ವಿಚ್ಛೇದನ(Divorce)ದ ಅರ್ಜಿಯನ್ನು ಪರಿಗಣಿಸುವಾಗ ಎಲ್ಲಾ ಸಣ್ಣ ವಿವಾದಗಳು ಅಥವಾ ಘಟನೆಗಳನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸೌಮಿತ್ರಾ ದಯಾಳ್ ಸಿಂಗ್ ಮತ್ತು ನ್ಯಾಯಮೂರ್ತಿ ಶಿವಶಂಕರ್ ಪ್ರಸಾದ್ ಅವರ ಪೀಠವು, ನ್ಯಾಯಾಲಯಗಳು ಸಣ್ಣ ವಿವಾದಗಳು ಅಥವಾ ಘಟನೆಗಳನ್ನು ಗುರುತಿಸಿ ಮತ್ತು ಅವುಗಳನ್ನು ಕ್ರೌರ್ಯದ ಅಂಶವೆಂದು ಪರಿಗಣಿಸಿದರೆ, ಸಣ್ಣ ಪುಟ್ಟ ಮುನಿಸಿಟ್ಟುಕೊಂಡು ಬಂದ ದಂಪತಿಗೆ ದ್ರೋಹ ಮಾಡಿದಂತಾಗುತ್ತದೆ ಎಂದಿದ್ದಾರೆ.
ಕ್ರೌರ್ಯವನ್ನು ಹಿಂದೂ ವಿವಾಹ ಕಾಯಿದೆ, 1955 (ಕಾಯ್ದೆ) ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ, ಆದರೂ ಅದು ಸಾಕಷ್ಟು ಗಂಭೀರವಾದ ಕೃತ್ಯವಾಗಿರಬೇಕು. ಅಂತಹ ಕಾರ್ಯಗಳು, ಸ್ವಭಾವತಃ, ಸಂಬಂಧದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಗಂಭೀರ ಸ್ವರೂಪದ ವಿಷಯಗಳು ಅಥವಾ ಘಟನೆಗಳನ್ನು ಒಳಗೊಂಡಿರಬೇಕು ಎಂದಿದೆ.
ಕೌಟುಂಬಿಕ ನ್ಯಾಯಾಲಯವು ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ತನ್ನ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ವಿರುದ್ಧ ಪತಿ ಸಲ್ಲಿಸಿದ ಮೇಲ್ಮನವಿಯಲ್ಲಿ ಈ ಅವಲೋಕನಗಳನ್ನು ಮಾಡಲಾಗಿದೆ. ಈ ಜೋಡಿಯು 2013 ರಲ್ಲಿ ವಿವಾಹವಾದರು, ಮದುವೆಯ ಬಳಿಕ ಅವರು ಸಂತೋಷವಾಗಿರಲಿಲ್ಲ, ದಂಪತಿ 2014ರವರೆಗೆ ಮಾತ್ರ ಜೊತೆಯಾಗಿದ್ದರು.
ವರದಕ್ಷಿಣೆ ಬೇಡಿಕೆ ಇತ್ಯಾದಿ ಆರೋಪದಡಿ ಪತಿ ವಿರುದ್ಧ ಪತ್ನಿಯೂ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ವಿಚ್ಛೇದನ ಪ್ರಕ್ರಿಯೆ ಸಂದರ್ಭದಲ್ಲಿ ಪತಿಗೆ ತನ್ನ ಅತ್ತಿಗೆ ಜತೆ ಸಂಬಂಧವಿದೆ ಎಂದು ಆರೋಪ ಮಾಡಿದ್ದಳು.
ಒಬ್ಬ ವ್ಯಕ್ತಿಯು ತನ್ನ ಅಥವಾ ಅವನ ಸಂಗಾತಿಯ ಮೇಲೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದರೆ, ಆಪಾದನೆಯನ್ನು ಸ್ಪಷ್ಟವಾಗಿ ಹೇಳಬೇಕು ಮತ್ತು ವಿಚ್ಛೇದನ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಕಲ್ಪನೆಗೆ ಬಿಡಬಾರದು ಎಂದು ನ್ಯಾಯಾಲಯ ಹೇಳಿದೆ.
ವಿಚ್ಛೇದನಕ್ಕಾಗಿ ಪತಿಯ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ನಿರಾಕರಿಸಿದ ನಂತರ, ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
ಸಣ್ಣಪುಟ್ಟ ಘಟನೆಗಳು ಮತ್ತು ವಿವಾದಗಳನ್ನು ‘ಕ್ರೌರ್ಯ’ ಎಂದು ಪರಿಗಣಿಸುವುದರಿಂದ ಅನೇಕ ವಿವಾಹಗಳು ಮುರಿದು ಬೀಳುತ್ತವೆ ಎಂದು ಹೈಕೋರ್ಟ್ ಹೇಳಿದೆ.
ಮತ್ತಷ್ಟು ಓದಿ: ರೇಮಂಡ್ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?
ಅತ್ತಿಗೆ ಮತ್ತು ಆಕೆಯ ಮಕ್ಕಳೊಂದಿಗೆ ಒಂದೇ ಕೋಣೆಯಲ್ಲಿ ಮಲಗಿದ್ದಕ್ಕೆ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಅಕ್ರಮ ಸಂಬಂಧ ಕಲ್ಪಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿದೆ. ಇನ್ನೂ ಪತಿ ಹೇಳುವಂತೆ ಪತ್ನಿ ತನ್ನನ್ನು ಕಳ್ಳನಂತೆ ಬಿಂಬಿಸಿದ್ದಳು, ಜನರು ನನ್ನನ್ನು ಅಟ್ಟಿಸಿಕೊಂಡು ಬರುವಂತೆ ಮಾಡಿದ್ದಳು ಎಂದು ದೂರಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ