ಡ್ರೈವರ್ ಸೀಟ್​ಗಷ್ಟೇ ಅಲ್ಲ, ಪಕ್ಕದ ಸೀಟ್​ಗೂ ಏರ್​​ಬ್ಯಾಗ್​ ಕಡ್ಡಾಯ; ಏಪ್ರಿಲ್​ 1ರಿಂದಲೇ ಹೊಸ ನಿಯಮ ಜಾರಿ, ವಾಹನಗಳ ಬೆಲೆಯೂ ಏರಲಿದೆ

|

Updated on: Mar 06, 2021 | 1:36 PM

ಅಪಘಾತದದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಹೊಸ ನಿಯಮ ತರಲಾಗಿದ್ದು, ಒಂದು ವಾಹನದ ಎರಡೂ ಸೀಟ್​ಗಳಿಗೆ ಏರ್​ಬ್ಯಾಗ್ ಅಳವಡಿಸುವುದರಿಂದ ಸಹಜವಾಗಿಯೇ ಅದರ ಬೆಲೆ ಏರಿಕೆಯಾಗಲಿದೆ.

ಡ್ರೈವರ್ ಸೀಟ್​ಗಷ್ಟೇ ಅಲ್ಲ, ಪಕ್ಕದ ಸೀಟ್​ಗೂ ಏರ್​​ಬ್ಯಾಗ್​ ಕಡ್ಡಾಯ; ಏಪ್ರಿಲ್​ 1ರಿಂದಲೇ ಹೊಸ ನಿಯಮ ಜಾರಿ, ವಾಹನಗಳ ಬೆಲೆಯೂ ಏರಲಿದೆ
ಏರ್​ಬ್ಯಾಗ್​ (ಸಂಗ್ರಹ ಚಿತ್ರ)
Follow us on

ದೆಹಲಿ: ಇಷ್ಟು ದಿನ ವಾಹನಗಳ ಅದರಲ್ಲೂ ಕಾರುಗಳಲ್ಲಿ ಡ್ರೈವರ್​ ಸೀಟ್​ಗೆ ಮಾತ್ರ ಏರ್​ಬ್ಯಾಗ್​ ಕಡ್ಡಾಯವಾಗಿತ್ತು. ಆದರೆ ಈ ನಿಯಮದಲ್ಲಿ ಬದಲಾವಣೆಯೊಂದಾಗಿದ್ದು ಅದರ ಅನ್ವಯ ಇನ್ನುಮುಂದೆ ಮುಂದಿನ ಎರಡೂ ಸೀಟ್​ಗಳಿಗೆ ಏರ್​ಬ್ಯಾಗ್​ ಇರಲೇಬೇಕಾಗಿದೆ. ಈ ಸಂಬಂಧ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಕರಡು ಅಧಿಸೂಚನೆ ಹೊರಡಿಸಿದೆ. ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕಾರು ಮತ್ತಿತರ ವಾಹನಗಳಲ್ಲಿ ಮುಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಏರ್​ಬ್ಯಾಗ್ ಕಡ್ಡಾಯವಾಗಲಿದೆ. ಸುಪ್ರೀಂಕೋರ್ಟ್​​ನ ರಸ್ತೆ ಸುರಕ್ಷತಾ ಸಮಿತಿ ನೀಡಿದ ಸಲಹೆ ಅನ್ವಯ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಸಾರಿಗೆ ಸಚಿವಾಲಯ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಳೆದ ವರ್ಷವಷ್ಟೇ ಚಾಲಕನ ಬದಿಯಲ್ಲಿ ಏರ್​ಬ್ಯಾಗ್​ ಇರುವುದನ್ನು ಕೇಂದ್ರಸರ್ಕಾರ ಕಡ್ಡಾಯ ಮಾಡಿದೆ. ಈ ನಿಯಮವನ್ನು ವಿಸ್ತರಿಸಿರುವ ಕೇಂದ್ರ ಸಾರಿಗೆ ಸಚಿವಾಲಯ, ಏಪ್ರಿಲ್​ 1 ಮತ್ತು ನಂತರದ ದಿನಗಳಲ್ಲಿ ತಯಾರಾಗುವ ಹೊಸ ವಾಹನಗಳಲ್ಲಿ ಡ್ರೈವರ್​ ಮತ್ತು ಆತನ ಪಕ್ಕದ ಸೀಟ್​ಗೆ ಏರ್​ಬ್ಯಾಗ್​ ಇರಲೇಬೇಕು. ಆಯಾ ವಾಹನ ತಯಾರಿಕಾ ಸಂಸ್ಥೆಗಳು ಕಡ್ಡಾಯವಾಗಿ ಅದನ್ನು ಅಳವಡಿಸಬೇಕು. ಇನ್ನು ಈಗಾಗಲೇ ಹಲವು ಮಾದರಿಯ ಹಳೇ ವಾಹನಗಳನ್ನು ಹೊಂದಿರುವವರು ಆಗಸ್ಟ್​ 31ರೊಳಗೆ ಚಾಲಕನ ಪಕ್ಕದ ಸೀಟ್​ಗೂ ಕಡ್ಡಾಯವಾಗಿ ಏರ್​ಬ್ಯಾಗ್​ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ಅಪಘಾತದದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಹೊಸ ನಿಯಮ ತರಲಾಗಿದ್ದು, ಒಂದು ವಾಹನದ ಎರಡೂ ಸೀಟ್​ಗಳಿಗೆ ಏರ್​ಬ್ಯಾಗ್ ಅಳವಡಿಸುವುದರಿಂದ ಸಹಜವಾಗಿಯೇ ಅದರ ಬೆಲೆ 5000-7000ರೂ.ವರೆಗೆ ಹೆಚ್ಚಲಿದೆ. 2021ರ ಏಪ್ರಿಲ್​ 1ರಿಂದ ತಯಾರಾಗುವ ಎಲ್ಲ ಹೊಸ ಮಾದರಿಯ ವಾಹನಗಳಲ್ಲಿ ಮುಂದಿನ ಎರಡೂ ಸೀಟ್​ಗಳಲ್ಲಿ ಏರ್​ಬ್ಯಾಗ್​ ಅಳವಡಿಸುವ ನಿರ್ಧಾರದ ಬಗ್ಗೆ ಸರ್ಕಾರ 2020ರ ಡಿಸೆಂಬರ್​ 29ರಂದು ಹೇಳಿಕೆ ಬಿಡುಗಡೆ ಮಾಡಿತ್ತು. ಅಲ್ಲದೆ, ಹಳೇ ವಾಹನಗಳಿಗೆ ಮತ್ತೊಂದು ಸೀಟ್​ಗೆ ಏರ್​ಬ್ಯಾಗ್ ಅಳವಡಿಸಿಕೊಳ್ಳಲು ಜುಲೈ1ರವರೆಗೆ ಸಮಯ ನೀಡುವುದಾಗಿಯೂ ಹೇಳಿತ್ತು. ಅದನ್ನೀಗ ಆಗಸ್ಟ್​ 31ಕ್ಕೆ ಏರಿಸಿದೆ. 2019ರ ಜುಲೈನಿಂದಲೂ ಡ್ರೈವರ್​ ಸೀಟ್​ಗೆ ಏರ್​ಬ್ಯಾಗ್ ಕಡ್ಡಾಯವಾಗಿದೆ.

ಇದನ್ನೂ ಓದಿ: Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’

Published On - 1:36 pm, Sat, 6 March 21