ರೇಟೆಡ್ ಸ್ಟಾಫ್ ಕಮಿಟಿಯ ಮುಖ್ಯಸ್ಥರಾಗಿದ್ದರು.

ಅವರು ಅಮೆರಿಕದ ನೇವಲ್ ವಾರ್ ಕಾಲೇಜಿನಲ್ಲಿ ಕೋರ್ಸ್‌ಗಳನ್ನು ಮಾಡಿದ್ದಾರೆ. ಆರ್ಮಿ ವಾರ್ ಕಾಲೇಜ್, Mhow(Military Headquarters Of War), ಮತ್ತು ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್, ಯುಕೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (PVSM), ಅತಿ ವಿಶಿಷ್ಟ ಸೇವಾ ಪದಕ (AVSM) ಮತ್ತು ವಿಶಿಷ್ಟ ಸೇವಾ ಪದಕ (VSM) ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ:Twitter CEO: ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಪರಾಗ್ ಅಗರ್​ವಾಲ್ ನೇಮಕ