Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು
ಭಾರತದಲ್ಲಿ 10 ಲಕ್ಷ ರೂಪಾಯಿ ಬಜೆಟ್ನೊಳಗೆ ಬರುವ ಟಾಪ್ 5 ಆಟೋಮೆಟಿಕ್ ಕಾರುಗಳಿವು. ಕಾರುಗಳು ಅಗತ್ಯ ಎನಿಸಿರುವ ದಿನಮಾನದಲ್ಲಿ ಈ ಲೇಖನದ ಮೂಲಕ ಕಾರುಗಳ ಖರೀದಿ ಆಯ್ಕೆಗೆ ಸಹಾಯ ಆಗಬಹುದು.
ಕಾರು ಖರೀದಿ ಅನ್ನೋದು ವಿಲಾಸಿ ವಿಚಾರವಾಗಿ ಈಗ ಉಳಿದಿಲ್ಲ. ಪ್ರತಿ ನಿತ್ಯದ ಅಗತ್ಯಕ್ಕೆ ಕಾರು ಬೇಕು ಎನ್ನುವಂತಾಗಿದೆ. ಹಾಗಂತ ಎಲ್ಲರಿಗೂ ಕಾರು ಬೇಕು ಎಂದು ಸಾರ್ವತ್ರಿಕವಾಗಿ ಹೇಳುತ್ತಿಲ್ಲ. ನಗರದ ಹೊರವಲಯಗಳಲ್ಲಿ ವಾಸ ಇರುವವರಿಗೆ, ಸಾರ್ವಜನಿಕ ಸಾರಿಗೆ ಸಂಪರ್ಕ ಕಷ್ಟ ಆಗಿರುವವರಿಗೆ ಕಾರು ಅಗತ್ಯವಾಗಿ ಮಾರ್ಪಟ್ಟಿದೆ. ವಾಹನ ಖರೀದಿ ಮಾಡಬೇಕು ಅಂದಾಗ ಕಾಸು ಖರ್ಚು ಮಾಡೋದು ಮಾತ್ರವಲ್ಲ, ಬುದ್ಧಿಯನ್ನೂ ಖರ್ಚು ಮಾಡಬೇಕು. ಹಲವು ಸಂಗತಿಗಳ ಬಗ್ಗೆ ಆಲೋಚನೆ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ಅಂಥ ಸಂಗತಿಗಳಲ್ಲಿ ಆಟೋಮೆಟಿಕ್ ಗೇರ್ಬಾಕ್ಸ್ ಕೂಡ ಒಂದು. ಉದಾಹರಣೆಗೆ ಆಟೋಮೆಟಿಕ್ ಕಾರುಗಳನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ಆಟೋಮೆಟಿಕ್ ಕಾರುಗಳು ಮ್ಯಾನ್ಯುಯಲ್ ಕಾರುಗಳಿಗಿಂತ ಕನಿಷ್ಠ 1 ಲಕ್ಷ ರೂಪಾಯಿ ಹೆಚ್ಚಿಗೆ ಆಗುತ್ತವೆ.
ಒಂದು ವೇಳೆ ನೀವು ಕಾರು ಖರೀದಿ ಮಾಡಬೇಕು ಅಂತಿದ್ದು, 10 ಲಕ್ಷ ರೂಪಾಯಿಯೊಳಗಿನ ಆಟೋಮೆಟಿಕ್ ಟ್ರಾನ್ಸ್ಮಿಷನ್ ಹೈ ಎಂಡ್ ಹ್ಯಾಚ್ಬ್ಯಾಕ್ ಕಾರುಗಳಿಗಾಗಿ ಎದುರು ನೋಡುತ್ತಿದ್ದಲ್ಲಿ ನಿಮಗಾಗಿಯೇ ಇಲ್ಲಿ ಕೆಲವು ಆಯ್ಕೆಗಳನ್ನು ನೀಡಲಾಗಿದೆ.
ಮಾರುತಿ ಸುಜುಕಿ ಬಲೆನೋ ಮಾರುತಿ ಸುಜುಕಿ ಕಂಪೆನಿಯ ಬಲೆನೋ ಕಾರು K12M ಮೋಟಾರ್ ಜತೆಗೆ ಸಿವಿಟಿ ಗೇರ್ಬಾಕ್ಸ್ನಿಂದ ನಡೆಯುತ್ತದೆ. ಅದ್ಭುತ ಚಾಲನಾ ಅನುಭವವನ್ನು ನೀಡುತ್ತದೆ. ಈ ಹ್ಯಾಚ್ಬ್ಯಾಕ್ನಿಂದ ಪ್ರೀಮಿಯಂ ಅನುಭೂತಿ ದೊರೆಯಲಿದ್ದು, ವಿಶಾಲವಾಗಿ- ಸುಂದರವಾದ ಹಾಗೂ ಪ್ರಾಕ್ಟಿಕಲ್ ಆಗಿ ರೂಪಿಸಲಾದ ಇಂಟೀರಿಯರ್ಸ್ ಹೊಂದಿದೆ. ಇನ್ನು ಹೊಸ ಪ್ರೀಮಿಯಂ ವಿಭಾಗದ ವಾಹನಗಳಲ್ಲಿ ಏನೆಲ್ಲ ವೈಶಿಷ್ಟ್ಯಗಳನ್ನು ನಿರೀಕ್ಷೆ ಮಾಡುತ್ತೀರೋ ಅವೆಲ್ಲವೂ ಇದರಲ್ಲಿದೆ. ಇದರಿಂದ ಈ ವಾಹನ ಪೈಸಾ ವಸೂಲ್ ಎನಿಸುತ್ತದೆ.
ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ದಕ್ಷಿಣ ಕೊರಿಯಾದ ಆಟೋಮೊಬೈಲ್ ದೈತ್ಯ ಕಂಪೆನಿಯಾದ ಹುಂಡೈ, ಗ್ರ್ಯಾಂಡ್ ಐ10 ನಿಯೋಸ್ ಮೂಲಕ ಸ್ಪೋರ್ಟ್ಸ್ ಮಾತ್ರ ಅಲ್ಲ, ವಿಲಾಸಿ ಬಾಹ್ಯನೋಟವನ್ನು, ಇದರ ಜತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ವಾಹನವು ಆಟೋಮೆಟಿಕ್ ಮ್ಯಾನ್ಯುಯಲ್ ಟ್ರಾನ್ಸ್ಮಿಷನ್ನೊಂದಿಗೆ (ಎಎಂಟಿ) ಬರುತ್ತದೆ. ಆದರೆ ಇದು ಸಿವಿಟಿಯಷ್ಟು ಸರಾಗ ಮತ್ತು ಸುಲಲಿತ ಅಲ್ಲದಿದ್ದರೂ ಒಟ್ಟಾರೆಯಾಗಿ ಅಗತ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತದೆ. ಈ ಕಾರು ಪೆಟ್ರೋಲ್- ಡೀಸೆಲ್ ಎಂಜಿನ್ ಎರಡರಲ್ಲೂ ಲಭ್ಯ ಇದೆ.
ಹೊಸ ಹುಂಡೈ ಐ20 ದಕ್ಷಿಣ ಕೊರಿಯಾ ಮೂಲದ ಹುಂಡೈ ಕಂಪೆನಿಯ ಹೊಸ ಪ್ರೀಮಿಯಂ ಹ್ಯಾಚ್ಬ್ಯಾಕ್ ಐ20 ಕಾರು ಸ್ಟೈಲ್ ಮತ್ತು ವೈಶಿಷ್ಟ್ಯಗಳ ಮಿಶ್ರಣಕ್ಕೆ ಸರಿಯಾದ ನಿದರ್ಶನ. ಹೊಸ ಐ20 ಸರಾಗವಾದ ಚಾಲನೆ ಅನುಭವವನ್ನು ನೀಡುತ್ತದೆ. ಆಟೋಮೆಟೆಡ್ ಮ್ಯಾನ್ಯುಯೆಲ್ ಆಯ್ಕೆಯಲ್ಲಿ ಇದು ಲಭ್ಯವಿದೆ. ಡ್ಯುಯಲ್ ಕ್ಲಚ್ ಆಟೋ ವರ್ಷನ್ ಮತ್ತು ಸಿವಿಟಿಯು ವಿವಿಧ ವರ್ಗದ ಖರೀದಿದಾರರ ಅಗತ್ಯಗಳನ್ನು ಪೂರೈಸುತ್ತದೆ. ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಆಯ್ಕೆಯು ಬಜೆಟ್ ಮೀರಿದ ದರದೊಂದಿಗೆ ಬರುತ್ತದೆ ಮತ್ತು 10 ಲಕ್ಷ ರೂಪಾಯಿ ಬಜೆಟ್ ದಾಟುತ್ತದೆ.
ಫೋಕ್ಸ್ವ್ಯಾಗನ್ ಪೋಲೋ ದೀರ್ಘಾವಧಿಯಿಂದ ಮಾರುಕಟ್ಟೆಯಲ್ಲಿ ಇದ್ದರೂ ಫೋಕ್ಸ್ವ್ಯಾಗನ್ ಪೋಲೋ ತನ್ನ ಹೊಳಪನ್ನು ಕಳೆದುಕೊಂಡಿಲ್ಲ. ಇದು 1.0 ಲೀಟರ್ ಟಿಎಸ್ಐ ಎಂಜಿನ್ ಜತೆಗೆ ಬರುತ್ತದೆ. ಟಾರ್ಕ್ ಕನ್ವರ್ಟರ್ ಗೇರ್ಬಾಕ್ಸ್ ಮತ್ತು ವಿಶಾಲವಾದ ಕ್ಯಾಬಿನ್ ಹಾಗೂ ಇತ್ತೀಚಿನ ಫೀಚರ್ಗಳ ಜತೆಗೆ ಬರುತ್ತದೆ.
ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಶಕ್ತಿಶಾಲಿಯಾದ 1.2 ಲೀಟರ್ ಡ್ಯುಯಲ್ ಜೆಟ್ ಎಂಜಿನ್ನೊಂದಿಗೆ ಬರುತ್ತದೆ. ಈ ಹಿಂದೆ 83 hp, 1.2 ಲೀಟರ್ K ಎಂಜಿನ್ ಜತೆ ಬರುತ್ತಿತ್ತು. ಈ ವಾಹನ ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ. ಆರಾಮದಾಯಕ ಎಂಬ ವಿಚಾರಕ್ಕೆ ಬಂದಲ್ಲಿ ಸಮಾಧಾನಕರವಾದ ಪರ್ಫಾರ್ಮೆನ್ಸ್ ನೀಡುತ್ತದೆ.
ಇದನ್ನೂ ಓದಿ: Bajaj Auto CT110X Launch: ಬಜಾಜ್ ಆಟೋ CT110X ಹೊಸ ಬೈಕ್ ಬಿಡುಗಡೆ, ಬೆಲೆ ರೂ. 55,494
ಇದನ್ನೂ ಓದಿ: 5G ಕನೆಕ್ಟಿವಿಟಿ ಇರುವ, ಒಂದು ಚಾರ್ಜ್ಗೆ 800 ಕಿ.ಮೀ. ಸಾಗಬಲ್ಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್
(Top 5 automatic cars which come under Rs 10 lakh budget in India)