ದೆಹಲಿ ರಸ್ತೆಯಲ್ಲಿ ಯುವತಿಯನ್ನು ಎಳೆದೊಯ್ದ ಕಾರು; ಪ್ರಕರಣದ ತನಿಖೆ ದೆಹಲಿಯ ಹಿರಿಯ ಪೊಲೀಸ್​​ ಅಧಿಕಾರಿಗೆ ವಹಿಸಿದ ಅಮಿತ್ ಶಾ

| Updated By: ರಶ್ಮಿ ಕಲ್ಲಕಟ್ಟ

Updated on: Jan 02, 2023 | 8:48 PM

ಈ ಪ್ರಕರಣ ಬಗ್ಗೆ ಆದಷ್ಟು ಬೇಗ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಆಕೆಯ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ನಂತರ 20 ವರ್ಷದ ಯುವತಿಯನ್ನು 10-12 ಕಿ.ಮೀ ವರೆಗೆ ಕಾರು ರಸ್ತೆಯ ಮೂಲಕ ಎಳೆದೊಯ್ದಿತ್ತು.

ದೆಹಲಿ ರಸ್ತೆಯಲ್ಲಿ ಯುವತಿಯನ್ನು ಎಳೆದೊಯ್ದ ಕಾರು; ಪ್ರಕರಣದ ತನಿಖೆ ದೆಹಲಿಯ ಹಿರಿಯ ಪೊಲೀಸ್​​ ಅಧಿಕಾರಿಗೆ ವಹಿಸಿದ ಅಮಿತ್ ಶಾ
ಅಮಿತ್ ಶಾ
Follow us on

ಹೊಸ ವರ್ಷದಂದು ದೆಹಲಿಯಲ್ಲಿ ಮಹಿಳೆಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಕಾರಿನಿಂದ ಎಳೆದುಕೊಂಡು ಹೋಗಿ ಆಕೆಯ ಸಾವಿಗೆ ಕಾರಣವಾದ ಆಘಾತಕಾರಿ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಶಾಲಿನಿ ಸಿಂಗ್ ಅವರಿಗೆ ವಹಿಸಿದ್ದಾರೆ. ಈ ಪ್ರಕರಣ ಬಗ್ಗೆ ಆದಷ್ಟು ಬೇಗ ಕೇಂದ್ರ ಗೃಹ ಸಚಿವಾಲಯಕ್ಕೆ (Union Home Ministry) ವರದಿ ಸಲ್ಲಿಸಬೇಕು ಎಂದು ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಆಕೆಯ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ನಂತರ 20 ವರ್ಷದ ಯುವತಿಯನ್ನು 10-12 ಕಿ.ಮೀ ವರೆಗೆ ಕಾರು ರಸ್ತೆಯ ಮೂಲಕ ಎಳೆದೊಯ್ದಿತ್ತು. ಆಕೆಯ ದೇಹವು ಅಂಡರ್‌ಕ್ಯಾರೇಜ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಕಾರಿನಲ್ಲಿದ್ದವರು ಗಮನಿಸಲಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ. ಬಿಜೆಪಿ ಮುಖಂಡ ಎನ್ನಲಾಗಿರುವ ಒಬ್ಬ ವ್ಯಕ್ತಿ ಸೇರಿದಂತೆ  ಐವರನ್ನು ಬಂಧಿಸಲಾಗಿದೆ. ಆದರೆ ಮಹಿಳೆಯ ಮನೆಯವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದು, ಪೊಲೀಸರು ಅದನ್ನು ನಿರಾಕರಿಸಿದ್ದಾರೆ.

ಯುವತಿಯ ಮರಣೋತ್ತರ ಪರೀಕ್ಷೆ ಮತ್ತು  ಕಾರಿನಲ್ಲಿದ್ದವರು  ಆಲ್ಕೋಹಾಲ್ ಪರೀಕ್ಷೆಯ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಅಪಘಾತವು ಮಧ್ಯರಾತ್ರಿಯ ನಂತರ ಕೆಲವು ಗಂಟೆಗಳ ನಂತರ ಸಂಭವಿಸಿದೆ, ದೆಹಲಿ ಪೊಲೀಸರ ಪ್ರಕಾರ, ನಗರವು ಸುಮಾರು 2,000 ಪೊಲೀಸರ ಕಣ್ಗಾವಲಿನಲ್ಲಿತ್ತು. ಹೊಸ ವರ್ಷದ ಮುನ್ನಾದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು, ಕಾರು ಮಹಿಳೆಯನ್ನು 10-12 ಕಿ.ಮೀ.ದೂರಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಎಳೆದೊಯ್ದಿದ್ದು, ಯಾವುದೇ ಪೊಲೀಸರಿಂದ ತಪಾಸಣೆಗೆ ಒಳಪಟ್ಟಿಲ್ಲ.

ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದರೂ ಪೊಲೀಸರು ಪ್ರತಿಕ್ರಿಯಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

“ನಾನು ಪಿಸಿಆರ್ (ಪೊಲೀಸ್ ಕಂಟ್ರೋಲ್ ರೂಮ್) ವ್ಯಾನ್‌ಗಳಿಗೆ ತಿಳಿಸಿದೆ ಮತ್ತು ಕಾರನ್ನು ತೋರಿಸಿದೆ, ಆದರೆ ಅವರು ಅದನ್ನು ಹಿಡಿಯಲು ಪ್ರಯತ್ನಿಸಲಿಲ್ಲ” ಎಂದು ಘಟನೆಯನ್ನು ನೋಡಿದ ಮತ್ತು ಕಾರನ್ನು ಬೆನ್ನಟ್ಟಿದ ಸ್ಥಳೀಯ ಮಿಠಾಯಿ ವ್ಯಾಪಾರಿ ದೀಪಕ್ ದಹಿಯಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: shocking ಹೊಸ ವರ್ಷಾಚರಣೆ ವೇಳೆ ಭೀಕರ ಅಪಘಾತ, ಯುವತಿಯನ್ನು ಎಳೆದೊಯ್ದಿ ಕಾರು: 4ಕಿ.ಮೀ ದೂರದಲ್ಲಿ ಶವ ಪತ್ತೆ

ಭಾನುವಾರ ಮುಂಜಾನೆ 3.30ರ ಸುಮಾರಿಗೆ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ, ಕುಡಿದು ವಾಹನ ಚಲಾಯಿಸುತ್ತಿದ್ದ ಐವರ ಕಾರು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆ ವೇಳೆ ಆಕೆಯ ಬಟ್ಟೆ ಕಾರಿಗೆ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಆ ಕಾರು ಆಕೆಯನ್ನು 20 ಕಿ.ಮೀವರೆಗೂ ಎಳೆದುಕೊಂಡು ಹೋಗಿತ್ತು. ಕಂಠಪೂರ್ತಿ ಕುಡಿದಿದ್ದರಿಂದ ಆಕೆ ತಮ್ಮ ಕಾರಿನಡಿ ಸಿಲುಕಿಕೊಂಡಿದ್ದು ಆ ಐವರಿಗೆ ತಿಳಿದಿಲ್ಲ ಎನ್ನಲಾಗುತ್ತಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ. ಅಲ್ಲದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಆರೋಪಿಗಳು ಯು-ಟರ್ನ್ ತೆಗೆದುಕೊಳ್ಳುವ ಮೂಲಕ ಸುಮಾರು 4ರಿಂದ 5 ಕಿಲೋಮೀಟರ್ ಒಂದೇ ರಸ್ತೆಯಲ್ಲಿ ಪದೇ ಪದೇ ವಾಹನ ಚಲಾಯಿಸುತ್ತಿದ್ದರು ಎಂದು ದಹಿಯಾ ಹೇಳಿದ್ದಾರೆ.

ನಾನು ಹಲವು ಬಾರಿ ಅವರನ್ನು ತಡೆಯಲು ಯತ್ನಿಸಿದರೂ ವಾಹನ ನಿಲ್ಲಿಸದೆ ಸುಮಾರು ಒಂದೂವರೆ ಗಂಟೆಗಳ ಕಾಲ ಯುವತಿಯ ಶವವನ್ನು ಸುಮಾರು 20 ಕಿ.ಮೀ ಹೊತ್ತು ಸಾಗಿಸಿದರು ಎಂದು ಪ್ರತ್ಯಕ್ಷದರ್ಶಿ ದಹಿಯಾ ಹೇಳಿದ್ದಾರೆ. ಆತ ತನ್ನ ಬೈಕ್​ನಲ್ಲಿ ಕಾರನ್ನು ಹಿಂಬಾಲಿಸಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದನು. ಸುಮಾರು ಒಂದೂವರೆ ಗಂಟೆಗಳ ನಂತರ ಆ ಯುವತಿಯ ಶವವು ಕಾಂಜ್ವಾಲಾ ರಸ್ತೆಯ ಜ್ಯೋತಿ ಗ್ರಾಮದ ಬಳಿ ಕಾರಿನಿಂದ ಹೊರಗೆ ಬಿದ್ದಿತು. ನಂತರ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ; ದೆಹಲಿ ಯುವತಿಯ ಸಾವಿನ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಬೇಸರ

ಆ ಯುವತಿಯ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಆಕೆಯ ದೇಹವು ಕಾರಿನ ಕೆಳಗೆ ಸಿಕ್ಕಿಹಾಕಿಕೊಂಡು, ಬಹಳ ದೂರದವರೆಗೆ ಎಳೆದುಕೊಂಡು ಹೋಗಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಈ ಅಪಘಾತದ ವೇಳೆ ಕಾರಿನ ಗ್ಲಾಸ್ ಹಾಕಿಕೊಂಡಿದ್ದರು. ಅಲ್ಲದೆ, ಕಾರಿನೊಳಗೆ ಜೋರಾಗಿ ಸಂಗೀತ ಹಾಕಿಕೊಂಡಿದ್ದರು. ಆದ್ದರಿಂದ ಅವರು ತಮ್ಮ ಕಾರಿನಡಿ ಯುವತಿ ಸಿಲುಕಿರುವುದನ್ನು ಗಮನಿಸಲಿಲ್ಲ. ಆಕೆ ಸಿಲುಕಿದ್ದು ಗೊತ್ತಾಗುತ್ತಿದ್ದಂತೆ ಕಾರಿನಿಂದ ಪರಾರಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ