ಕಾಂಗ್ರೆಸ್ ಗ್ರಹಗತಿ ಸರಿ ಇದ್ದಂತಿಲ್ಲ. ಪಂಜಾಬ್ ಕಾಂಗ್ರೆಸ್ ನಾಯಕರಲ್ಲಿ ಒಳ ಮತ್ತು ಹೊರ ಜಗಳಗಳು ತಹಬದಿಗೆ ಬರುವ ಮೊದಲೇ, ಛತ್ತೀಸ್ಘಡ್ನಲ್ಲಿ ಕಾಂಗ್ರೆಸ್ ನಾಯಕರ ನಡುವೆ ಅಸಮಾಧಾನ, ಬಂಡಾಯ ಶುರುವಿಟ್ಟುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಾಘಲ್ ಅವರು ಈ ವಾರದಲ್ಲಿ ಎರಡನೇ ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಇಲ್ಲೂ ಪಕ್ಷದ ಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಎಲ್ಲ ಶಾಸಕರನ್ನು ದೆಹಲಿಗೆ ಕರೆಸಲಾಗಿದೆ. ಬಾಘೆಲ್ ಸ್ಥಾನಕ್ಕೆ ಅವರ ಸಂಪುಟ ಸಹೋದ್ಯೋಗಿ ಟಿ ಎಸ್ ಸಿಂಗ್ ದೇವ್ ಅವರಿಂದ ಸಂಚಕಾರ ಬಂದೊದಗಿದೆ ಎಂದು ಹೇಳಲಾಗುತ್ತಿದೆ. ರೋಟೇಶನಲ್ ಪಾಲಿಸಿ ಒಪ್ಪಂದದ ಅನುಸಾರ ತಾನೀಗ ಮುಖ್ಯಮಂತ್ರಿಯಾಗಬೇಕೆಂದು ಸಿಂಗ್ ದೇವ್ ಪಟ್ಟು ಹಿಡಿದಿದ್ದಾರೆ. 2018ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ದಾವೇದಾರನಾಗಿದ್ದ ಸಿಂಗ್ ದೇವ್ ಎರಡೂವರೆ ವರ್ಷಗಳ ನಂತರ ಆ ಸ್ಥಾನ ತನಗೆ ನೀಡುವ ಬಗ್ಗೆ ಆದ ಒಪ್ಪಂದದ ಆಧಾರದಲ್ಲಿ ಬಾಘೆಲ್ ತನಗೆ ಅಧಿಕಾರ ಬಿಟ್ಟುಕೊಡಬೇಕೆಂದು ಹೇಳಿದ್ದಾರೆ.
ಬಾಘೆಲ್ ಸರ್ಕಾರವು ಜೂನ್ನಲ್ಲೇ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದೆ. ಪಕ್ಷ ತಾನು ಮಾಡಿದ ಪ್ರಾಮಿಸ್ಗೆ ಬದ್ಧವಾಗಿ ತನಗೆ ಮುಖ್ಯಮಂತ್ರಿ ಆಗುವ ಅವಕಾಶ ಕಲ್ಪಿಸಬೇಕೆಂದು ಹೇಳುತ್ತಿದ್ದಾರೆ. ಅದರೆ, ಒಪ್ಪಂದಕ್ಕೆ ಹೈಕಮಾಂಡ್ ಸಮ್ಮತಿಸಿರಲಿಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಮಂಗಳವಾರ ಬಾಘೆಲ್ ಮತ್ತು ಸಿಂಗ್ ದೇವ್ ಇಬ್ಬರೂ ದೆಹಲಿಯಲ್ಲಿ ರಾಜೀವ್ ಗಾಂಧಿಯನ್ನು ಭೇಟಿಯಾಗಿದ್ದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತಾಡಿದ್ದ ಬಾಘೆಲ್, ತಾವೀಗ ನೋಟೀಸ್ ಪೀರಿಯಡ್ನಲ್ಲಿದ್ದು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಹೇಳಿದ್ದರು. ಆದರೆ ರಾಜ್ಯದ ರಾಜಧಾನಿ ರಾಯ್ಪುರ ತಲುಪಿದ ನಂತರ ತಮ್ಮ ವರಸೆಯನ್ನು ಬದಲಿಸಿದರು. ‘ರಾಹುಲ್ ಮತ್ತು ಸೋನಿಯಾ ಗಾಂಧಿ ಆದೇಶಿಸಿದರೆ ಮಾತ್ರ ನಾನು ಸ್ಥಾನ ತ್ಯಜಿಸುವೆ. ಎರಡೂವರೆ ವರ್ಷದ ಒಪ್ಪಂದದ ಬಗ್ಗೆ ಮಾತಾಡುತ್ತಿರುವವರು, ರಾಜಕೀಯ ಆಸ್ಥಿರತೆ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ತಮ್ಮ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ,’ ಎಂದು ಹೇಳಿದರು
ರಾಹುಲ್ ಅವರನ್ನು ಭೇಟಿಯಾದ ನಂತರ ಸಿಂಗ್ ದೇವ್ ಇನ್ನೂ ಛತ್ತೀಸ್ಘಡ್ ವಾಪಸ್ಸಾಗಿಲ್ಲ. ಹೈಕಮಾಂಡ್ ತನ್ನ ನಿರ್ಧಾರ ತಿಳಿಸುವವರಗೆ ಅವರು ಹಿಂತಿರುಗಲಾರರು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಹೂಡುತ್ತಿರುವ ದಾವೆಯ ಬಗ್ಗೆ ಕೇಳಿದಾಗ ಸಿಂಗ್ ದೇವ್ ಅವರು, ‘ನಾಯಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಹೇಳಿದ್ದೇ ಅಂತಿಮ ಎನ್ನುವ ನಿರ್ಧಾರಕ್ಕೆ ನಾವಿಬ್ಬರೂ ಒಪ್ಪಿಕೊಂಡಿದ್ದೇವೆ,’ ಎಂದರು.
ಛತ್ತೀಸ್ಘಡ್ ನಲ್ಲಿ ಪಕ್ಷದ ಉಸ್ತವಾರಿಯಾಗಿರುವ ಪಿಎಲ್ ಪೂನಿಯಾ ಅವರು ಮಂಗಳವಾರದಂದು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಯಿತೇ ಹೊರತು ನಾಯಕತ್ವದ ವಿಷಯವಾಗಿ ಅಲ್ಲ ಎಂದು ಹೇಳಿದರು.
‘ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಭೂಪೇಶ್ ಭಾಘೆಲ್ ಹೇಳಿದ್ದಾರೆ, ಹೈಕಮಾಂಡ್ ಆಶಿಸುವರೆಗೆ ತಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ. ಸದ್ಯದ ಮಟ್ಟಿಗೆ ಹೇಳುವುದಾದರೆ, ಬಾಘೆಲ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ,’ ಎಂದು ಪೂನಿಯಾ ಹೇಳಿದರು.
ಸಿಂಗ್ ದೇವ್ ಅವರ ಆಪ್ತ ಮೂಲಗಳ ಪ್ರಕಾರ, ಅವರು ತಮ್ಮ ನಿರ್ಣಯದಿಂದ ಯಾವ ಕಾರಣಕ್ಕೂ ಹಿಂದೆ ಸರಿಯದಿರುವ ಗಟ್ಟಿ ನಿರ್ಧಾರವನ್ನು ಮಾಡಿಕೊಂಡಿದ್ದು ಮುಖ್ಯಮಂತ್ರಿ ಸ್ಥಾನ ಬಿಟ್ಟು ಬೇರೆ ಯಾವುದಕ್ಕೂ ರಾಜಿಯಾಗಲಾರರು ಅಂತ ಗೊತ್ತಾಗಿದೆ. ಹಾಗೆಯೇ, ಬಿಜೆಪಿ ಸೇರುವ ಅವರು ಪ್ರಯತ್ನ ಮಾಡುತ್ತಿಲ್ಲ, ಆದರೆ ಬಾಘೆಲ್ ಅಡಿಯಲ್ಲಿ ಕೆಲಸ ಮಾಡದಿರರುವ ದೃಢ ನಿಶ್ವಯ ಮಾಡಿಕೊಂಡಿರುವುದು ತಿಳಿದುಬಂದಿದೆ.
2018ರಲ್ಲಿ ನಡೆದ ಛತ್ತೀಸ್ಘಡ್ ವಿಧಾನ ಸಭೆ ಚುನವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಹೈಕಮಾಂಡ್ ಭಾಘೆಲ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೊದಲು ಅವರ ಪ್ರತಿಸ್ಪರ್ಧಿಗಳಾಗಿದ್ದ ಸಿಂಗ್ ದೇವ್ ಮತ್ತು ತಮರಾಧ್ವಜ್ ಸಾಹು ಅವರೊಂದಿಗೆ ಈ ಸೂಕ್ಷ್ಮ ವಿಷಯದ ಮೇಲೆ ಸಮಾಲೋಚನೆ ನಡೆಸಿ ರಾಜಿಸೂತ್ರ ರಚಿಸಿತ್ತು.
ಏತನ್ಮಧ್ಯೆ, ಛತ್ತೀಸ್ಘಡ್ ಪಕ್ಷದ ಯುನಿಟ್ ಎಲ್ಲವೂ ಸರಿಯಾಗಿದೆ, ಎಲ್ಲರು ಒಗ್ಗಟ್ಟಾಗಿದ್ದಾರೆ ಅಂತ ತೋರಿಸಿಕೊಳ್ಳಲು ರಾಹುಲ್ ಗಾಂಧಿಯವರು ಅಲ್ಲಿನ ನಾಯಕರೊಂದಿಗೆ ಒಂದು ಫೋಟೋವನ್ನು ಟ್ವೀಟ್ ಮಾಡಿ ರೀಡ್ ಹಾಫ್ಮನ್ ಅವರ ಉಕ್ತಿಯನ್ನು ಸಂದೇಶದ ರೂಪದಲ್ಲಿ ಉಲ್ಲೇಖಿಸಿದ್ದಾರೆ: ‘ನೀವೆಷ್ಟೇ ಕುಶಾಗ್ರಮತಿ ಮತ್ತು ರಣನೀತಿ ಪರಿಣಿತರಾಗಿದ್ದು ಒಬ್ಬಂಟಿಯಾಗಿ ಅಡುವುದು ನಿಮ್ಮ ಜಾಯಮಾನವಾಗಿದ್ದರೆ, ಟೀಮೊಂದರ ವಿರುದ್ಧ ಸೋಲು ಕಟ್ಟಿಟ್ಟ ಬುತ್ತಿ.’
No matter how brilliant your mind or strategy, if you’re playing a solo game, you’ll always lose out to a team.
– Reid Hoffman pic.twitter.com/TL5rPwiCDX
— Rahul Gandhi (@RahulGandhi) December 15, 2018
ಇದನ್ನೂ ಓದಿ: ಛತ್ತೀಸ್ಗಡ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು: ನಾಯಕತ್ವ ಬದಲಾವಣೆಯ ಮಾತುಕತೆ ಇಲ್ಲ ಎಂದ ಪಿಎಲ್ ಪುನಿಯಾ