ನಾಡು ಒಡೆಯಲು ಬಿಡುವುದಿಲ್ಲ, ಇದು ವಿಭಜಕರು ಮತ್ತು ರಕ್ಷಕರ ನಡುವಿನ ಯುದ್ಧ: ಮಣಿಪುರದಲ್ಲಿ ಗುಡುಗಿದ ಅಮಿತ್ ಶಾ

|

Updated on: Apr 15, 2024 | 4:49 PM

Amit Shah at Manipur: ಮಣಿಪುರ ರಾಜಧಾನಿ ಇಂಫಾಲ್​ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಏಪ್ರಿಲ್ 15ರಂದು ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ರಾಜ್ಯವನ್ನು ಒಡೆಯಲು ತಮ್ಮ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯಲ್ಲ, ಬದಲಾಗಿ ಮಣಿಪುರ ಒಡೆಯುವ ವಿಭಜಕರು ಮತ್ತು ಮಣಿಪುರವನ್ನು ರಕ್ಷಿಸಬಯಸುವ ಬಿಜೆಪಿ ನಡುವಿನ ಯುದ್ಧ ಎಂದು ಹೇಳಿದ್ದಾರೆ. ದೇಶ ಒಡೆಯುವ ತುಕಡೆ ತುಕಡೆ ಗ್ಯಾಂಗ್​ನ ಸಮರ್ಥಕ ಎಂದು ಇದೇ ವೇಳೆ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಹರಿಹಾಯ್ದಿದ್ದಾರೆ.

ನಾಡು ಒಡೆಯಲು ಬಿಡುವುದಿಲ್ಲ, ಇದು ವಿಭಜಕರು ಮತ್ತು ರಕ್ಷಕರ ನಡುವಿನ ಯುದ್ಧ: ಮಣಿಪುರದಲ್ಲಿ ಗುಡುಗಿದ ಅಮಿತ್ ಶಾ
ಅಮಿತ್ ಶಾ
Follow us on

ಇಂಫಾಲ್, ಏಪ್ರಿಲ್ 15: ಮಣಿಪುರ ರಾಜ್ಯವನ್ನು ಒಡೆಯಲು ನಾವು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಸಾರ್ವಜನಿಕ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯಲ್ಲ. ಮಣಿಪುರ ರಾಜ್ಯವನ್ನು ಒಡೆಯುವ ವಿಭಜಕ ಶಕ್ತಿಗಳು (divisive forces) ಮತ್ತು ಮಣಿಪುರವನ್ನು ರಕ್ಷಿಸುವ ಶಕ್ತಿಗಳ (protecting forces) ನಡುವಿನ ಯುದ್ಧ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಾಗರಿಕ ಹಿಂಸಾಚಾರಗಳಿಂದ ನಲುಗುತ್ತಿರುವ ಮಣಿಪುರ ರಾಜ್ಯಕ್ಕೆ ಈ ವರ್ಷ ಅಮಿತ್ ಶಾ ನೀಡಿದ ಮೊದಲ ಭೇಟಿ ಇದು. ‘ಯಾರು ಎಷ್ಟೇ ಪ್ರಯತ್ನಿಸಿದರೂ ಮಣಿಪುರವನ್ನು ಒಡೆಯಲು ನಾವು ಬಿಡುವುದಿಲ್ಲ. ಇದು ಬಹಳ ಮುಖ್ಯ ವಿಷಯ,’ ಎಂದು ತಮ್ಮ ಭಾಷಣದಲ್ಲಿ ಅಮಿತ್ ಶಾ ಹೇಳಿದ್ದಾರೆ.

‘ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆ ಅಲ್ಲ. ಮಣಿಪುರವನ್ನು ವಿಭಜಿಸುವ ಜನರು ಮತ್ತು ಮಣಿಪುರವನ್ನು ರಕ್ಷಿಸುವ ಬಿಜೆಪಿ ಮಧ್ಯೆ ನಡೆಯುತ್ತಿರುವ ಸ್ಪರ್ಧೆ. ಕಳೆದ 10 ವರ್ಷದಲ್ಲಿ ಭಾರತವನ್ನು ಸಮೃದ್ಧ ದೇಶವನ್ನಾಗಿ ಮಾಡಿರುವುದು ಮಾತ್ರವಲ್ಲ, ಸುರಕ್ಷತೆ ಮತ್ತು ಭದ್ರತೆಯನ್ನೂ ಹೆಚ್ಚಿಸಿದ್ದಾರೆ. 75 ವರ್ಷ ಕಾಲ ಉಗ್ರ ಮತ್ತು ನಕ್ಸಲ್ ಶಕ್ತಿಗಳಿಂದ ನಲುಗಿದ್ದ ಈಶಾನ್ಯ ಪ್ರದೇಶದಲ್ಲಿ ಮೋದಿ ಅವರು ಶಾಂತಿ ಮತ್ತು ಸಹಭಾಳ್ವೆಯ ವಾತಾವರಣ ತಂದಿದ್ದಾರೆ,’ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್​ ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳು

‘ಬಿಜೆಪಿ ಮಣಿಪುರದಲ್ಲಿ ಭ್ರಷ್ಟಾಚಾರಕ್ಕೆ ಅಂತ್ಯವಾಡಿದೆ. ಮುಂದಿನ ದಿನಗಳಲ್ಲಿ ಮೋದಿ ಅವರು ಇಲ್ಲಿ ಶಾಂತಿ ಪಾಲನೆಗೆ ಆದ್ಯತೆ ಕೊಡುತ್ತಾರೆ. ಮಣಿಪುರ ಮತ್ತು ಈಶಾನ್ಯ ಪ್ರದೇಶಗಳ ಹಣೆಬರಹ ಬದಲಾದರೆ ದೇಶದ ಹಣೆಬರಹ ಬದಲಾಗುತ್ತದೆ. ಇನ್ನರ್ ಲೈನ್ ಪರ್ಮಿಟ್ ಕೊಡುವ ಮೂಲಕ ಬಿಜೆಪಿ ಸರ್ಕಾರ ಮಣಿಪುರವನ್ನು ಬಲಪಡಿಸಿದೆ. ಇನ್ನರ್ ಲೈನ್ ಪರ್ಮಿಟ್ ಇಲ್ಲದೇ ಮಣಿಪುರ ಒಗ್ಗೂಡಿ ಉಳಿಯಲು ಆಗುವುದಿಲ್ಲ,’ ಎಂದೂ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಆ ಪಕ್ಷ ತುಕಡೆ ತುಕಡೆ ಗ್ಯಾಂಗ್​ಗೆ ಸದಾ ಪ್ರಾಮುಖ್ಯತೆ ಕೊಡುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಬಿಜೆಪಿ ಪಕ್ಷದ 10 ವರ್ಷಗಳ ಸಾಧನೆಗಳ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮಾತನ್ನು ಗೌರವಿಸುತ್ತೇವೆ ಜೈಶಂಕರ್​​, ಖಂಡಿತ 17 ಭಾರತೀಯರನ್ನು ಬಿಡುಗಡೆ ಮಾಡುತ್ತೇವೆ ಎಂದ ಇರಾನ್

ಕಳೆದ 10 ವರ್ಷದಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. 80 ಕೋಟಿ ಜನರು ಉಚಿತ ಪಡಿತರ ಪಡೆದಿದ್ದಾರೆ. 10 ಕೋಟಿ ಗ್ಯಾಸ್ ಸಿಲಿಂಡರ್ ವಿತರಣೆ ಆಗಿದೆ. 14 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಕನೆಕ್ಷನ್ ಕೊಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ