ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ (Y. S. Rajasekhara Reddy) ಸಹೋದರ ವೈ.ಎಸ್. ವಿವೇಕಾನಂದ ರೆಡ್ಡಿ(Y S Vivekananda) ಹತ್ಯೆಯಾಗಿ ಎರಡು ವರ್ಷಕ್ಕೂ ಅಧಿಕ ಕಾಲವಾಗಿದೆ. ಈ ಹತ್ಯೆಯ ಆರೋಪಿ ಈಗ ಸಿಬಿಐ ಬಳಿ ಸಿಕ್ಕಿಬಿದ್ದಿದ್ದಾನೆ. ಸುನೀಲ್ ಯಾದವ್ ಎಂಬಾತ ವೈ.ಎಸ್. ವಿವೇಕಾನಂದ ರೆಡ್ಡಿಯವರ ಹತ್ಯೆಯ ಆರೋಪಿಯಾಗಿದ್ದು, ಸೋಮವಾರ ಗೋವಾದಲ್ಲಿ ಸೆರೆಹಿಡಿಯಲಾಗಿದೆ. ಆತನನ್ನು ಬಂಧಿಸಿ, ಕೋರ್ಟ್ಗೆ ಹಾಜರು ಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಿಬಿಐ (CBI) ಮೂಲಗಳು ತಿಳಿಸಿದ್ದಾಗಿ, ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಇದರಲ್ಲಿ ಸುನೀಲ್ ಯಾದವ್ ಪ್ರಮುಖ ಆರೋಪಿ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿದ್ದು, ಅದರ ಅನ್ವಯ ಸಿಬಿಐ ಆತನನ್ನು ವಶಕ್ಕೆ ಪಡೆದಿದೆ. ಇನ್ನು ಸುನೀಲ್ನನ್ನು ಹಲವು ಬಾರಿ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಆದರೆ ನಂತರ ಆತ ಕುಟುಂಬದೊಂದಿಗೆ ಗೋವಾಕ್ಕೆ ಪರಾರಿಯಾಗಿದ್ದ. ವೈ.ಎಸ್.ವಿವೇಕಾನಂದ ರೆಡ್ಡಿಯವರೂ ಸಹ ಸಚಿವರಾಗಿದ್ದರು. ಕಡಪಾ ಜಿಲ್ಲೆಯ ತಮ್ಮ ಮನೆಯಲ್ಲಿ 2019ರ ಮಾರ್ಚ್ 15ರಂದು ಶವವಾಗಿ ಪತ್ತೆಯಾಗಿದ್ದರು. ಆಗ ಮನೆಯಲ್ಲಿ ಒಬ್ಬರೇ ಇದ್ದರು. ನಂತರ ಅವರ ಸಾವು ಸಹಜವಾಗಿ ಆಗಿದ್ದಲ್ಲ ಎಂದು ಕುಟುಂಬದವರೇ ಆರೋಪ ಮಾಡಿದ್ದರು.
ಈಗಿನ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಯವರ ಚಿಕ್ಕಪ್ಪನೇ ಆಗಿರುವ ವಿವೇಕಾನಂದ ರೆಡ್ಡಿಯವರ ಸಾವಿನ ತನಿಖೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಸಿಬಿಐಗೆ ವಹಿಸಿತ್ತು. ಹೀಗೆ ಸಿಬಿಐಗೆ ಪ್ರಕರಣ ವಹಿಸಲು ಕಾರಣ, ವಿವೇಕಾನಂದ ರೆಡ್ಡಿಯವರ ಪುತ್ರಿ ಸುನೀತಾ ರೆಡ್ಡಿ. ವಿವೇಕಾನಂದ ರೆಡ್ಡಿ ಹತ್ಯೆಯಲ್ಲಿ ಟಿಡಿಪಿ ಪಕ್ಷದ ಪಾತ್ರವಿದೆ ಎಂದು ವೈ.ಎಸ್. ಜಗನ್ ಮೋಹನ್ ರೆಡ್ಡಿ ಆರೋಪ ಮಾಡಿದ್ದರು ಮತ್ತು ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ಇವರು 2019ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಇತ್ತ ಸುನೀತಾ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನನಗೆ ನನ್ನ ಕಸಿನ್ ಆಗಿರುವ ಕಡಪಾ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಮತ್ತು ಅವರ ತಂದೆ ವೈ.ಎಸ್.ಭಾಸ್ಕರ್ ರೆಡ್ಡಿ ಮೇಲೆ ಅನುಮಾನವಿದೆ ಎಂದು ಹೇಳಿದ್ದರು. ಇನ್ನು ನನ್ನ ಸಹೋದರ ಸಂಬಂಧಿ ಜಗನ್ ರೆಡ್ಡಿಯವರೇ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ನಿಯೋಜಿಸಿದ್ದಾರೆ. ಯಾಕೆ ಅವರು ಸಿಬಿಐಗೆ ವಹಿಸುತ್ತಿಲ್ಲ ಎಂದೂ ಹೈಕೋರ್ಟ್ನಲ್ಲಿ ಸುನೀತಾ ಪ್ರಶ್ನಿಸಿದ್ದರು. ಇದರಿಂದ ಜಗನ್ ರೆಡ್ಡಿಯವರಿಗೆ ತೀವ್ರ ಮುಜುಗರ ಉಂಟಾಗಿತ್ತು. ನಂತರ ಆಂಧ್ರ ಹೈಕೋರ್ಟ್ ಈ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
ಪ್ರೀತಿ ಮಾಡುವಂತೆ ಬಾಲಕಿ ಹಿಂದೆ ಬಿದ್ದಿದ್ದ; ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿ ಕೊಚ್ಚಿ ಕೊಲೆ ಮಾಡಿದ