
ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶಾಶ್ವತ ಪಟಾಕಿ ನಿಷೇಧದ ಕುರಿತು ಸುಪ್ರೀಂಕೋರ್ಟ್ ಹಲವು ಪ್ರಶ್ನೆಗಳನ್ನೆತ್ತಿದೆ. ಯಾವುದೇ ಧರ್ಮವು ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ, ಹಾಗಾಗಿ ಯಾವುದೋ ಒಂದೆರಡು ತಿಂಗಳುಗಳ ಕಾಲ ಪಟಾಕಿ ನಿಷೇಧ ಮಾಡುವುದಕ್ಕಿಂತ ಮಾಲಿನ್ಯ ಕಡಿಮೆಯಾಗುವವರೆಗೆ ಯಾಕೆ ಸರ್ಕಾರವು ಶಾಶ್ವತವಾಗಿ ಪಟಾಕಿ ನಿಷೇಧಿಸಬಾರದು ಎಂದು ಪ್ರಶ್ನಿಸಿದೆ.
ಪಟಾಕಿಗಳನ್ನು ಹಚ್ಚಿದರೆ ನಾಗಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪಟಾಕಿ ನಿಷೇಧವನ್ನು ಜಾರಿಗೊಳಿಸಲು ವಿಫಲವಾಗಿರುವ ದೆಹಲಿ ಸರ್ಕಾರ ಮತ್ತು ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ, ಅಕ್ಟೋಬರ್ ಮತ್ತು ಜನವರಿ ನಡುವೆ ಮಾತ್ರ ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಸಿಡಿಸುವಿಕೆಯ ಮೇಲಿನ ನಿರ್ಬಂಧಗಳು ಏಕೆ ಅನ್ವಯಿಸುತ್ತದೆ ಎಂದು ಕೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಪ್ರಸ್ತುತ ಆದೇಶವು ಹಬ್ಬ ಹರಿದಿನಗಳಲ್ಲಿ ಮತ್ತು ದೆಹಲಿಯಲ್ಲಿ ಮಾಲಿನ್ಯ ಉಲ್ಬಣಗೊಳ್ಳುವ ತಿಂಗಳುಗಳಿಗೆ ಮಾತ್ರ ಕೇಂದ್ರೀಕರಿಸಿದೆ ಎಂದು ಹೇಳಿದರೂ ಪೀಠಕ್ಕೆ ಮನವರಿಕೆಯಾಗಿಲ್ಲ.
ಮತ್ತಷ್ಟು ಓದಿ: ದೀಪಾವಳಿಗೆ ಪಟಾಕಿ ನಿಷೇಧವೇಕೆ ಜಾರಿಯಾಗಲಿಲ್ಲ?; ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಅಕ್ಟೋಬರ್ 14 ರಂದು ಜಾರಿಗೊಳಿಸಿದ ದೆಹಲಿ ಸರ್ಕಾರದ ಆದೇಶವನ್ನು ನ್ಯಾಯಾಲಯವು ಪರಿಶೀಲಿಸಿತು , ಇದು ಪಟಾಕಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿತು ಆದರೆ ಚುನಾವಣೆಗಳು ಮತ್ತು ಮದುವೆಗಳಂತಹ ಕಾರ್ಯಕ್ರಮಗಳಿಗೆ ವಿನಾಯಿತಿಗಳನ್ನು ನೀಡಿದೆ.
ನವೆಂಬರ್ 25ರ ಮೊದಲು ನಗರದಲ್ಲಿ ಪಟಾಕಿಗಳ ಮೇಲೆ ಶಾಶ್ವತ ನಿಷೇಧವನ್ನು ಪರಿಗಣಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರವನ್ನು ಕೇಳಿದೆ, ನಿರ್ದಿಷ್ಟ ಅವಧಿಗೆ ಸೀಮಿತವಾಗಿರದೆ ಒಂದು ವರ್ಷದ ಅವಧಿಯ ನಿಷೇಧದ ಅಗತ್ಯವನ್ನು ಒತ್ತಿಹೇಳಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ