ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ

|

Updated on: May 27, 2021 | 11:14 AM

Covid- 19 impact on economy: ಕೋವಿಡ್- 19 ಬಿಕ್ಕಟ್ಟು ಮುಗಿದ ಮೇಲೆ ಈ ಜಗತ್ತು ಹೀಗಿರುವುದಿಲ್ಲ. ಆರ್ಥಿಕತೆ ಮೇಲೆ ಇದರ ಪ್ರಭಾವ ಅಗಾಧವಾದದ್ದು ಎಂದು ಬುದ್ಧ ಪೌರ್ಣಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ
ನರೇಂದ್ರ ಮೋದಿ
Follow us on

ಆರ್ಥಿಕತೆಯ ಮೇಲೆ ಕೋವಿಡ್- 19 ಪರಿಣಾಮ ಅಗಾಧವಾದದ್ದು. ಈ ಜಾಗತಿಕ ಬಿಕ್ಕಟ್ಟು ಮುಗಿದ ಮೇಲೆ ಈ ಜಗತ್ತು ಹೀಗಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. “ಜೀವಿತಾವಧಿಯಲ್ಲಿ ಒಂದು ಸಲ ಬರುವಂಥ ಈ ಜಾಗತಿಕ ಬಿಕ್ಕಟ್ಟು ಹಲವರ ಮನೆ ಬಾಗಿಲಿಗೆ ದುರಂತ ಮತ್ತು ದುಃಖವನ್ನು ತಂದಿದೆ. ಆರ್ಥಿಕ ಪರಿಣಾಮ ಕೂಡ ಅಗಾಧವಾಗಿದೆ. ಕೋವಿಡ್- 19 ನಂತರ ಈ ಭೂಮಿ ಹೀಗಿರುವುದಿಲ್ಲ. ಮುಂದಿನ ಕಾಲಘಟ್ಟದಲ್ಲಿ ಖಂಡಿತಾ ನಾವು ಕೋವಿಡ್ ಮುಂಚಿನ ಹಾಗೂ ಕೋವಿಡ್ ನಂತರ ಎಂದೇ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ. ಬುದ್ಧ ಪೌರ್ಣಮಿ ಅಂಗವಾಗಿ ಅವರು ಮಾತನಾಡುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2020ರಲ್ಲಿ ಕೊರೊನಾದಿಂದ ಒಂದೇ ರೀತಿಯಲ್ಲಿ ಪೆಟ್ಟು ತಿಂದ ವಿಶ್ವದ ಆರ್ಥಿಕತೆಯು 2021ರಲ್ಲಿ ವಿಭಿನ್ನವಾದ ಅದೃಷ್ಟವನ್ನು ನೋಡುವಂತಾಗಿದೆ. ಮುಂದುವರಿದ ಆರ್ಥಿಕತೆ ಮತ್ತು ಕೆಲವು ಮುಂದುವರಿಯುತ್ತಿರುವ ಆರ್ಥಿಕತೆಗಳು ಪ್ರಬಲವಾದ ಚೇತರಿಕೆ ಕಾಣುತ್ತಿದ್ದರೆ, ಭಾರತವೂ ಸೇರಿದಂತೆ ವಿಶ್ವದ ಇತರ ದೇಶಗಳು ಹಿಂದೆ ಉಳಿದಿವೆ.

ಕೊರೊನಾ ಬಿಕ್ಕಟ್ಟಿನ ಎರಡನೇ ಅಲೆಯ ಹೊಡೆತ ಭಾರತಕ್ಕೆ ಬಹಳ ಗಟ್ಟಿಯಾಗಿ ಬಿದ್ದಿದೆ. ಸ್ಥಳೀಯ ಲಾಕ್​ಡೌನ್​ಗಳಿಂದಾಗಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿವೆ. ಅಧಿಕೃತವಾಗಿ ಕೊರೊನಾ ಅಲೆಯು ಕಡಿಮೆಯಾಗಿದ್ದರೂ ಹಬ್ಬುತ್ತಿರುವ ವೇಗ ಕಡಿಮೆ ಆಗುತ್ತಿಲ್ಲ. ಆರ್ಥಿಕ ಚೇತರಿಕೆ ಎಂಬುದು ಸದ್ಯಕ್ಕೆ ಗುರುತಿಸಲು ಸಾಧ್ಯವಿಲ್ಲದಷ್ಟು ದೂರಕ್ಕೆ ಸಾಗಿದೆ. ಬಹಳ ವೃತ್ತಿಪರರು ಅಂದಾಜು ಮಾಡುವಂತೆ, ದೇಶದ ಬೆಳವಣಿಗೆ ದರವಯ 2021- 22ನೇ ಸಾಲಿಗೆ ಶೇ 10ಕ್ಕಿಂತ ಕಡಿಮೆ ಇರಲಿದೆ. ಜೆಪಿ ಮೋರ್ಗನ್ ಮತ್ತು ಬಾರ್​ಕ್ಲೇಸ್​ ಪ್ರಕಾರ ಕ್ರಮವಾಗಿ ಶೇ 9 ಮತ್ತು ಶೇ 9.2 ಅಂದಾಜು ಮಾಡಲಾಗಿದೆ.

ಕೊರೊನಾ ಎರಡನೇ ಅಲೆಯನ್ನು ಸರ್ಕಾರವು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ. ರಾಜಕೀಯ ಸಮಾವೇಶಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟು, ಕೊರೊನಾ ಹಬ್ಬುವುದಕ್ಕೆ ಕಾರಣ ಆಯಿತು. ಇದರಿಂದಾಗಿ ಈ ಹಿಂದೆಂದೂ ಕಾಣದಂಥ ಆರೋಗ್ಯ ಬಿಕ್ಕಟ್ಟನ್ನು ಕಾಣಬೇಕಾಯಿತು. ಇದರ ಜತೆಗೆ ಭಾರತದಲ್ಲಿ ಮೆಡಿಕಲ್ ಆಕ್ಸಿಜನ್​ ಕೊರತೆ, ಔಷಧಿಗಳು ಹಾಗೂ ಹೆಲ್ತ್​ಕೇರ್ ವ್ಯವಸ್ಥೆಗೆ ಎರಡನೇ ಅಲೆಯಲ್ಲಿ ಸಮಸ್ಯೆ ಆಗಿದೆ ಎಂದು ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಈ ಹಿಂದಿನ ವರ್ಷದ ಕೋವಿಡ್- 19ಗಿಂತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ: ಸಿಇಎ ಕೆ.ವಿ. ಸುಬ್ರಮಣಿಯನ್

(World will not be the same after covid-19 and this crisis impact on economy is huge, said by India PM Narendra Modi on the keynote address by him in Buddha Purnima event on Wednesday)