ಜೋಶಿಮಠದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಹೆಚ್ಚಿದ ಆತಂಕ; ಅಲಿಗಢದ ಮನೆಗಳಲ್ಲಿ ಬಿರುಕು

| Updated By: ಸುಷ್ಮಾ ಚಕ್ರೆ

Updated on: Jan 11, 2023 | 2:05 PM

ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿಯುವ ಭೀತಿಯ ನಡುವೆ ಉತ್ತರ ಪ್ರದೇಶದ ಕನ್ವರಿಗಂಜ್ ನಗರದಲ್ಲಿ ಬಿರುಕು ಉಂಟಾಗಿರುವುದು ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿದೆ.

ಜೋಶಿಮಠದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಹೆಚ್ಚಿದ ಆತಂಕ; ಅಲಿಗಢದ ಮನೆಗಳಲ್ಲಿ ಬಿರುಕು
ಅಲಿಗಢದ ಮನೆಗಳಲ್ಲಿ ಬಿರುಕು
Image Credit source: India Today
Follow us on

ಅಲಿಗಢ: ಜೋಶಿಮಠದಲ್ಲಿ (Joshimath Sinking) ಅನೇಕ ಮನೆಗಳಲ್ಲಿ ಬಿರುಕು ಉಂಟಾಗಿ ಭಾರೀ ಆತಂಕ ಶುರುವಾಗಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಅಲಿಗಢದ ಕನ್ವರಿಗಂಜ್ ಪ್ರದೇಶದಲ್ಲಿ 5 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿಯುವ ಭೀತಿಯ ನಡುವೆ ಉತ್ತರ ಪ್ರದೇಶದ (Uttar Pradesh) ಕನ್ವರಿಗಂಜ್ ನಗರದಲ್ಲಿ ಬಿರುಕು ಉಂಟಾಗಿರುವುದು ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿದೆ. ಜೋಶಿಮಠ ಪಟ್ಟಣದಲ್ಲಿರುವ ನೂರಾರು ಕುಟುಂಬಗಳು ಈ ಕೊರೆಯುವ ಚಳಿಗಾಲದಲ್ಲಿ ನಿರಾಶ್ರಿತರಾಗುವ ಅಪಾಯ ಎದುರಾಗಿದೆ.

ಕಳೆದ ಹಲವಾರು ದಿನಗಳಿಂದ ಕನ್ವರಿಗಂಜ್​ನಲ್ಲಿರುವ ಕೆಲವು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇದರಿಂದಾಗಿ ನಾವು ಭಯಭೀತರಾಗಿದ್ದೇವೆ. ಈ ಬಗ್ಗೆ ದೂರು ನೀಡಿದರೂ ಪಾಲಿಕೆ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಕೇವಲ ಭರವಸೆ ನೀಡುತ್ತಿದ್ದಾರೆ. ಮನೆಗಳು ಕುಸಿದು ಬೀಳಬಹುದು ಎಂದು ನಾವು ಭಯಪಡುತ್ತಿದ್ದೇವೆ ಎಂದು ಸ್ಥಳೀಯರಾದ ಶಶಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಇದನ್ನೂ ಓದಿ: Joshimath Sinking: ಜೋಶಿಮಠ ಅನಾಹುತದ ಬಗ್ಗೆ ಐಐಟಿ ರೋಪರ್ ಸಂಶೋಧಕರಿಂದ 2021ರಲ್ಲೇ ಸಿಕ್ಕಿತ್ತು ಸುಳಿವು

ಉತ್ತರ ಪ್ರದೇಶ ನಗರದ ಸ್ಥಳೀಯರ ಪ್ರಕಾರ, ಸರ್ಕಾರದ ಸ್ಮಾರ್ಟ್ ಸಿಟಿ ಉಪಕ್ರಮದ ಅಡಿಯಲ್ಲಿ ಹಾಕಲಾದ ಪೈಪ್‌ಲೈನ್ ಈಗ ಸೋರಿಕೆಯಾಗುತ್ತಿದೆ. ಇದೇ ಮನೆಗಳಲ್ಲಿ ಬಿರುಕು ಉಂಟಾಗಲು ಕಾರಣವಾಗಿದೆ. ಬಿರುಕು ಶುರುವಾಗಿ ಸುಮಾರು 4 ದಿನಗಳು ಕಳೆದಿವೆ. ಸಂಬಂಧಪಟ್ಟ ಇಲಾಖೆಗಳಿಗೆ ಈ ಬಗ್ಗೆ ತಿಳಿಸಿದ್ದರೂ ಇದುವರೆಗೆ ಯಾವುದೇ ನೆರವು ನೀಡಿಲ್ಲ ಎಂದು ಮತ್ತೊಬ್ಬ ಸ್ಥಳೀಯ ಅಫ್ಶಾ ಮಶ್ರೂರ್ ಆರೋಪಿಸಿದ್ದಾರೆ.

ಇದನ್ನೂ ಓದಿ: Joshimath Sinking: ಜೋಶಿಮಠ ಮಾತ್ರವಲ್ಲ ಅಕ್ಕಪಕ್ಕದ ಪ್ರದೇಶಗಳು ವರ್ಷಕ್ಕೆ 2.5 ಇಂಚುಗಳಷ್ಟು ಮುಳುಗುತ್ತಿವೆ

ಮನೆಗಳಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಪೌರಾಯುಕ್ತರ ತಂಡ ರಾತ್ರಿ ಬುಲ್ಡೋಜರ್‌ಗಳೊಂದಿಗೆ ಆಗಮಿಸಿದೆ. ಮುಖ್ಯ ಎಂಜಿನಿಯರ್ ಸತೀಶ್ ಚಂದ್ರ ಭದ್ರತೆಯ ದೃಷ್ಟಿಯಿಂದ ಸಂತ್ರಸ್ತ ಮನೆಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ರಸ್ತೆಯ ಕೆಳಗೆ ಬಿರುಕು ಬಿಟ್ಟ ಪರಿಣಾಮ ಮನೆಗಳು ಬಿರುಕು ಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ, ಇಲ್ಲಿನ ನಿವಾಸಿಗಳಿಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Wed, 11 January 23