Air India: ಕಾಕ್​ಪಿಟ್​ನೊಳಗೆ ಗೆಳತಿ; ಪೈಲಟ್ ಅಧೋಗತಿ- ಒಬ್ಬ ಮಹಿಳೆಯಿಂದ ಪೈಲಟ್, ಕೋ-ಪೈಲಟ್, ಏರ್ ಇಂಡಿಯಾಗೆ ಫಜೀತಿ

|

Updated on: May 12, 2023 | 7:01 PM

DGCA Suspends License of Air India Pilot: ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಕಾಕ್​ಪಿಟ್​ನೊಳಗೆ ಪೈಲಟ್​ನ ಗೆಳತಿ ಹೋದ ಘಟನೆಯನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿದೆ. ಪೈಲಟ್​ನ ಲೈಸೆನ್ಸ್ 3 ತಿಂಗಳು ರದ್ದು ಮಾಡಿದೆ. ಏರ್ ಇಂಡಿಯಾಗೆ 30 ಲಕ್ಷ ದಂಡ ವಿಧಿಸಿದೆ. ಪೈಲಟ್ ಗೆಳತಿ ವಿರುದ್ಧ ಕ್ರಮಕ್ಕೆ ಸೂಚಿಸಿದೆ.

Air India: ಕಾಕ್​ಪಿಟ್​ನೊಳಗೆ ಗೆಳತಿ; ಪೈಲಟ್ ಅಧೋಗತಿ- ಒಬ್ಬ ಮಹಿಳೆಯಿಂದ ಪೈಲಟ್, ಕೋ-ಪೈಲಟ್, ಏರ್ ಇಂಡಿಯಾಗೆ ಫಜೀತಿ
ಏರ್ ಇಂಡಿಯಾ ವಿಮಾನದೊಳಗಿನ ದೃಶ್ಯದ ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ದಿಲ್ಲಿಯಿಂದ ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India) ಮಹಿಳೆಯೊಬ್ಬಳು ಕಾಕ್​ಪಿಟ್​ನೊಳಗೆ ಹೋದ ಪರಿಣಾಮ ಪೈಲಟ್​ನ ಪರವಾನಿಗೆಯನ್ನೇ (Pilot License) ತಾತ್ಕಾಲಿಕವಾಗಿ ರದ್ದು ಮಾಡಿದ ಘಟನೆ ವರದಿಯಾಗಿದೆ. ವಿಮಾನ ಹಾರಾಟದ ಮಾರ್ಗಮಧ್ಯೆ (Mid-air) ಕಾಕ್​ಪಿಟ್​ನೊಳಗೆ ಹೋದ ಮಹಿಳೆ ಆ ಪೈಲಟ್​ನ ಸ್ನೇಹಿತೆ ಎನ್ನಲಾಗಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆ ಪೈಲಟ್​ನ ಲೈಸೆನ್ಸ್ ಅನ್ನು 3 ತಿಂಗಳ ಕಾಲ ಅಮಾನತಿನಲ್ಲಿಟ್ಟಿದೆ. ಪೈಲಟ್​ಗೆ ಮಾತ್ರವಲ್ಲ ಏರ್ ಇಂಡಿಯಾ ಸಂಸ್ಥೆಗೂ 30 ಲಕ್ಷ ರೂ ದಂಡ ವಿಧಿಸಿದೆ. ಪೆಬ್ರುವರಿ 27ರಂದು ಈ ಘಟನೆ ನಡೆದದ್ದು. ಈ ಪ್ರಕರಣದ ವಿಚಾರಣೆಯನ್ನು ಸುದೀರ್ಘವಾಗಿ ನಡೆಸಿ ಡಿಜಿಸಿಎ ಇದೀಗ ತೀರ್ಪು ನೀಡಿದೆ.

ಪೈಲಟ್​ನ ಬೇಜವಾಬ್ದಾರಿ ವರ್ತನೆಗೆ ಡಿಜಿಸಿಎ ನಿರಾಸೆ ವ್ಯಕ್ತಪಡಿಸಿದೆ. ಹಾಗೆಯೇ, ವಿಮಾನದ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮ ಮತ್ತು ವ್ಯವಸ್ಥೆಯನ್ನು ಏರ್ ಇಂಡಿಯಾ ತಂದಿಲ್ಲ ಎಂದೂ ಡಿಜಿಸಿಎ ತರಾಟೆಗೆ ತೆಗೆದುಕೊಂಡಿದೆ. ಪೈಲಟ್ ಜೊತೆಗೆ ಇದ್ದ ಕೋಪೈಲಟ್​ಗೂ ಡಿಜಿಸಿಎ ಛೀಮಾರಿ ಹಾಕಿದೆ. ಈ ರೀತಿ ಹೊರಗಿನವರು ಕಾಕ್​ಪಿಟ್​ಗೆ ಬರುವಾಗ ನೀವೇನು ಮಾಡುತ್ತಿದ್ದೀರಿ, ಯಾಕೆ ಅದನ್ನು ತಡೆಯಲಿಲ್ಲ ಎಂದು ಕೋ ಪೈಲಟ್​ರನ್ನು ಪ್ರಶ್ನಿಸಲಾಗಿದೆ.

ಇದನ್ನೂ ಓದಿSuccess: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ

ಪೈಲಟ್​ನ ಕಾಕ್​ಪಿಟ್​ಗೆ ಹೋದ ಆ ಸ್ನೇಹಿತೆ ಯಾರು?

ಕುತೂಹಲ ಸಂಗತಿ ಎಂದರೆ ಅಂದು ದುಬೈಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕಾಕ್​ಪಿಟ್​ನೊಳಗೆ ಹೋದ ಪೈಲಟ್​ನ ಗೆಳತಿ ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿವರ್ಗಕ್ಕೆ ಸೇರಿದವರೇ ಆಗಿದ್ದರು. ವರದಿಗಳ ಪ್ರಕಾರ ಅವರು ಅಡ್ಮಿನಿಸಿಸ್ಟ್ರೇಷನ್ ವಿಭಾಗದಲ್ಲಿ ಕೆಲಸ ಮಾಡುವವರು. ಆದರೆ, ಅಂದು ದುಬೈಗೆ ಅವರು ಪ್ರಯಾಣಿಕರಾಗಿಯಷ್ಟೇ ವಿಮಾನದಲ್ಲಿದ್ದರು. ಹಾಗಿರುವಾಗ ಅವರು ಕಾಕ್​ಪಿಟ್​ಗೆ ಹೋಗುವಂತಿರಲಿಲ್ಲ.

ಕಾಕ್​ಪಿಟ್ ಎಂಬುದು ವಿಮಾನ ಚಲಾಯಿಸುವ ಜಾಗ. ಇದು ಬಹಳ ಸೂಕ್ಷ್ಮ ಹಾಗೂ ಬಹಳ ಮುಖ್ಯವಾದ ಜಾಗ. ಪೈಲಟ್ ಬಿಟ್ಟರೆ ಬೇರೆ ಯಾರಿಗೂ ಇಲ್ಲಿ ಪ್ರವೇಶ ಇರುವುದಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ವಿಮಾನ ದಿಕ್ಕು ತಪ್ಪಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಡಿಜಿಸಿಎ ಫೆಬ್ರುವರಿ 27ರ ಏರ್ ಇಂಡಿಯಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು.

ಇದನ್ನೂ ಓದಿTwitter: ಕೊನೆಗೂ ಇಲಾನ್ ಮಸ್ಕ್ ಕೈಗೆ ಸಿಕ್ರು ಹೊಸ ಸಿಇಒ; ಟ್ವಿಟ್ಟರ್ ಮಾಲೀಕನಿಗೆ ಮುಂದೇನು ಕೆಲಸ?

ಕಾಕ್​ಪಿಟ್​ನೊಳಗೆ ಹೋದ ಈ ಮಹಿಳೆಯ ಮೇಲೆ ಕ್ರಮ ಕೈಗೊಳ್ಳಬೇಕೆಂದೂ ಡಿಜಿಸಿಎ ಸೂಚಿಸಿದೆ. ಅವರದ್ದು ಮ್ಯಾನೇಜಿಂಗ್ ಜವಾಬ್ದಾರಿಯೇನಾದರೂ ಇದ್ದರೆ ಅದರಿಂದ ಅವರನ್ನು ನಿರ್ದಿಷ್ಟ ಅವಧಿಯವರೆಗೆ ವಿಯುಕ್ತಿಗೊಳಿಸಬೇಕೆಂದು ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Fri, 12 May 23