ಪಶ್ಚಿಮ ಬಂಗಾಳ ಬಿಜೆಪಿ ಚುನಾವಣಾ ಪ್ರಣಾಳಿಕೆ; ಸೋನಾರ್ ಬಾಂಗ್ಲಾ ಕನಸು ಪುನರುಚ್ಚರಿಸಿದ ಅಮಿತ್ ಶಾ

| Updated By: ganapathi bhat

Updated on: Apr 06, 2022 | 6:54 PM

West Bengal Assembly Elections 2021: ಶತಕಗಳ ಕಾಲ ಪಶ್ಚಿಮ ಬಂಗಾಳ ದೇಶವನ್ನು ಬಹು ವಿಧದಲ್ಲಿ ಆಳಿದೆ. ಧಾರ್ಮಿಕ ಕ್ಷೇತ್ರದಲ್ಲಿ, ವಿಜ್ಞಾನ ವಿಭಾಗದಲ್ಲಿ, ರಾಜಕೀಯದಲ್ಲಿ, ಸಮಾಜ ಸುಧಾರಣೆಯಲ್ಲಿ, ಶಿಕ್ಷಣ ಹಾಗೂ ಕಲೆಯಲ್ಲಿ ಪಶ್ಚಿಮ ಬಂಗಾಳ ದೇಶವನ್ನು ಮುನ್ನಡೆಸಿದೆ.

ಪಶ್ಚಿಮ ಬಂಗಾಳ ಬಿಜೆಪಿ ಚುನಾವಣಾ ಪ್ರಣಾಳಿಕೆ; ಸೋನಾರ್ ಬಾಂಗ್ಲಾ ಕನಸು ಪುನರುಚ್ಚರಿಸಿದ ಅಮಿತ್ ಶಾ
ಪಶ್ಚಿಮ ಬಂಗಾಳ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಅಮಿತ್ ಶಾ
Follow us on

ಕೋಲ್ಕತ್ತಾ: ಶೀಘ್ರದಲ್ಲೇ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಇಂದು (ಮಾರ್ಚ್ 21) ಬಿಡುಗಡೆಗೊಳಿಸಿದೆ. ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದರು. ಪಶ್ಚಿಮ ಬಂಗಾಳವನ್ನು ಸೋನಾರ್ ಬಾಂಗ್ಲಾ (ಸುವರ್ಣ ಬಾಂಗ್ಲಾ) ಆಗಿ ಮಾಡುವುದು ಪ್ರಣಾಳಿಕೆಯ ಮೂಲ ಉದ್ದೇಶವಾಗಿದೆ. ಶತಕಗಳ ಕಾಲ ಪಶ್ಚಿಮ ಬಂಗಾಳ ದೇಶವನ್ನು ಬಹು ವಿಧದಲ್ಲಿ ಆಳಿದೆ. ಧಾರ್ಮಿಕ ಕ್ಷೇತ್ರದಲ್ಲಿ, ವಿಜ್ಞಾನ ವಿಭಾಗದಲ್ಲಿ, ರಾಜಕೀಯದಲ್ಲಿ, ಸಮಾಜ ಸುಧಾರಣೆಯಲ್ಲಿ, ಶಿಕ್ಷಣ ಹಾಗೂ ಕಲೆಯಲ್ಲಿ ಪಶ್ಚಿಮ ಬಂಗಾಳ ದೇಶವನ್ನು ಮುನ್ನಡೆಸಿದೆ. ಹಿಂದೆ ಬಂಗಾಳ ಎಲ್ಲದರಲ್ಲೂ ಮುಂದಿತ್ತು ಎಂದು ಅಮಿತ್ ಶಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಬೆಂಗಾಳಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿ ಮಾಡಲು ಕೇಂದ್ರ ಸರ್ಕಾರದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರಮಿಸುತ್ತೇವೆ. ಕಲೆ, ಸಾಹಿತ್ಯ ಹಾಗೂ ಇತರ ವಲಯಗಳನ್ನು ಪ್ರೋತ್ಸಾಹಿಸುವ ₹ 11,000 ಕೋಟಿ ಮೊತ್ತದ ಸೋನಾರ್ ಬಾಂಗ್ಲಾವನ್ನು ನಾವು ರಚಿಸುತ್ತೇವೆ ಎಂದು ಅಮಿತ್ ಶಾ ಸೋನಾರ್ ಬಾಂಗ್ಲಾ ಕನಸನ್ನು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ರೈತರನ್ನು ತಲುಪದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ₹ 18,000ವನ್ನು 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತೇವೆ. ಯೋಜನೆಯ ಹಣವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈತರಿಗೆ ತಲುಪಿಸಿರಲಿಲ್ಲ. ಅದನ್ನು ನಾವು ನೀಡುತ್ತೇವೆ ಎಂದು ಪ್ರಣಾಳಿಕೆ ಬಿಡುಗಡೆಗೊಳಿಸಿ ಅಮಿತ್ ಶಾ ತಿಳಿಸಿದರು.

ರಾಜ್ಯ ಸರ್ಕಾರದ ಕೆಲಸಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುತ್ತೇವೆ. ಕೆಜಿ ಕ್ಲಾಸ್​ನಿಂದ ಪಿಜಿವರೆಗೆ (ಸ್ನಾತಕೋತ್ತರ ಪದವಿ ತನಕ) ಮಹಿಳೆಯರಿಗೆ ಉಚಿತ ಶಿಕ್ಷಣ ನೀಡಲು ನಾವು ಮನಮಾಡಿದ್ದೇವೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ನೌಕರಿಗಳಲ್ಲಿ ಭ್ರಷ್ಟಾಚಾರದ ಮೇಲೆ ನಿಗಾ ಇಡಲು ಎಲ್ಲಾ ಕೆಲಸಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗುತ್ತದೆ. ಮತ್ತು ಕಳೆದ 70 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ನಾಗರಿಕತೆ ನೀಡುತ್ತೇವೆ. ಪ್ರತೀ ನಿರಾಶ್ರಿತ ಕುಟುಂಬವು ಮುಂದಿನ ಐದು ವರ್ಷಗಳ ವರೆಗೆ ವರ್ಷಕ್ಕೆ ₹ 10,000 ಪಡೆಯುವ ಸೌಲಭ್ಯ ನೀಡುತ್ತೇವೆ. ಮೂರು ಹೊಸ AIIMS ಆಸ್ಪತ್ರೆಗಳನ್ನು ಉತ್ತರ ಬಂಗಾಳ, ಜಂಗಲ್​ಮಹಲ್ ಮತ್ತು ಸುಂದರ್​ಬನ್​ನಲ್ಲಿ ನಿರ್ಮಿಸುತ್ತೇವೆ. ಇದರಿಂದ ಸ್ಥಳೀಯ ಜನರು ಚಿಕಿತ್ಸಾ ಸೌಲಭ್ಯಗಳಿಗಾಗಿ ಕೋಲ್ಕತ್ತಾ ವರೆಗೆ ಪ್ರಯಾಣಿಸುವುದು ತಪ್ಪುತ್ತದೆ ಎಂದೂ ಅವರು ವಿವರಿಸಿದರು.

ರಾಜಕಾರಣದ ಹತ್ಯೆ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನಿಯೋಜಿಸಿ, ಕಠಿಣ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯ ಹಿಂಸಾಚಾರಕ್ಕೆ ತುತ್ತಾದವರಿಗೆ ₹ 25 ಲಕ್ಷದ ಪುನರ್ವಸತಿ ಪ್ಯಾಕೇಜ್ ನೀಡುತ್ತೇವೆ. ಶಸ್ತ್ರಾಸ್ತ ದರೋಡೆ, ಮಾದಕ ದ್ರವ್ಯ ವ್ಯಾಪಾರ, ಭೂಕಬಳಿಸುವಿಕೆ, ನಕಲಿ ಹಣ ಚಲಾವಣೆ ಹಾಗೂ ಪಶು ಕಳ್ಳಸಾಗಾಣಿಕೆ ವಿರುದ್ಧ ಪ್ರತ್ಯೇಕ ಟಾಸ್ಕ್ ಫೋರ್ಸ್​ಗಳನ್ನು ರಚಿಸುವುದಾಗಿ ಹೇಳಿದರು.

ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲ ಹಂತದ ಮತದಾನ ಮಾರ್ಚ್ 27ರಂದು ಆರಂಭವಾಗಲಿದೆ. ಇಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ಚುನಾವಣೆ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಟಿವಿ9 ಬಾಂಗ್ಲಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗಾಗಿ ವಿವಿಧ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಕೆಲವು  ಪ್ರಶ್ನೆಗಳನ್ನು ಕೇಳಲಾಗಿದೆ.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಮೊದಲ ಆಯ್ಕೆ ಯಾರು ಎಂದು ಜನರಲ್ಲಿ ಕೇಳಿದಾಗ ಯಾವುದೇ ಪಕ್ಷಕ್ಕೆ ಸೇರದ ಜನರ ಪೈಕಿ ಶೇ.39.7 ಮಂದಿ ಮಮತಾ ಬ್ಯಾನರ್ಜಿ ಎಂದು ಹೇಳಿದ್ದಾರೆ. ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದವರು ಶೇ.19.2 ಮಂದಿ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಯಾವ ಪಕ್ಷ ಅಭಿವೃದ್ಧಿ ತರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದವರಲ್ಲಿ ಶೇ.40.7 ಮಂದಿ ಟಿಎಂಸಿ ಎಂದು ಹೇಳಿದ್ದಾರೆ. ಬಿಜೆಪಿ ಬಗ್ಗೆ ನಿರೀಕ್ಷೆ ಇರಿಸಿಕೊಂಡವರು ಶೇ.38.3. ರಾಜ್ಯದ ಒಟ್ಟಾರೆ ಅಭಿಮತವನ್ನು ನೋಡುವುದಾದರೆ ಟಿಎಂಸಿ ಪರ ಶೇ.51.1 ಮತ್ತು ಬಿಜೆಪಿ ಪರ ಶೇ.38.6 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Assam Assembly Elections 2021: ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಕಾಂಗ್ರೆಸ್; ಸಿಎಎ ಕಿತ್ತೊಗೆಯುತ್ತೇವೆ ಎಂದು ಭರವಸೆ

ಸಂತೋಷ ಸಚಿವಾಲಯ, ಉದ್ಯಮಗಳಿಗೆ ಪ್ರೋತ್ಸಾಹ; ಕೇರಳ ಯುಡಿಎಫ್ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ

Published On - 6:39 pm, Sun, 21 March 21