Amit Shah: ವೈಷ್ಣೋದೇವಿ ದರ್ಶನ ಪಡೆದ ಅಮಿತ್ ಶಾ; ಗೃಹ ಸಚಿವರ ಭೇಟಿ ಹಿನ್ನೆಲೆ ಜಮ್ಮು, ರಾಜೌರಿಯಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತ

| Updated By: ಸುಷ್ಮಾ ಚಕ್ರೆ

Updated on: Oct 04, 2022 | 12:29 PM

ಕೇಂದ್ರ ಗೃಹ ಸಚಿವ ಜಮ್ಮುವಿಗೆ ಭೇಟಿ ನೀಡಿರುವುದರಿಂದ ಇಂದು ಸಂಜೆ 5 ಗಂಟೆಯವರೆಗೆ ಜಮ್ಮು ಹಾಗೂ ರಾಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

Amit Shah: ವೈಷ್ಣೋದೇವಿ ದರ್ಶನ ಪಡೆದ ಅಮಿತ್ ಶಾ; ಗೃಹ ಸಚಿವರ ಭೇಟಿ ಹಿನ್ನೆಲೆ ಜಮ್ಮು, ರಾಜೌರಿಯಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತ
ಮಾತಾ ವೈಷ್ಣೋದೇವಿ ದರ್ಶನ ಪಡೆದ ಅಮಿತ್ ಶಾ
Follow us on

ಜಮ್ಮು: ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah in Jammu Kashmir) ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಇಂದು ಅವರು ರಾಜೌರಿ ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ರಾಜೌರಿ ಜಿಲ್ಲೆಗಳಲ್ಲಿ ಇಂಟರ್​ನೆಟ್​​ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ 2 ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಇಂಟರ್​ನೆಟ್​​ ಸೇವೆ ಸ್ಥಗಿತವಾಗಿದೆ. ಈ ರ್ಯಾಲಿಗೂ ಮೊದಲು ಅಮಿತ್ ಶಾ ಮಾತಾ ವೈಷ್ಣೋದೇವಿ ದರ್ಶನ (Vaishno Devi Temple) ಪಡೆದಿದ್ದಾರೆ.

ಕೇಂದ್ರ ಗೃಹ ಸಚಿವ ಜಮ್ಮುವಿಗೆ ಭೇಟಿ ನೀಡಿರುವುದರಿಂದ ಇಂದು ಸಂಜೆ 5 ಗಂಟೆಯವರೆಗೆ ಜಮ್ಮು ಹಾಗೂ ರಾಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಜಿಚಟ್ ಹೆಲಿಪ್ಯಾಡ್ ಮೂಲಕ ಅವರು ಕತ್ರಾ ದೇಗುಲವನ್ನು ತಲುಪಿದ್ದಾರೆ. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡ ತೆರಳಿದ್ದರು.

ಕೇಂದ್ರ ಗೃಹ ಸಚಿವರಾಗಿ ನೇಮಕಗೊಂಡ ನಂತರ ಅಮಿತ್ ಶಾ ಅವರ ಮೊದಲ ಜಮ್ಮು ಭೇಟಿ ಇದಾಗಿದೆ. ಅಮಿತ್ ಶಾ ನಂತರ ವೈಷ್ಣೋ ದೇವಿ ದೇವಸ್ಥಾನದಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿ ರಾಜೌರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಅವರು ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜಮ್ಮುವಿನ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಇದನ್ನೂ ಓದಿ: Amit Shah: ಅಕ್ಟೋಬರ್‌ನಲ್ಲಿ ಅಮಿತ್ ಶಾ ಜಮ್ಮು- ಕಾಶ್ಮೀರಕ್ಕೆ ಭೇಟಿ, ಪಹಾರಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಾಧ್ಯತೆ

ಬಳಿಕ ಅಮಿತ್ ಶಾ ರಾಜೌರಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ ಮತ್ತು ಜಮ್ಮುವಿನ ರಘುನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇಂದು ಸಂಜೆ ಗೃಹ ಸಚಿವ ಅಮಿತ್ ಶಾ ಈ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದ ಸಭೆಗಳು ಸೇರಿದಂತೆ ಹಲವಾರು ನಿರ್ಣಾಯಕ ಸಭೆಗಳನ್ನು ನಡೆಸಲಿದ್ದಾರೆ.

ನಾಳೆ (ಬುಧವಾರ) ಶ್ರೀನಗರದ ರಾಜಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಈ ಉನ್ನತ ಮಟ್ಟದ ಸಭೆಯಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ, ಸೇನೆಯ ಉನ್ನತ ಅಧಿಕಾರಿಗಳು, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತ ಭಾಗವಹಿಸಲಿದ್ದಾರೆ. ಅಮಿತ್ ಶಾ ನಾಳೆ ಬೆಳಿಗ್ಗೆ 11.30 ರ ಸುಮಾರಿಗೆ ಬರಾಮುಲ್ಲಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: Amit Shah: ಜಮ್ಮು ಕಾಶ್ಮೀರಕ್ಕೆ ಅಮಿತ್ ಶಾ ಭೇಟಿ; ಇಂದು ಪಹಾರಿ ಸಮುದಾಯದ ಜೊತೆ ಸಂವಾದ

2019ರ ಆಗಸ್ಟ್‌ನಲ್ಲಿ ಮೋದಿ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಗೃಹ ಸಚಿವ ಅಮಿತ್ ಶಾ ತಮ್ಮ ಭೇಟಿಯ ವೇಳೆ ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳನ್ನು ಪ್ರತಿನಿಧಿಸುವ ವಿವಿಧ ನಿಯೋಗಗಳನ್ನು ಭೇಟಿ ಮಾಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶದ ರಾಜಕೀಯ ಬೆಳವಣಿಗೆಗಳು ಮತ್ತು 2023ರಲ್ಲಿ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ಚುನಾವಣೆಗಳ ಬಗ್ಗೆ ಚರ್ಚಿಸಲು ಅಮಿತ್ ಷಾ ಅವರು ತಮ್ಮ ಪ್ರವಾಸದ ಸಮಯದಲ್ಲಿ ಜಮ್ಮು ಕಾಶ್ಮೀರದ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ