ಬರೋಬ್ಬರಿ 69 ವರ್ಷಗಳ ಬಳಿಕ ಏರ್ ಇಂಡಿಯಾ (Air India) ಮತ್ತೆ ಟಾಟಾ ಸಮೂಹ ಸಂಸ್ಥೆಯ ತೆಕ್ಕೆಗೆ ಸೇರಿದೆ. ನಿನ್ನೆ (ಜ.27) ಅಧಿಕೃತವಾಗಿ ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ಗೆ ಸೇರಿದೆ. ಮುಂಬೈನಿಂದ ಕಾರ್ಯನಿರ್ವಹಿಸುವ ನಾಲ್ಕು ವಿಮಾನಗಳಲ್ಲಿ ವಿಶೇಷವಾದ ಊಟದ ಸೇವೆ ಪರಿಚಯಿಸುವ ಮೂಲಕ ಟಾಟಾ ಗ್ರೂಪ್ (Tata Group) ಏರ್ ಇಂಡಿಯಾದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಈ ಮೂಲಕ ಏರ್ ಇಂಡಿಯಾ ಸಾರ್ವಜನಿಕ ವಲಯದಿಂದ ಖಾಸಗಿ ವಲಯಕ್ಕೆ ಸೇರಿಕೊಂಡಿದೆ. ಈ ಕುರಿತು ನಿನ್ನೆ ಸಿಬ್ಬಂದಿಗೂ ಇ ಮೇಲ್ (E mail) ಮೂಲಕ ಮಾಹಿತಿಯನ್ನು ತಿಳಿಸಲಾಗಿದೆ. ಇನ್ನು ಏರ್ ಇಂಡಿಯಾ ತಮ್ಮ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಧಿಕೃತವಾಗಿ ತಾವು ಟಾಟಾ ಗ್ರೂಪ್ಗೆ ಸೇರಿರುವ ಬಗ್ಗೆ ಘೋಷಣೆ ಮಾಡಲು ಬಯಸಿದೆ.
ಶುಕ್ರವಾರ (ಜ.28) ಸಂಚರಿಸುವ ಎಲ್ಲಾ ವಿಮಾನಗಳಲ್ಲಿ ಅಧಿಕೃತವಾಗಿ ಟಾಟಾ ಗ್ರೂಪ್ ಸೇರಿರುವ ಬಗ್ಗೆ ಅನೌನ್ಸ್ಮೆಂಟ್ ಮಾಡುವಂತೆ ಸಂಸ್ಥೆ ಪೈಲೆಟ್ಗಳಿಗೆ ತಿಳಿಸಿದೆ. ಅಲ್ಲದೆ ಘೋಷಣೆಯಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನೂ ಏರ್ ಇಂಡಿಯಾ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎನ್ಡಿಟಿವಿ ವರದಿ ಮಾಡಿದೆ. ಇಂದು ವಿಮಾನದಲ್ಲಿ ಆಗುವ ಪ್ರಕಟಣೆಯಲ್ಲಿ, ಪೈಲೆಟ್ ಪ್ರಯಾಣಿಕರನ್ನು ಉದ್ದೇಶಿಸಿ, ‘ವಿಶೇಷ ವಿಮಾನಕ್ಕೆ ನಿಮಗೆಲ್ಲ ಸ್ವಾಗತ, ಇಂದು ನಾವು 7 ದಶಕಗಳ ಬಳಿಕ ಮತ್ತೆ ಟಾಟಾ ಗ್ರೂಪ್ಗೆ ಸೇರಿಕೊಂಡಿದ್ದೇವೆ. ನವೀಕೃತ ಬದ್ಧತೆ ಮತ್ತು ಅದೇ ಉತ್ಸಾಹದಿಂದ ನಿಮ್ಮ ಸೇವೆಯಲ್ಲಿ ಇರಲು ಬಯಸುತ್ತೇವೆ. ಭವಿಷ್ಯದ ಏರ್ ಇಂಡಿಯಾ ವಿಮಾನಕ್ಕೆ ನಿಮಗೆ ಸ್ವಾಗತ. ನಿಮ್ಮ ಪ್ರಯಾಣವನ್ನು ಆನಂದಿಸುತ್ತೀರಿ ಎಂದು ನಂಬಿದ್ದೇವೆ’ ಎಂದು ಪ್ರಕಟಣೆ ಇರಲಿದೆ.
ಏರ್ ಇಂಡಿಯಾವನ್ನು ಹರಾಜಿನಲ್ಲಿಟ್ಟಾಗ ಕಳೆದ ಅಕ್ಟೋಬರ್ನಲ್ಲಿ ಸರ್ಕಾರವು 18 ಸಾವಿರ ಕೋಟಿ ರೂ.ಗೆ ಟಾಟಾ ಗ್ರೂಪ್ನ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ಗೆ ಮಾರಾಟ ಮಾಡಿತ್ತು. ತಾಲೇಸ್ ಪ್ರೈವೆಟ್ ಲಿಮಿಟೆಡ್ ಟಾಟಾ ಸನ್ಸ್ನ ಅಂಗಸಂಸ್ಥೆಯಾಗಿದ್ದು, 2022ರಲ್ಲಿ ಸ್ಥಾಪನೆಯಾಗಿದೆ.
ಇನ್ನು ಟಾಟಾ ಗ್ರೂಪ್ಗೆ ಸೇರಿದ ಏರ್ ಇಂಡಿಯಾದಲ್ಲಿ ಹಲವು ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾದುದೆಂದರೆ, ಸಿಬ್ಬಂದಿ ಅಚ್ಚುಕಟ್ಟಾಗಿ ಉಡುಪನ್ನು ಧರಿಸಬೇಕು, ಊಟದ ವಿಚಾರದಲ್ಲಿ ಅಡುಗೆಯವರಿಗೂ ಮಾಹಿತಿ ನೀಡಲಾಗಿದೆ. ಜತೆಗೆ D (ನಿರ್ಗಮನ ಸಮಯ) ಮೈನಸ್ 10 ನಿಮಿಷಗಳಲ್ಲಿ ಬಾಗಿಲು ಮುಚ್ಚಲು ಪ್ರಯತ್ನಿಸಬೇಕು ಎಂದು ತಿಳಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:
69 ವರ್ಷದ ಬಳಿಕ ಏರ್ ಇಂಡಿಯಾ ಇಂದು ಟಾಟಾ ಮಡಿಲಿಗೆ: ಸೇವಾ ಸುಧಾರಣೆ ಜೊತೆಗೆ ಯಶಸ್ಸಿನ ಹಾದಿಯಲ್ಲಿ ಹಾರಾಡುವ ನಿರೀಕ್ಷೆ
Published On - 11:55 am, Fri, 28 January 22