ಲಖನೌ: ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (Akhilesh Yadav) ಪತ್ನಿ, ಸಂಸದೆ ಡಿಂಪಲ್ ಯಾದವ್ ಮತ್ತು ಪುತ್ರಿ ಕೊವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ಇವರಿಬ್ಬರಲ್ಲೂ ಕೊವಿಡ್ 19 (Covid 19) ದೃಢಪಟ್ಟ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh CM Yogi Adityanath), ಅಖಿಲೇಶ್ ಯಾದವ್ಗೆ ಕರೆ ಮಾಡಿ, ಅವರ ಪತ್ನಿ, ಪುತ್ರಿಯ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ಇಬ್ಬರೂ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆಂದು ಮುಖ್ಯಮಂತ್ರಿ ಕಾರ್ಯಾಲಯ ನಿನ್ನೆ ತಿಳಿಸಿದೆ. ಅಖಿಲೇಶ್ ಯಾದವ್ ಕೂಡ ಕೊವಿಡ್ 19 ತಪಾಸಣೆಗೆ ಒಳಗಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ.
#UPCM श्री @myogiadityanath जी ने पूर्व मुख्यमंत्री श्री @yadavakhilesh जी की धर्मपत्नी पूर्व सांसद श्रीमती डिम्पल यादव जी व उनकी पुत्री के कोरोना पॉजिटिव होने के समाचार का संज्ञान लेते हुए श्री यादव से दूरभाष पर वार्ता की।
— CM Office, GoUP (@CMOfficeUP) December 22, 2021
ಇನ್ನು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಡಿಂಪಲ್ ಯಾದವ್, ನನಗೆ ಕೊವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ, ಸ್ವತಃ ಐಸೋಲೇಟ್ಗೆ ಒಳಗಾಗಿದ್ದೇನೆ. ನಾನು ಈಗಾಗಲೇ ಎರಡೂ ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿದ್ದು, ಸದ್ಯ ಯಾವುದೇ ಲಕ್ಷಣಗಳೂ ಇಲ್ಲ. ಹಾಗಿದ್ದಾಗ್ಯೂ ಕೂಡ ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಒಮ್ಮೆ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಖಿಲೇಶ್ ಯಾದವ್ ಕೊವಿಡ್ 19 ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂಬುದು ಗೊತ್ತಾಗಿಲ್ಲ. ಸದ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕಳೆದ ತಿಂಗಳು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅವರು, ನಾನು ಕೊವಿಡ್ 19 ಲಸಿಕೆ ಸರ್ಟಿಫಿಕೇಟ್ನಲ್ಲಿ ಪ್ರಧಾನಿ ಮೋದಿಯವರ ಫೋಟೊ ತೆಗೆದರೆ ಮಾತ್ರ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ನನಗೆ ಒಂದು ಬಾರಿ ಕೊರೊನಾ ಬಂದು ಹೋಗಿದೆ. ಒಬ್ಬರಿಗೆ ಎರಡು ಸಲ ಕೊರೊನಾ ವೈರಸ್ ತಗುಲುವುದಿಲ್ಲ ಎಂದು ಈಗಾಗಲೇ ಅಧ್ಯಯನಕಾರರು ಹೇಳಿದ್ದಾರೆ. ಹಾಗಾಗಿ ನಾನ್ಯಾಕೆ ಲಸಿಕೆ ಪಡೆಯಲಿ ಎಂದೂ ಪ್ರಶ್ನಿಸಿದ್ದರು. ಸರ್ಕಾರ ಸರ್ಟಿಫಿಕೇಟ್ ಮೇಲೆ ಪ್ರಧಾನಿ ಮೋದಿಯವರ ಫೋಟೋ ತೆಗೆದು, ಆ ಜಾಗದಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿದರೆ ನಾನು ಲಸಿಕೆ ತೆಗೆದುಕೊಳ್ಳುತ್ತೇನೆ ಎಂದಿದ್ದರು. ನಂತರ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಲಸಿಕೆ ಪಡೆಯುವುದಾಗಿ ಹೇಳಿದ ಬೆನ್ನಲ್ಲೇ ತಾವೂ ಕೊರೊನಾ ಲಸಿಕೆ ಪಡೆಯುತ್ತೇನೆ ಎಂದಿದ್ದರು. 2021ರ ಮಾರ್ಚ್ನಲ್ಲಿಯೇ ಅಖಿಲೇಶ್ ಯಾದವ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ತಮಗೆ ಕೊರೊನಾ ವೈರಸ್ ತಗುಲಿದ್ದನ್ನು ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದರು. ಅವರೂ ಕೂಡ ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದಿದ್ದರು.
ಇದನ್ನೂ ಓದಿ: ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಟೆಕ್ಕಿ ಸಾವನ್ನೆ ಗೆದ್ದು ಬಂದಿದ್ದು ಹೇಗೆ?