ಇತಿಹಾಸ ಸೃಷ್ಟಿಸಿದ ಗುಜರಾತ್ನ ವಸ್ತುಸಂಗ್ರಹಾಲಯ; ಅನಂತ್ ಅನಾದಿ ವಡ್ನಗರ ಮ್ಯೂಸಿಯಂಗೆ ವಿಶ್ವದ ಪ್ರತಿಷ್ಠಿತ ರೆಡ್ ಡಾಟ್ ಪ್ರಶಸ್ತಿ
ಗುಜರಾತ್ನ ಐತಿಹಾಸಿಕ ನಗರವಾದ ವಡ್ನಗರದಲ್ಲಿರುವ ಅನಂತ್ ಅನಾದಿ ವಡ್ನಗರ ಪುರಾತತ್ವ ವಸ್ತುಸಂಗ್ರಹಾಲಯವು ಜರ್ಮನಿಯ ಬರ್ಲಿನ್ನಲ್ಲಿ ಪ್ರತಿಷ್ಠಿತ ರೆಡ್ ಡಾಟ್: ಬೆಸ್ಟ್ ಆಫ್ ದಿ ಬೆಸ್ಟ್ ಪ್ರಶಸ್ತಿಗೆ ಭಾಜನವಾಗಿದೆ. ಈ ಸಾಧನೆಯೊಂದಿಗೆ, ವಡ್ನಗರದಲ್ಲಿರುವ ವಸ್ತುಸಂಗ್ರಹಾಲಯವು ಈ ಪ್ರತಿಷ್ಠಿತ ಗೌರವವನ್ನು ಪಡೆದ ಭಾರತದ ಮೊದಲ ಮತ್ತು ಏಕೈಕ ವಸ್ತುಸಂಗ್ರಹಾಲಯ ಎನಿಸಿಕೊಂಡಿದೆ. ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಈ ಸಾಧನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ನಮ್ಮ ನಾಗರಿಕತೆಯ ಪರಂಪರೆ ಈಗ ಜಾಗತಿಕ ವಿನ್ಯಾಸ ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ ಎಂದು ಅವರು ಬಣ್ಣಿಸಿದ್ದಾರೆ.

ವಡ್ನಗರ, ನವೆಂಬರ್ 16: ಭಾರತದ ಶ್ರೀಮಂತ ನಾಗರಿಕತೆಯ ಪರಂಪರೆ ಮತ್ತು ಜಾಗತಿಕ ಮಟ್ಟದ ವಿನ್ಯಾಸ ಶ್ರೇಷ್ಠತೆಯ ಸಂಗಮವಾಗಿರುವ ಗುಜರಾತ್ನ ‘ಅನಂತ್ ಅನಾದಿ ವಡ್ನಗರ ಪುರಾತತ್ವ ಅನುಭವ ವಸ್ತುಸಂಗ್ರಹಾಲಯ’ ಜರ್ಮನಿಯ ಬರ್ಲಿನ್ನಲ್ಲಿ ಪ್ರತಿಷ್ಠಿತ ‘ರೆಡ್ ಡಾಟ್: ಬೆಸ್ಟ್ ಆಫ್ ದಿ ಬೆಸ್ಟ್ 2026’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಗೌರವಕ್ಕೆ ಪಾತ್ರವಾದ ಭಾರತದ ಮೊದಲ ಮತ್ತು ಏಕೈಕ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ವಡ್ನಗರ ಪಾತ್ರವಾಗಿದ್ದು, ಗುಜರಾತ್ನ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ವಿನ್ಯಾಸ ಭೂಪಟದಲ್ಲಿ ಅಜರಾಮರಗೊಳಿಸಿದೆ.
ಜರ್ಮನಿಯ ಬರ್ಲಿನ್ನಲ್ಲಿ ನಡೆದ ಅಂತರರಾಷ್ಟ್ರೀಯ ವಿನ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಡ್ನಗರದ ಈ ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ವಿನ್ಯಾಸ ಮತ್ತು ಸಂವಹನ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಷ್ಠತೆಯನ್ನು ಗುರುತಿಸಿ ನೀಡಲಾಗುವ ‘ರೆಡ್ ಡಾಟ್: ಬೆಸ್ಟ್ ಆಫ್ ದಿ ಬೆಸ್ಟ್’ ಪ್ರಶಸ್ತಿಯನ್ನು ಪಡೆದ ದೇಶದ ಮೊಟ್ಟಮೊದಲ ಮ್ಯೂಸಿಯಂ ಇದಾಗಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
“ನಮ್ಮ ನಾಗರಿಕತೆಯ ನಿರಂತರ ಪರಂಪರೆಯಿಂದ ಜಾಗತಿಕ ವಿನ್ಯಾಸ ಶ್ರೇಷ್ಠತೆಯವರೆಗೆ, ವಡ್ನಗರ ಇತಿಹಾಸ ನಿರ್ಮಿಸುತ್ತಿದೆ! ಅನಂತ ಅನಾದಿ ವಡ್ನಗರ ಪುರಾತತ್ವ ಅನುಭವ ವಸ್ತುಸಂಗ್ರಹಾಲಯವು ಜರ್ಮನಿಯ ಬರ್ಲಿನ್ನಲ್ಲಿ 2026ರ ಪ್ರತಿಷ್ಠಿತ ರೆಡ್ ಡಾಟ್: ಬೆಸ್ಟ್ ಆಫ್ ದಿ ಬೆಸ್ಟ್ ಪ್ರಶಸ್ತಿಯನ್ನು ಗೆದ್ದಿದೆ” ಎಂದು ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
From the timeless legacy of our civilisation to global design excellence, Vadnagar is making history!
Anant Anadi Vadnagar – Archaeological Experiential Museum has earned the prestigious Red Dot: Best of the Best Award 2026 in Berlin, Germany.
Making India proud, Vadnagar becomes the country’s first and only museum to receive this distinguished honour, placing Gujarat’s heritage on the global design map.
From our glorious past to global recognition, Gujarat continues to create history!
— Harsh Sanghavi (@sanghaviharsh) November 16, 2026
ವಡ್ನಗರ ವಸ್ತುಸಂಗ್ರಹಾಲಯದ ವಿಶೇಷತೆ ಏನು?:
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮಸ್ಥಳವೂ ಆಗಿರುವ ವಡ್ನಗರವು ಸುಮಾರು 2,500 ವರ್ಷಗಳಿಗೂ ಅಧಿಕ ಕಾಲ ನಿರಂತರ ಜನವಸತಿಯ ಇತಿಹಾಸವನ್ನು ಹೊಂದಿದೆ. ಇಲ್ಲಿನ ಉತ್ಖನನದ ವೇಳೆ ಪತ್ತೆಯಾದ ಪ್ರಾಚೀನ ಅವಶೇಷಗಳು, ಬೌದ್ಧ ಮಠಗಳು, ನಾಣ್ಯಗಳು, ಕಲಾಕೃತಿಗಳು ಮತ್ತು ವಿವಿಧ ಕಾಲಘಟ್ಟಗಳ ಜನಜೀವನದ ಕುರುಹುಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ವಿಶಿಷ್ಟ ವಿನ್ಯಾಸದ ಮೂಲಕ ಸಂದರ್ಶಕರಿಗೆ ನೇರ ಅನುಭವ ನೀಡುವ ರೀತಿಯಲ್ಲಿ ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.
ಅನಂತ್ ಅನಾದಿ ವಡ್ನಗರವು ಭಾರತದ ಮೊದಲ ಪ್ರಾಯೋಗಿಕ ಪುರಾತತ್ವ ವಸ್ತು ಸಂಗ್ರಹಾಲಯವಾಗಿದೆ. ಗುಜರಾತ್ನ ವಡ್ನಗರದಲ್ಲಿರುವ ನಿಜವಾದ ಪುರಾತತ್ವ ಉತ್ಖನನ ಸ್ಥಳದಲ್ಲಿ ಅಭಿವೃದ್ಧಿಪಡಿಸಲಾದ ಈ ವಸ್ತು ಸಂಗ್ರಹಾಲಯವು ನಗರದ 2,500 ವರ್ಷಗಳಿಗೂ ಹೆಚ್ಚು ಹಳೆಯ ಇತಿಹಾಸ ಮತ್ತು ಅದರ ನಿರಂತರ ಮಾನವ ವಾಸಸ್ಥಳದ ಕತೆಯನ್ನು ಹೊಂದಿದೆ.
ಇದನ್ನೂ ಓದಿ: ಗುಜರಾತ್ನ ಬನಸ್ಕಾಂಠದಲ್ಲಿ ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಸರಿಸುಮಾರು 12,500 ಚದರ ಮೀಟರ್ಗಳಷ್ಟು ವಿಸ್ತೀರ್ಣದಲ್ಲಿರುವ ಈ ವಸ್ತುಸಂಗ್ರಹಾಲಯವು ಜನವರಿ 2025ರಲ್ಲಿ ಸಾರ್ವಜನಿಕರಿಗೆ ತೆರೆಯಲ್ಪಟ್ಟಿತು. ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದರು. ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನದೊಂದಿಗೆ ಆಧುನಿಕ ಡಿಜಿಟಲ್ ತಂತ್ರಜ್ಞಾನ ಮತ್ತು ಸಂವಾದಾತ್ಮಕ ಕತೆ ಹೇಳುವಿಕೆಯನ್ನು ಇಲ್ಲಿ ಬಳಸಲಾಗುತ್ತದೆ. 9 ವಿಷಯಾಧಾರಿತ ಗ್ಯಾಲರಿಗಳ ಮೂಲಕ 2500 ವರ್ಷಗಳಷ್ಟು ಹಳೆಯದಾದ ನಾಗರಿಕತೆಯನ್ನು ನೋಡಬಹುದು. ಈ ವಸ್ತುಸಂಗ್ರಹಾಲಯವು ಪುರಾತತ್ತ್ವ ಶಾಸ್ತ್ರದ ಉತ್ಖನನಗಳು, ಐತಿಹಾಸಿಕ ವಸ್ತುಗಳು ಮತ್ತು ಡಿಜಿಟಲ್ ಪ್ರಸ್ತುತಿಗಳ ಮೂಲಕ ವಡ್ನಗರ ನಾಗರಿಕತೆಯ ವಿವಿಧ ಹಂತಗಳ ಒಳನೋಟವನ್ನು ನೀಡುತ್ತದೆ.
ಈ ವಸ್ತುಸಂಗ್ರಹಾಲಯದ ಅತ್ಯಂತ ಮಹತ್ವದ ವೈಶಿಷ್ಟ್ಯವೆಂದರೆ ಅದರ ನಿಜವಾದ ಉತ್ಖನನ ಸ್ಥಳ. ನೆಲದ ಕೆಳಗೆ ಸುಮಾರು 16ರಿಂದ 18 ಮೀಟರ್ ಆಳದಲ್ಲಿ ಕಂಡುಬರುವ ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ ಮತ್ತು ಪ್ರದರ್ಶಿಸಲಾಗಿದೆ. ಇದು ಸಾವಿರಾರು ವರ್ಷಗಳಷ್ಟು ಹಳೆಯದಾದ ನಗರದ ಅಭಿವೃದ್ಧಿ ಮತ್ತು ಜೀವನಶೈಲಿಯನ್ನು ನೋಡಲು ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
