Sign In

By signing in or creating an account, you agree with Associated Broadcasting Company's Terms & Conditions and Privacy Policy.

Success: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ

Murali Divi Success Story: ಆಂಧ್ರದ ಸರ್ಕಾರಿ ನೌಕರನ ಕುಟುಂಬದಲ್ಲಿ ಜನಿಸಿದ ಮುರಳಿ ದಿವಿ ಎಪ್ಪತರ ದಶಕದಲ್ಲಿ ಮಣಿಪಾಲದಲ್ಲಿ ಪದವಿ ಮಾಡಿ ಆ ಬಳಿಕ ಅಮೆರಿಕಕ್ಕೆ ಹೋದವರು. ಭವಿಷ್ಯದ ದಾರಿ ಏನೆಂದು ಕಂಡುಕೊಳ್ಳಲು ಮಣಿಪಾಲವು ಮುರಳಿಗೆ ಟರ್ನಿಂಗ್ ಪಾಯಿಂಟ್ ಆಯಿತಂತೆ.

Success: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ
ಮುರಳಿ ದಿವಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2023 | 5:23 PM

ಮನಸಿದ್ದರೆ ಮಾರ್ಗ, ಯಶಸ್ಸಿನ ಶಿಖರ ಯಾರು ಬೇಕಾದರೂ ಮುಟ್ಟಬಹುದು, ಪ್ರಯತ್ನಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಎಂಬಿತ್ಯಾದಿ ಕಿವಿಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಈ ಮಾತುಗಳು ನಿಜವೇ ಆದರೂ ಯಶಸ್ಸಿನ ಮೆಟ್ಟಿಲು ಹತ್ತುವುದು ಅಷ್ಟು ಸುಲಭವೂ ಅಲ್ಲ ಅಷ್ಟು ಕಷ್ಟವೂ ಅಲ್ಲ. ಪ್ರತಿಭೆ, ಪರಿಶ್ರಮ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುವ ಪೂರಕ ಅಂಶಗಳು. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎನ್ನುತ್ತಾರೆ. ಯಶಸ್ಸು ಪಡೆಯಲು ಮೊದಲು ದಾರಿ ಕಂಡುಕೊಳ್ಳಬೇಕು. ಅಂದರೆ ಗುರಿ ಹೊಂದಿರಬೇಕು. ಆಗಲೇ ಅಲ್ಲವೇ ನಾವು ಯಶಸ್ವಿಯಾಗಿ ಮುಂದೆ ಸಾಗಲು ಸಾಧ್ಯ. ಇದಕ್ಕೆ ನಿದರ್ಶನ ಮುರಳಿ ದಿವಿ. ಅವರೀಗ 1.3 ಲಕ್ಷ ಕೋಟಿ ರೂ ಮೌಲ್ಯದ ದಿವಿಸ್ ಲ್ಯಾಬೊರೇಟರೀಸ್​ನ (Divi’s Laboratories) ಸಂಸ್ಥಾಪಕರು. ಅವರು ಈ ಹಂತಕ್ಕೆ ಹೋದ ಒಂದು ರೋಚಕ ಮತ್ತು ಸ್ಫೂರ್ತಿಯುತ ಕಥೆ ಇದು.

ಮಣಿಪಾಲದಲ್ಲಿ ಓದಿದ್ದ ಮುರಳಿ ದಿವಿ

ದಿವೀಸ್ ಲ್ಯಾಬೋರೇಟರೀಸ್ ಎಂಬುದು ಜೆನೆರಿಕ್ ಔಷಧ ತಯಾರಿಸುವ ಕಂಪನಿ. ಇದರ ಸಂಸ್ಥಾಪಕ ಮುರಳಿ ದಿವಿ ಮಂಗಳೂರಿನ ಮಣಿಪಾಲ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ. ಇಲ್ಲಿ ಪದವಿ ಓದುವಾಗಲೇ ಮುರಳಿ ದಿವಿಗೆ ತಮ್ಮ ಮುಂದಿನ ಗುರಿ ಏನು ಎಂಬುದು ಮನದಟ್ಟಾಯಿತಂತೆ. ತಮ್ಮ ಪ್ರತಿಭೆ, ತಮ್ಮ ಭವಿಷ್ಯ ಎಲ್ಲವೂ ಫಾರ್ಮಾ ಕ್ಷೇತ್ರದಲ್ಲಿದೆ ಎಂಬ ಜ್ಞಾನೋದಯ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜಿಕೇಶನ್​ನಲ್ಲಿ ಓದುವ ವೇಳೆ ಮುರಳಿ ದಿವಿಗೆ ಆಯಿತು.

ಇದನ್ನೂ ಓದಿ: US Crisis: ಸಾಲದ ಸುಳಿಯಲ್ಲಿ ಅಮೆರಿಕ; ಬಿಲ್ ಕಟ್ಟಲೂ ಆಗದ ಸ್ಥಿತಿ; ಎಷ್ಟಿದೆ ಅದರ ಸಾಲ? ಬೇರೆ ದೇಶಗಳಿಗೆ ಏನು ಎಫೆಕ್ಟ್?

ಮಣಿಪಾಲದಲ್ಲಿ ಪದವಿ ಮಾಡಿ 1976ರಲ್ಲಿ ಅಮೆರಿಕಕ್ಕೆ ಹೋಗಿ ಅಲ್ಲಿ ಔಷಧ ಮಾರಾಟಗಾರರಾಗಿ ಕೆಲಸ ಮಾಡಲಾರಂಭಿಸಿದರು. ಅಪ್ಪನ ಪಿಂಚಣಿ ಹಣದಲ್ಲಿ ಇಡೀ ಕುಟುಂಬದ ನಿರ್ವಹಣೆ ಆಗಬೇಕಿದ್ದ ಪರಿಸ್ಥಿತಿಯಲ್ಲಿ ಬೆಳೆದಿದ್ದ ಮುರಳಿ ದಿವಿ, ಅಮೆರಿಕದಲ್ಲಿ ಫಾರ್ಮಾ ಮಾರಾಟ ಕ್ಷೇತ್ರದಲ್ಲಿ ಪಳಗಿದ ಕೈ ಎನಿಸಿದರು. ಅವರು ವರ್ಷಕ್ಕೆ 65 ಸಾವಿರ ಡಾಲರ್ (ಸುಮಾರು 53 ಲಕ್ಷ ರೂ) ದುಡಿಯುವಷ್ಟು ಬೆಳೆದರು.

ಆಂಧ್ರ ಪ್ರದೇಶದ ಮುರಳಿ ದಿವಿ 1984ರಲ್ಲಿ ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಡಾ. ರೆಡ್ಡೀಸ್ ಲ್ಯಾಬ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ 6 ವರ್ಷ ಕೆಲಸ ಮಾಡಿದ ಅವರು 1990ರಲ್ಲಿ ತಮ್ಮದೇ ಔಷಧ ಸಂಶೋಧನಾ ಸಂಸ್ಥೆ ದಿವಿಸ್ ಲ್ಯಾಬೋರೇಟರೀಸ್ ಅರಂಭಿಸುತ್ತಾರೆ. ಫಾರ್ಮಾ ಉತ್ಪನ್ನಗಳಿಗೆ ಬೇಕಾದ ಪ್ರಮುಖ ಹೂರಣಗಳನ್ನು ತಯಾರಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ತೆಲಂಗಾಣ ಮತ್ತು ವಿಶಾಖಪಟ್ಟಣಂನಲ್ಲಿ ಎರಡು ತಯಾರಕಾ ಘಟಕಗಳನ್ನು ಸ್ಥಾಪಿಸುತ್ತಾರೆ. ಇವತ್ತು ಜಾಗತಿಕ ಫಾರ್ಮಾ ಕಂಪನಿಗಳಿಗೆ ಆಕ್ಟಿವ್ ಇಂಗ್ರೆಡಿಯೆಂಟ್ಸ್ ಸರಬರಾಜು ಮಾಡುವ ಅಗ್ರಜರಲ್ಲಿ ದಿವೀಸ್ ಲ್ಯಾಬೋರಟರೀಸ್ ಒಂದಾಗಿದೆ. ಇದರ ಷೇರು ಬೆಲೆ 3,300 ರೂ ಆಸುಪಾಸಿನಲ್ಲಿದೆ. ಒಟ್ಟು ಷೇರುಸಂಪತ್ತು 1.3 ಲಕ್ಷ ಕೋಟಿ ರೂ ಇದೆ.

ಇದರೊಂದಿಗೆ ಮುರಳಿ ದಿವಿ ಅವರು ವಿಶ್ವದ ಅತಿ ಶ್ರೀಮಂತ ವಿಜ್ಞಾನಿಗಳಲ್ಲಿ ಒಬ್ಬರೆನಿಸಿದ್ದಾರೆ. ಅಪ್ಪಟ ಮಧ್ಯಮ ವರ್ಗದ ಕುಟುಂಬದಿಂದ ಬೆಳೆದ ಮುರಳಿ ದಿವಿ ಈಗ ಇಷ್ಟೊಂದು ಎತ್ತರಕ್ಕೆ ಏರಿರುವುದು ನಿಜಕ್ಕೂ ಗಮನಾರ್ಹ ಎನಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ