Bajaj Auto CT110X Launch: ಬಜಾಜ್ ಆಟೋ CT110X ಹೊಸ ಬೈಕ್ ಬಿಡುಗಡೆ, ಬೆಲೆ ರೂ. 55,494
ಬಜಾಜ್ ಆಟೋದಿಂದ CT110X ಬೈಕ್ ಬಿಡುಗಡೆ ಮಾಡಲಾಗಿದೆ. ಎಕ್ಸ್ ಶೋರೂಂ ಬೆಲೆ ರೂ. 55,494 ಇದ್ದು, ಈ ಬೈಕ್ ಬಗೆಗಿನ ಮತ್ತಿತರ ಮಾಹಿತಿಗಳು ತಿಳಿಯಲು ಮುಂದಿದೆ ವಿವರಗಳು.
ಬಜಾಜ್ ಆಟೋದಿಂದ CT110X ಹೆಸರಿನ ಹೊಸ ಬೈಕ್ ಬಿಡುಗಡೆ ಮಾಡಲಾಗಿದೆ. ಈ ಹೊಸ ಬೈಕ್ ಬಜಾಜ್ ಸಿಟಿ110ನ ವಿಸ್ತರಣೆಯ ವರ್ಷನ್ ಆಗಿದ್ದು, ಈ ಹೊಸ ಬೈಕ್ನ ಬೆಲೆ ರೂ. 55,494 (ಎಕ್ಸ್- ಶೋರೂಂ) ಆಗಿದೆ. ಹೊಸ ವೇರಿಯಂಟ್ ಸಿ.ಟಿ. ಸರಣಿಯ ಮೇಲ್ಸ್ತರದಲ್ಲಿ ನಿಲ್ಲುತ್ತದೆ. ಬಜಾಜ್ ಸಿಟಿ110X ಮೋಟಾರ್ಸೈಕಲ್ 115 ಸಿಸಿ DTS-i ಎಂಜಿನ್ ಹೊಂದಿದೆ. ಹಿಂಭಾಗದಲ್ಲಿ ಕ್ಯಾರಿಯರ್ ಸಹಿತ ಈ ಬೈಕ್ ಬರಲಿದ್ದು, ಅದರಲ್ಲಿ 7 ಕೇಜಿ ತನಕ ತೂಕ ಒಯ್ಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಇದರ ಜೊತೆಗೆ ಸೆಮಿ ನಾಬಿ ಟೈರ್ಗಳು, ಸ್ಕ್ವೇರ್ ಟ್ಯೂಬ್ ಮತ್ತು ಟ್ಯಾಂಕ್ ಪ್ಯಾಡ್ಗಳು ಇವೆಲ್ಲವೂ ಬರುವುದರಿಂದ ಸಾಂಪ್ರದಾಯಿಕ ಸಿಟಿ110 ಮಾಡೆಲ್ಗಿಂತ ಭಿನ್ನವಾಗಿರುತ್ತದೆ.
ಕಂಪೆನಿ ಹೇಳಿರುವ ಪ್ರಕಾರ, ಸಿಟಿ110X ಗ್ರೌಂಡ್ ಕ್ಲಿಯರೆನ್ಸ್ 170 ಮಿಲಿಮೀಟರ್ ಇದ್ದು, ಭಾರತದ ರಸ್ತೆಗಳಲ್ಲಿ ಚಲಿಸುವುದು ಬಹಳ ಸರಾಗ ಆಗಲಿದೆ ಎಂದು ಹೇಳಲಾಗಿದೆ. ಇನ್ನು ವ್ಹೀಲ್ ಬೇಸ್ ಕೂಡ 1285 ಮಿಲಿಮೀಟರ್ ಇದ್ದು, ಕೆಟ್ಟು ಮತ್ತು ಸಮತಟ್ಟಾಗಿ ಇಲ್ಲದ ರಸ್ತೆಗಳಲ್ಲೂ ಉತ್ತಮ ಸ್ಥಿರತೆಯನ್ನು ನೀಡುತ್ತದೆ.
“CT110X ಬಿಡುಗಡೆಯ ಮೂಲಕ ನಾವು ವಿಭಿನ್ನವಾದ ಉತ್ಪನ್ನವನ್ನು ಒದಗಿಸುತ್ತಿದ್ದೇವೆ. ಇದು ಅತ್ಯುತ್ತಮ ವೈಶಿಷ್ಟ್ಯ, ಆರಾಮದಾಯಕ ಚಾಲನೆ ಹಾಗೂ ಮೈಲೇಜ್ ಜತೆಗೆ ಯಾವುದೇ ರಾಜೀ ಇಲ್ಲದೆ ದೀರ್ಘಾವಧಿ ಬಾಳಿಕೆ ನೀಡುತ್ತದೆ,” ಎಂದು ಬಜಾಜ್ ಆಟೋ ಲಿಮಿಟೆಡ್ ಮೋಟಾರ್ಸೈಕಲ್ಸ್ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದ್ದಾರೆ. “ಸಿ.ಟಿ. ಬ್ರ್ಯಾಂಡ್ನಲ್ಲಿ ನಾವು ಚಾಲಕ ಕೇಂದ್ರಿತ ಆವಿಷ್ಕಾರಗಳನ್ನು ಮಾಡಿದ್ದೇವೆ. ನಮ್ಮ ಹೊಸ ಕೊಡುಗೆಗಳು- CT110X ಈ ಸೆಗ್ಮೆಂಟ್ನಲ್ಲಿ ಗ್ರಾಹಕರಿಗೆ ಇನ್ನಷ್ಟು ಉತ್ತಮವಾಗಿ ಸೇವೆ ಒದಗಿಸಲು ನೆರವು ನೀಡುತ್ತವೆ,” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬೈಕ್ ಸವಾರರೇ ಎಚ್ಚರ; ದಂಡ ವಸೂಲಿಗಾಗಿ ಪೊಲೀಸರಿಗೆ ಸಿಕ್ಕಿದೆ ಹೊಸ ಅಸ್ತ್ರ
ಇದನ್ನೂ ಓದಿ: ಹಣ ಕಡಿಮೆ, ಫೀಚರ್ ಜಾಸ್ತಿ; 5 ಲಕ್ಷದೊಳಗೆ ಸಿಗೋ ಟಾಪ್ 5 ಬಜೆಟ್ ಫ್ರೆಂಡ್ಲಿ ಕಾರುಗಳು!
(Bajaj Auto launched CT110X bike in India. Ex showroom price Rs. 55,494.)