ಕೇರಳದಲ್ಲಿ (Kerala) ನೀಟ್ ಪರೀಕ್ಷೆ (NEET Exam) ವೇಳೆ ಹುಡುಗಿಯರ ಒಳ ಉಡುಪು ತೆಗೆಯುವಂತೆ ಹೇಳಿದ ಪ್ರಕರಣದಲ್ಲಿ (frisking case) ಬಂಧನಕ್ಕೊಳಗಾಗಿದ್ದ ಎಲ್ಲ ಏಳು ಮಂದಿಗೆ ಜಾಮೀನು ನೀಡಲಾಗಿದೆ. ಇಬ್ಬರು ಶಿಕ್ಷಕರನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದು, ಐವರು ಮಹಿಳೆಯರನ್ನು ಜುಲೈ 19ಕ್ಕೆ ಬಂಧಿಸಲಾಗಿತ್ತು. ಕಡೈಕ್ಕಲ್ ಜುಡಿಷಿಯಲ್ ಫಸ್ಟ್ ಕ್ಲಾಸ್ ಮೆಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ. ಒಳಉಡುಪು ಕಳಚುವಂತೆ ವಿದ್ಯಾರ್ಥಿಗಳಿಗೆ ಹೇಳಿದ ಪ್ರಕರಣದಲ್ಲಿ ಇಲ್ಲಿಯವರೆಗೆ ಏಳು ಮಂದಿಯನ್ನು ಬಂಧಿಸಲಾಗಿತ್ತು. ಮಾರ್ಥೋಮಾ ಕಾಲೇಜಿನ ಶಿಕ್ಷಕರು ಮತ್ತು ಕೋಆರ್ಡಿನೇಟರ್ ನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿತ್ತು. ಇವರಿಗೂ ಜಾಮೀನು ಲಭಿಸಿದೆ. ಇದಕ್ಕಿಂತ ಮುಂಚೆ ಬಂಧಿತರಾಗಿದ್ದ ಇಬ್ಬರು ಸ್ವಚ್ಛತಾ ಕಾರ್ಮಿಕರು ಈಗಲೂ ವಶದಲ್ಲಿದ್ದಾರೆ. ಇವರು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರೂ ಶೀಘ್ರದಲ್ಲೇ ಕಡೈಕ್ಕಲ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ಮಾತೃಭೂಮಿ ಡಾಟ್ ಕಾಂ ವರದಿ ಮಾಡಿದೆ.
ನೀಟ್ ಪರೀಕ್ಷೆಯ ಡ್ರೆಸ್ ಕೋಡ್ (NEET Dress code) ಪಾಲಿಸುವ ಭರದಲ್ಲಿ ಯುವತಿಯರಿಗೆ ಬ್ರಾ ತೆಗೆಯುವಂತೆ ಹೇಳಿ ಪರೀಕ್ಷೆ ಬರೆಸಲಾಗಿತ್ತು. ಇದರಿಂದ ತೀವ್ರ ಅವಮಾನಿತರಾಗಿದ್ದ ಯುವತಿಯರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಇಂತಹ ಘಟನೆ ಅವರ ಪರೀಕ್ಷೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಆ ಯುವತಿಯರ ಪೋಷಕರು ಆಕ್ರೋಶ ಹೊರಹಾಕಿದ್ದರು.
ಏನಿದು ಘಟನೆ?:
ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವ ವೇಳೆ ಪರೀಕ್ಷಾ ಕೇಂದ್ರದ ಹೊರಗೆ ಯುವತಿಯರಿಗೆ ಒಳಉಡುಪು ಕಳಚಲು ಒತ್ತಾಯಿಸಿ ಅವಮಾನ ಮಾಡಲಾಗಿತ್ತು. ಕೊನೆಗೆ ಯುವತಿಯರು ಒಳಉಡುಪು ಕಳಚಿಟ್ಟು ಪರೀಕ್ಷೆ ಬರೆದಿದ್ದರು. ಇದರಿಂದ ತೀವ್ರ ಮುಜುಗರಗೊಂಡಿದ್ದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವು ಆ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕೇಸ್ ದಾಖಲಿಸಿದ್ದರು. ಮೊಟ್ಟಮೊದಲ ಬಾರಿಗೆ ನೀಟ್ ಪರೀಕ್ಷೆಗೆ ಕುಳಿತಿದ್ದ ನನ್ನ ಮಗಳು ತನಗಾದ ಆಘಾತಕಾರಿ ಅನುಭವದಿಂದ ಇನ್ನೂ ಹೊರಬಂದಿಲ್ಲ ಎಂದು 17 ವರ್ಷದ ಯುವತಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು. ಬ್ರಾ ಇಲ್ಲದೆಯೇ 3 ಗಂಟೆಗೂ ಹೆಚ್ಚು ಕಾಲ ಪರೀಕ್ಷೆ ಹಾಲ್ನಲ್ಲಿ ಕುಳಿತು ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಬಂದೊದಗಿದ್ದು, ಆಕೆಯನ್ನು ಮಾನಸಿಕವಾಗಿ ಬಹಳ ಕುಗ್ಗಿಸಿದೆ. ಈ ಘಟನೆಯಿಂದ ಆಕೆ ತೀವ್ರ ಅವಮಾನಕ್ಕೊಳಗಾಗಿದ್ದಾಳೆ ಎಂದು ಅವರು ಆರೋಪಿಸಿದ್ದರು. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ಸೂಚಿಸಿದೆ. ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ನೀಡಲಾಗಿತ್ತು. ವ್ಯಾಲೆಟ್‌ಗಳು, ಕೈಚೀಲಗಳು, ಬೆಲ್ಟ್‌ಗಳು, ಕ್ಯಾಪ್‌ಗಳು, ಆಭರಣಗಳು, ಶೂಗಳು ಮತ್ತು ಹೀಲ್ಸ್ ಅನ್ನು ನಿಷೇಧಿಸಲಾಗಿತ್ತು.
Published On - 6:08 pm, Thu, 21 July 22