Assam Assembly Elections 2021: ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಕಾಂಗ್ರೆಸ್; ಸಿಎಎ ಕಿತ್ತೊಗೆಯುತ್ತೇವೆ ಎಂದು ಭರವಸೆ
ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಬಹಿಷ್ಕರಿಸುವುದಾಗಿ ಹೇಳಿರುವ ಕಾಂಗ್ರೆಸ್, 5 ಲಕ್ಷ ಸರ್ಕಾರಿ ಉದ್ಯೋಗ ಮತ್ತು ತಿಂಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದೆ.
ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಇಂದು (ಮಾರ್ಚ್ 20) ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಅಸ್ಸಾಂ ಜನರ ಆಕಾಂಕ್ಷೆ ಈ ಪ್ರಣಾಳಿಕೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ರಾಹುಲ್ ಗಾಂಧಿ ಬಳಿಕ ಭಾರತೀಯ ಜನತಾ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನ ಅಸ್ಮಿತೆಯ ಮೇಲೆ ಕೇಸರಿ ಪಾಳಯ ದಾಳಿ ಮಾಡುತ್ತಿದೆ. ಆರ್ಎಸ್ಎಸ್ ಹಾಗೂ ಬಿಜೆಪಿ ದೇಶದ ವೈವಿದ್ಯಮಯ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿರುವುದು ನಮಗೆ ತಿಳಿದಿದೆ. ನಮ್ಮ ಭಾಷೆ, ಇತಿಹಾಸ, ಯೋಚನಾ ಕ್ರಮ, ಜೀವನ ಕ್ರಮ ಎಲ್ಲದರ ಮೇಲೂ ಬಿಜೆಪಿ ಸವಾರಿ ಮಾಡಿದೆ. ಇದರ ವಿರುದ್ಧ ಕಾಂಗ್ರೆಸ್ ನಿಲ್ಲುತ್ತದೆ. ಅಸ್ಸಾಂನ ಅಸ್ಮಿತೆಯನ್ನು ಉಳಿಸುವಲ್ಲಿ ಈ ಪ್ರಣಾಳಿಕೆ ಭರವಸೆ ನೀಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಬಹಿಷ್ಕರಿಸುವುದಾಗಿ ಹೇಳಿರುವ ಕಾಂಗ್ರೆಸ್, 5 ಲಕ್ಷ ಸರ್ಕಾರಿ ಉದ್ಯೋಗ ಮತ್ತು ತಿಂಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದೆ. ಚಹಾ ಕೆಲಸಗಾರರಿಗೆ ಕನಿಷ್ಠ ಕೂಲಿ ರೂ. 365 ನೀಡುವುದಾಗಿಯೂ ಪ್ರಣಾಳಿಕೆ ತಿಳಿಸಿದೆ.
ಅಸ್ಸಾಂನಲ್ಲಿ 126 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಚುನಾವಣಾ ತೀರ್ಪು ಪ್ರಕಟವಾಗಲಿದೆ. ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಅಸ್ಸಾಂನಲ್ಲಿ ಪರಸ್ಪರ ಟೀಕಾಪ್ರಹಾರ ಮಾಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ ಎರಡು ಮೂರು ಶ್ರೀಮಂತ ಉದ್ಯಮಿಗಳಿಗಾಗಿ ಕೆಲಸ ಮಾಡುತ್ತಾರೆ. ಸಾಮಾನ್ಯ ಜನರಿಗಾಗಿ ಅವರು ಕೆಲಸ ಮಾಡುವುದಿಲ್ಲ ಎಂದು ರಾಹುಲ್ ಗಾಂಧಿ ಇಂದು ಅಸ್ಸಾಂ ಜೊರ್ಹಾಟ್ ಜಿಲ್ಲೆಯ ಮರಿಯಾನಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ನ ಬೆಲೆ ರೂ. 400 ಆಗಿತ್ತು. ಎನ್ಡಿಎ ಆಡಳಿತದಲ್ಲಿ ಈಗ ಗ್ಯಾಸ್ ಬೆಲೆ 900 ರೂ. ಆಗಿದೆ. ಇದರಿಂದ ಯಾರಿಗೆ ಲಾಭ? ಬಡವರಿಗಲ್ಲ. 2-3 ಉದ್ಯಮಿಗಳಿಗಷ್ಟೇ ಲಾಭ ಎಂದು ಕಾಂಗ್ರೆಸ್ ಬೆಲೆ ಏರಿಕೆ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಸಂತೋಷ ಸಚಿವಾಲಯ, ಉದ್ಯಮಗಳಿಗೆ ಪ್ರೋತ್ಸಾಹ; ಕೇರಳ ಯುಡಿಎಫ್ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ
Published On - 8:38 pm, Sat, 20 March 21