Amit Shah: ಲೋಕಸಭೆ ಚುನಾವಣೆಯಲ್ಲಿ ನಮಗೆ 35 ಸ್ಥಾನ ನೀಡಿ, ಮಮತಾ ಸರ್ಕಾರ ಪತನವಾಗಲಿದೆ; ಬಂಗಾಳದಲ್ಲಿ ಅಮಿತ್ ಶಾ

|

Updated on: Apr 15, 2023 | 12:01 PM

ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಕಹಳೆ ಮೊಳಗಿಸಿದ್ದಾರೆ. 2024ರ ಲೋಕಚಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ 35ರಲ್ಲಿ ಗೆಲುವು ಸಾಧಿಸುವ ಗುರಿಯನ್ನೂ ಅವರು ಹಾಕಿಕೊಂಡಿದ್ದಾರೆ.

Amit Shah: ಲೋಕಸಭೆ ಚುನಾವಣೆಯಲ್ಲಿ ನಮಗೆ 35 ಸ್ಥಾನ ನೀಡಿ, ಮಮತಾ ಸರ್ಕಾರ ಪತನವಾಗಲಿದೆ; ಬಂಗಾಳದಲ್ಲಿ ಅಮಿತ್ ಶಾ
ಸಾಂದರ್ಭಿಕ ಚಿತ್ರ
Follow us on

ಕೋಲ್ಕತ್ತ: ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಕಹಳೆ ಮೊಳಗಿಸಿದ್ದಾರೆ. 2024ರ ಲೋಕಚಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ (West Bengal) 42 ಲೋಕಸಭಾ ಕ್ಷೇತ್ರಗಳ ಪೈಕಿ 35ರಲ್ಲಿ ಗೆಲುವು ಸಾಧಿಸುವ ಗುರಿಯನ್ನೂ ಅವರು ಹಾಕಿಕೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಭೀರ್​​ಭೂಮ್ ಜಿಲ್ಲೆಯ ಸೂರಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಅಳಿಯ, ತೃಣಮೂಲ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಹಾಗೂ ಟಿಎಂಸಿಯ ಬೀರ್​ಭೂಮ್ ಜಿಲ್ಲಾ ಘಟಕದ ಅಧ್ಯಕ್ಷ ಅನುಬ್ರತಾ ಮೊಂಡನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿರುವ ಮೊಂಡಲ್ ಸದ್ಯ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಯೋಜಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Narendra Modi: ಸಮಾವೇಶಗಳಿಂದಷ್ಟೇ ಹವಾಮಾನ ಬದಲಾವಣೆ ವಿರುದ್ಧ ಹೋರಾಟ ಅಸಾಧ್ಯ, ಸಾಮೂಹಿಕ ಶ್ರಮ ಅಗತ್ಯ; ಪ್ರಧಾನಿ ಮೋದಿ

‘ದೀದಿ (ಮಮತಾ ಬ್ಯಾನರ್ಜಿ) ಮತ್ತು ಭತಿಜಾ (ಅಭಿಷೇಕ್ ಬ್ಯಾನರ್ಜಿ) ಅವರ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಉತ್ತಮ ಆಡಳಿತ ನೀಡಲು ಬಿಜೆಪಿಯೇ ಅನಿವಾರ್ಯ. ನಾವು ಜಾನುವಾರು ಕಳ್ಳಸಾಗಣೆಯನ್ನು ನಿಲ್ಲಿಸಿದ್ದೇವೆ. ನೀವು ಬಂಗಾಳದಲ್ಲಿ ಒಳನುಸುಳುವಿಕೆ ಮುಂದುವರಿಯುದನ್ನು ಆಶಿಸುತ್ತೀರಾ? ಇದನ್ನು ತಡೆಯಬೇಕಿದ್ದರೆ ಒಂದೇ ದಾರಿ, ಅದು ಬಿಜೆಪಿಗೆ ಮತ ನೀಡುವುದು’ ಎಂದು ಶಾ ಹೇಳಿದ್ದಾರೆ.

‘2024ರ ಲೋಕಸಭೆ ಚುನಾವಣೆಯಲ್ಲಿ ನಮಗೆ 35 ಸ್ಥಾನಗಳನ್ನು ನೀಡಿ. ಮಮತಾ ಬ್ಯಾನರ್ಜಿ ಸರ್ಕಾರ ಪತನವಾಗಲಿದೆ. ಬಂಗಾಳದಲ್ಲಿ ಭ್ರಷ್ಟಾಚಾರ ಇದೆ. ಬಿಜೆಪಿ ಮಾತ್ರ ಅದನ್ನು ತಡೆಯಬಲ್ಲದು’ ಎಂದು ಶಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ