Amarinder Singh: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಇಂದು ಬಿಜೆಪಿಗೆ ಸೇರ್ಪಡೆ

| Updated By: ಸುಷ್ಮಾ ಚಕ್ರೆ

Updated on: Sep 19, 2022 | 9:05 AM

80 ವರ್ಷದ ಅಮರೀಂದರ್ ಸಿಂಗ್ ಇಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ.

Amarinder Singh: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಇಂದು ಬಿಜೆಪಿಗೆ ಸೇರ್ಪಡೆ
ಅಮರೀಂದರ್ ಸಿಂಗ್
Follow us on

ನವದೆಹಲಿ: ಕಾಂಗ್ರೆಸ್​ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ (Amarinder Singh) ಬಳಿಕ ಪಂಜಾಬ್ ಲೋಕ ಕಾಂಗ್ರೆಸ್ (PLC) ಎಂಬ ತಮ್ಮದೇ ಹೊಸ ಪಕ್ಷ ಕಟ್ಟಿದ್ದರು. ಇದೀಗ ಅವರು ತಮ್ಮ ಹೊಸ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಸಜ್ಜಾಗಿದ್ದು, ಇಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿಗೆ ಸೇರಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಬದಲಿಗೆ ಚರಣ್​ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಗಿತ್ತು. ಇದರಿಂದ ಅಮರೀಂದರ್ ಸಿಂಗ್ ಅಸಮಾಧಾನಗೊಂಡು, ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ತೊರೆದ ನಂತರ ಅವರು ಪಂಜಾಬ್ ಲೋಕ ಕಾಂಗ್ರೆಸ್ (PLC) ರಚಿಸಿದ್ದರು.

80 ವರ್ಷದ ಅಮರೀಂದರ್ ಸಿಂಗ್ ಇಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ. ಪಂಜಾಬ್ ಲೋಕ ಕಾಂಗ್ರೆಸ್​ಗೆ ಸೇರ್ಪಡೆಗೊಂಡ 7 ಮಾಜಿ ಶಾಸಕರು ಮತ್ತು ಒಬ್ಬ ಮಾಜಿ ಸಂಸದರು ಕೂಡ ಇಂದು ಬಿಜೆಪಿಗೆ ಸೇರಲಿದ್ದಾರೆ.

ಇದನ್ನೂ ಓದಿ: ಪಂಜಾಬ್‌: 65 ಸ್ಥಾನಗಳಲ್ಲಿ ಬಿಜೆಪಿ, 37 ಸ್ಥಾನಗಳಲ್ಲಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಸ್ಪರ್ಧೆ

ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಇತ್ತೀಚೆಗೆ ಲಂಡನ್‌ನಿಂದ ಹಿಂದಿರುಗಿದ ಅಮರೀಂದರ್ ಸಿಂಗ್ ಕಳೆದ 15 ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 12ರಂದು ಅಮಿತ್ ಷಾ ಅವರೊಂದಿಗಿನ ಭೇಟಿಯ ನಂತರ, ರಾಷ್ಟ್ರೀಯ ಭದ್ರತೆ, ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ- ಭಯೋತ್ಪಾದನೆಯ ಪ್ರಕರಣಗಳು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಭವಿಷ್ಯದ ಮಾರ್ಗಸೂಚಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅವರು ಬಹಳ ಚರ್ಚೆ ನಡೆಸಿದ್ದರು.

ಇದನ್ನೂ ಓದಿ: Breaking: Capt Amarinder Singh: ಬಿಜೆಪಿಯೊಂದಿಗೆ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್​ ಅಮರಿಂದರ್ ಪಕ್ಷ ವಿಲೀನ

ಲಂಡನ್‌ಗೆ ತೆರಳುವ ಮುನ್ನ ಅಮರೀಂದರ್ ಸಿಂಗ್ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎಂದು ಪಂಜಾಬ್ ಹಿರಿಯ ಬಿಜೆಪಿ ನಾಯಕ ಹರ್ಜಿತ್ ಸಿಂಗ್ ಗ್ರೆವಾಲ್ ಜುಲೈನಲ್ಲಿ ತಿಳಿಸಿದ್ದರು. ಅಮರೀಂದರ್ ಸಿಂಗ್ 2 ಬಾರಿ ಪಂಜಾಬ್​ನ ಮುಖ್ಯಮಂತ್ರಿಯಾಗಿದ್ದವರು. ಅವರು ಪಟಿಯಾಲ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ನಡೆದ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಆಮ್ ಆದ್ಮಿ ಪಕ್ಷ (ಎಎಪಿ) 117 ಸದಸ್ಯರ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಮಾತ್ರ ಗಳಿಸಿತ್ತು. ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಅವರು ಸ್ಪರ್ಧಿಸಿದ್ದ ಎರಡೂ ಸ್ಥಾನಗಳಲ್ಲಿ ಸೋಲನ್ನು ಅನುಭವಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ