ಈ ಹಿಂದಿನ ವರ್ಷದ ಕೋವಿಡ್- 19ಗಿಂತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ: ಸಿಇಎ ಕೆ.ವಿ. ಸುಬ್ರಮಣಿಯನ್

ಈ ಹಿಂದಿನ ವರ್ಷದ ಕೋವಿಡ್- 19ಗಿಂತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ: ಸಿಇಎ ಕೆ.ವಿ. ಸುಬ್ರಮಣಿಯನ್
ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ (ಸಂಗ್ರಹ ಚಿತ್ರ)

ಕಳೆದ ವರ್ಷ ಕೋವಿಡ್- 19ನಿಂದ ಭಾರತದ ಆರ್ಥಿಕತೆ ತಲುಪಿದ್ದ ಸ್ಥಿತಿಗಿಂತ ಈ ವರ್ಷ ಬಹಳ ಉತ್ತಮವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಶುಕ್ರವಾರ ಅಮೆಜಾನ್​ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Srinivas Mata

|

Apr 16, 2021 | 9:44 PM

ಈ ಹಿಂದಿನ ವರ್ಷದ ಕೋವಿಡ್- 19 ಸ್ಥಿತಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿ ಇದೆ. ಅದಕ್ಕೆ ಕಾರಣ ಆಗಿರುವುದು ಲಸಿಕೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ಶುಕ್ರವಾರ ಹೇಳಿದರು. ಇ- ಕಾಮರ್ಸ್ ಕಂಪೆನಿಯಾದ ಅಮೆಜಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಅನಿಶ್ಚಿತತೆ ಕಡಿಮೆ ಇದೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು ಎಂದರು. “ಕೊರೊನಾ ಎರಡನೇ ಅಲೆ ಇದೆಯಾದ್ದರಿಂದ ಜನರು ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಮತ್ತು ಎಲ್ಲ ನಿಯಮಾವಳಿಗಳನ್ನು ಪಾಲಿಸಬೇಕು. ಆದರೆ ಒಟ್ಟಾರೆಯಾಗಿ ಈ ಹಿಂದಿನ ಸಂದರ್ಭಕ್ಕೆ ಹೋಲಿಸಿದಲ್ಲಿ ನಾವೀಗ ಉತ್ತಮ ಸ್ಥಿತಿಯಲ್ಲಿದ್ದೇವೆ. ಅದಕ್ಕೆ ಲಸಿಕೆ ಹೊರಬಂದಿರುವುದು ಮತ್ತು ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತಿರುವುದು ಕಾರಣ. ಆದ್ದರಿಂದ ಅನಿಶ್ಚಿತತೆ ಬಹಳ ಕಡಿಮೆ ಇದೆ,” ಎಂದು ಅವರು ಹೇಳಿದರು.

2020ರ ಮಾರ್ಚ್​ನಲ್ಲಿ ಕೋವಿಡ್- 19 ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ವಿಶ್ವದಲ್ಲೇ ಅತ್ಯಂತ ಕಠಿಣವಾದ ಲಾಕ್​ಡೌನ್ ಅನ್ನು ಭಾರತದಲ್ಲಿ ಹೇರಲಾಯಿತು. ಇದರಿಂದಾಗಿ ಜಿಡಿಪಿಯಲ್ಲಿ ಶೇ 24ರಷ್ಟು ಕುಸಿಯಿತು. ಈ ವರ್ಷದ ಮಾರ್ಚ್ ಆರಂಭದಿಂದ ಕೊರೊನಾ ಎರಡನೇ ಅಲೆ ತಲೆ ಎತ್ತಿದೆ. ಸೋಂಕು ಪ್ರಕರಣಗಳು ಹೆಚುತ್ತಿವೆ. ಕೋವಿಡ್- 19 ಪ್ರಕರಣಗಳ ಸರದಿಯನ್ನು ಮುರಿಯುವ ಸಲುವಾಗಿ ಹಲವು ರಾಜ್ಯಗಳಲ್ಲಿ ಸ್ಥಳೀಯ ನಿರ್ಬಂಧಗಳನ್ನು ಹೇರಲಾಗುತ್ತಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿದೆ
ಶುಕ್ರವಾರದ ಮಾಹಿತಿ ಅನ್ವಯ, ಭಾರತದಲ್ಲಿ 2,17,353 ಹೊಸ ಕೊರೊನಾ ಸೋಂಕು ಪ್ರಕರಣಗಳು ಒಂದು ದಿನದಲ್ಲಿ ಬಂದಿವೆ. ಆ ಮೂಲಕ ಒಟ್ಟಾರೆಯಾಗಿ ಕೋವಿಡ್- 19 ಪ್ರಕರಣಗಳ ಸಂಖ್ಯೆ 1,42,91,917 ತಲುಪಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶಗಳಿಂದ ತಿಳಿದುಬಂದಿದೆ. ದೇಶದಲ್ಲಿ ಸತತ ಎರಡನೇ ದಿನ ಎರಡು ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಅಮೆಜಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತು ಮುಂದುವರಿಸಿ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದು ಮುಖ್ಯ ಸಂಗತಿ ಆಗಿದ್ದೇನೆಂದರೆ ಇ-ಕಾಮರ್ಸ್ ಮತ್ತು ಡಿಜಿಟೈಸೇಷನ್ ಹೆಚ್ಚೆಚ್ಚು ಪ್ರಚಲಿತಕ್ಕೆ ಬಂದಿದ್ದು ಮತ್ತು ಭಾರತೀಯರು ಅದನ್ನು ಅಪ್ಪಿಕೊಂಡರು ಎಂದರು.

ಮುಂದುವರಿದ ಹಲವು ದೇಶಗಳಲ್ಲಿ 2 ತಿಂಗಳಿಗೂ ಹೆಚ್ಚು ಸಮಯ
80 ಕೋಟಿಯಷ್ಟು ಜನರಿಗೆ ಅಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣೆ ವ್ಯವಸ್ಥೆಯಿಂದ ಹಾಗೂ ನಗದು ವರ್ಗಾವಣೆಯನ್ನು ಜನ್​ಧನ್, ಆಧಾರ್, ಮೊಬೈಲ್ (JAM) ಮೂಲಕ ಮಾಡಲಾಗಿದೆ. ಅದು ಕೂಡ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಸಾಧ್ಯವಾಗಿದೆ. ಅಮೆರಿಕ ಸೇರಿದಂತೆ ಮುಂದುವರಿದ ಹಲವು ದೇಶಗಳಲ್ಲಿ ನಾಗರಿಕರಿಗೆ ಹಣಕಾಸು ನೆರವನ್ನು ಚೆಕ್ ಮೂಲಕ ವಿತರಿಸಲು 2 ತಿಂಗಳಿಗೂ ಹೆಚ್ಚು ಸಮಯ ಹಿಡಿಯಿತು ಎಂದು ಸುಬ್ರಮಣಿಯನ್ ಹೇಳಿದರು.

ಇ-ಕಾಮರ್ಸ್​ನಲ್ಲಿ ಆಗುತ್ತಿರುವ ಮಹತ್ತರವಾದ ಬೆಳವಣಿಗೆಗೆ ಭಾರತದ ಆರ್ಥಿಕತೆಯು ಸಂಸಿದ್ಧವಾಗಿದೆ ಎಂಬುದನ್ನು ತೋರಿಸಿದೆ ಎಂದು ಅವರು ತಿಳಿಸಿದರು. ಎಂಎಸ್​ಎಂಇಗಳು (ಮಧ್ಯಮ, ಸಣ್ಣ ಹಾಗೂ ಕಿರು ಸಂಸ್ಥೆಗಳು) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತು ಆವಿಷ್ಕಾರದಲ್ಲಿ ಹೂಡಿಕೆ ಮಾಡಿ ತಮ್ಮ ಉದ್ಯಮದಲ್ಲಿ ಬೆಳವಣಿಗೆ ಕಾಣಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: ಭಾರತದಲ್ಲಿ ಈ ವರ್ಷ ಉತ್ತಮ ಮುಂಗಾರು ನಿರೀಕ್ಷಿತ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯದ ಭರವಸೆ

(Chief Economic Advisor K.V. Subramanian Friday says, currently Indian economy is in better shape compared to last year covid- 19 situation)

Follow us on

Related Stories

Most Read Stories

Click on your DTH Provider to Add TV9 Kannada