ಭಾರತದಲ್ಲಿ ಮತದಾನ ಹೆಚ್ಚಿಸಲು ಯುಎಸ್​ಏಡ್​ನಿಂದ 21 ಮಿಲಿಯನ್ ಡಾಲರ್; ಇದು ದೊಡ್ಡ ಸ್ಕ್ಯಾಮ್ ಎಂದು ಭಾರತೀಯರ ಆಕ್ರೋಶ

USAID grant of 21 million USD for Indian elections: ಅಮೆರಿಕದ ಯುಎಸ್​ಏಡ್ ಏಜೆನ್ಸಿಯಿಂದ ಜಾಗತಿಕವಾಗಿ ನೀಡಲಾಗಿರುವ ಅನುದಾನಗಳಲ್ಲಿ ಭಾರತದ ಮತದಾನ ವೃದ್ಧಿ ಕಾರ್ಯವೂ ಇದೆ. ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಸಹಾಯವಾಗಿ ಯುಎಸ್​ಏಡ್ 21 ಮಿಲಿಯನ್ ಡಾಲರ್ ಗ್ರ್ಯಾಂಟ್ ನೀಡಿರುವುದು ಬೆಳಕಿಗೆ ಬಂದಿದೆ. ಅಮೆರಿಕದ ಡೋಜೆ ಇಲಾಖೆ ಯುಎಸ್​ಏಡ್​ನ ಅನುದಾನಗಳ ಪಟ್ಟಿ ಬಹಿರಂಗ ಮಾಡಿದೆ.

ಭಾರತದಲ್ಲಿ ಮತದಾನ ಹೆಚ್ಚಿಸಲು ಯುಎಸ್​ಏಡ್​ನಿಂದ 21 ಮಿಲಿಯನ್ ಡಾಲರ್; ಇದು ದೊಡ್ಡ ಸ್ಕ್ಯಾಮ್ ಎಂದು ಭಾರತೀಯರ ಆಕ್ರೋಶ
ಮತದಾನ

Updated on: Feb 16, 2025 | 5:26 PM

ನವದೆಹಲಿ, ಫೆಬ್ರುವರಿ 16: ಅಮೆರಿಕದ ಯುಎಸ್​ಏಡ್ ಎನ್ನುವ ಸರ್ಕಾರ ಬೆಂಬಲಿತ ಏಜೆನ್ಸಿಯಿಂದ ವಿಶ್ವಾದ್ಯಂತ ವಿವಿಧ ಕಾರ್ಯಗಳಿಗೆ ದೇಣಿಗೆಗಳನ್ನು ನೀಡಲಾಗಿರುವುದು ಬೆಳಕಿಗೆ ಬಂದಿದೆ. ಅಮೆರಿಕದ ಸರ್ಕಾರಿ ಕ್ಷಮತಾ ಇಲಾಖೆಯ (DOGE) ಮುಖ್ಯಸ್ಥ ಇಲಾನ್ ಮಸ್ಕ್ ಅವರು ಯುಎಸ್​ಏಡ್ ನೀಡಿರುವ ಹಲವು ಗ್ರ್ಯಾಂಟ್​ಗಳನ್ನು ರದ್ದುಪಡಿಸಿದ್ದಾರೆ. ಈ ಗ್ರ್ಯಾಂಟ್​ಗಳ ಪಟ್ಟಿಯನ್ನೂ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಚ್ಚರಿ ಎಂದರೆ ಯುಎಸ್​ಏಡ್ ಸುಮಾರು 21 ಮಿಲಿಯನ್ ಡಾಲರ್ ಅನ್ನು ಭಾರತದಲ್ಲಿ ಮತದಾನ ಹೆಚ್ಚಿಸುವ ಕಾರ್ಯಕ್ಕೆಂದು ಗ್ರ್ಯಾಂಟ್ ಮಾಡಿದೆ. ಅಷ್ಟೇ ಅಲ್ಲ, ಭಾರತದ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ನೇಪಾಳಕ್ಕೂ ಕೆಲ ಫಂಡ್​ಗಳನ್ನು ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲೆಂದು 21 ಮಿಲಿಯನ್ ಡಾಲರ್ ವ್ಯಯಿಸಿರುವುದು ಗಂಭೀರ ವಿಚಾರ ಎಂದು ಹಲವು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಚುನಾವಣಾ ಪ್ರಕ್ರಿಯೆಗೆ ಹೊರಗಿನವರ ಹಸ್ತಕ್ಷೇಪ ಆಗಿದೆ ಎಂದು ಆಡಳಿತಾರೂಢ ಬಿಜೆಪಿ ಪಕ್ಷ ಆರೋಪಿಸಿದೆ.

ಈ ವಿಚಾರವನ್ನು ತಮ್ಮ ಎಕ್ಸ್ ಖಾತೆಯ ಪೋಸ್ಟ್​ವೊಂದರಲ್ಲಿ ಪ್ರಸ್ತಾಪಿಸಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ‘ಈ ಅನುದಾನದಿಂದ ಯಾರಿಗೆ ಲಾಭ? ಆಡಳಿತ ಪಕ್ಷಕ್ಕಂತೂ ಖಂಡಿತ ಲಾಭ ಇಲ್ಲ’ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್ ಎಎಪಿ ನಾಯಕ ಅನೋಖ್ ಮಿತ್ತಲ್ ಪತ್ನಿಯ ಹತ್ಯೆಗೈದ ದುಷ್ಕರ್ಮಿಗಳು

ಯುಎಸ್​ಏಡ್​ನ ಈ ಅನುದಾನಗಳನ್ನು ಮಾನವ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಎಂದು ಆರ್ಥಿಕ ತಜ್ಞ ಸಂಜೀವ್ ಸಾನ್ಯಾಲ್ ಬಣ್ಣಿಸಿದ್ದು ಈ ಹಣವನ್ನು ಯಾರು ಪಡೆದರು ಎಂಬುದು ಪತ್ತೆಯಾಗಬೇಕು ಎಂದಿದ್ದಾರೆ.

ಇಲಾನ್ ಮಸ್ಕ್ ನೇತೃತ್ವದ ಡೋಜೆ ಇಲಾಖೆ ಇತ್ತೀಚೆಗೆ ಯುಎಸ್​ಏಡ್​ ಬಿಡುಗಡೆ ಮಾಡಿದ ಅನುದಾನಗಳ ವಿವರಗಳಿರುವ ಪಟ್ಟಿ ಪ್ರಕಟಿಸಿದೆ. ಚುನಾವಣೆಗಳು ಮತ್ತು ರಾಜಕೀಯ ಪ್ರಕ್ರಿಯೆ ಬಲಪಡಿಸಲು ಬರೋಬ್ಬರಿ 486 ಮಿಲಿಯನ್ ಡಾಲರ್ ಮೊತ್ತದ ಗ್ರ್ಯಾಂಟ್ ನೀಡಿದೆ. ಇದರಲ್ಲಿ ಭಾರತದ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ಗ್ರ್ಯಾಂಟ್ ಕೂಡ ಸೇರಿದೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸರ್ಕಾರಿ ವೆಚ್ಚಗಳನ್ನು ಮರುಪರಿಶೀಲಿಸಿ, ವೆಚ್ಚ ಕಡಿತ ಮಾಡಲು ಡೋಜೆ ಇಲಾಖೆ ಸೃಷ್ಟಿಸಿ ಅದರ ಚುಕ್ಕಾಣಿಯನ್ನು ಇಲಾನ್ ಮಸ್ಕ್​ಗೆ ನೀಡಿದ್ದಾರೆ. ವಿಶ್ವದ ನಂಬರ್ ಒನ್ ಶ್ರೀಮಂತರೂ ಆದ ಇಲಾನ್ ಮಸ್ಕ್ ಅವರು ಯುಎಸ್​ಏಡ್ ಅನ್ನು ಕ್ರಿಮಿನಲ್ ಸಂಘಟನೆ ಎಂದು ಬಣ್ಣಿಸಿದ್ದು, ಅನುಮಾನಸ್ಪದ ವಿದೇಶೀ ಯೋಜನೆಗಳಿಗೆ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಜಗತ್ತಿನಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ?; ತೋರು ಬೆರಳು ತೋರಿಸಿ ಖಡಕ್ ಉತ್ತರ ಕೊಟ್ಟ ಸಚಿವ ಜೈಶಂಕರ್

ಗಮನಿಸಬೇಕಾದ ಸಂಗತಿ ಎಂದರೆ, ಪಾಕಿಸ್ತಾನ ಮೂಲದ ಫಾಲಾ-ಎ-ಇನ್ಸಾನಿಯಾತ್ ಫೌಂಡೇಶನ್ ಎನ್ನುವ ಸಂಸ್ಥೆಗೂ ಯುಎಸ್​ಏಡ್​ನಿಂದ ಫಂಡಿಂಗ್ ಹೋಗಿದೆ. ಈ ಸಂಘಟನೆಯು ಮುಂಬೈ ದಾಳಿಗೆ ಕಾರಣವಾದ ಲಷ್ಕರೆ ತೈಯಬಾ ಎನ್ನುವ ಉಗ್ರ ಸಂಘಟನೆಯ ಒಂದು ಭಾಗ ಎನ್ನಲಾಗಿದೆ. 2010ರಲ್ಲಿ ಈ ಸಂಘಟನೆಯನ್ನು ಅಮೆರಿಕವೇ ನಿಷೇಧ ಮಾಡಿದ್ದರೂ ಫಾಲಾ ಎ ಇನ್ಸಾನಿಯಾತ್ ಸಂಘಟನೆಗೆ ಅಮೆರಿಕದಿಂದಲೇ ಫಂಡಿಂಗ್ ಹೋಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ