ಚಿತ್ತೂರು, ಅಕ್ಟೋಬರ್: ಪತ್ನಿಯೊಂದಿಗೆ ಜಗಳವಾಡಿದ್ದ ವ್ಯಕ್ತಿಯೊಬ್ಬರು ಕಚ್ಚಾ ಬಾಂಬ್ (Countrymade Bomb) ಕಚ್ಚಿದ ಪರಿಣಾಮ ಅದು ಬಾಯಿಯಲ್ಲಿ ಸ್ಫೋಟಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ (Chittoor district) ನಡೆದಿದೆ. ಬಂಗಾರುಪಾಳ್ಯಂ (Bangarupalyam) ಮಂಡಲ ವ್ಯಾಪ್ತಿಯ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ವಿಲಕ್ಷಣ ಘಟನೆ ನಡೆದಿದೆ. ಹತ್ಯೆಗೀಡಾದವರನ್ನು ಎಂ ಚಿರಂಜೀವಿ (35 ವರ್ಷ) ಎಂದು ಗುರುತಿಸಲಾಗಿದ್ದು, ಇವರು ಗದ್ದಂವಾರಿಪಲ್ಲಿ ನಿವಾಸಿಯಾಗಿದ್ದಾರೆ. ಬಂಗಾರುಪಾಳ್ಯಂ ಸಿಐ ನಾಗರಾಜು ರಾವ್ ಪ್ರಕಾರ, ಚಿರಂಜೀವಿ ಅವರು ತಮ್ಮ ಜೀವನದಲ್ಲಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದರು. ಇತ್ತೀಚೆಗಷ್ಟೇ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಆತ, ಬಳಿಕ ಮನೆ ಬಿಟ್ಟು ಹೋಗಿದ್ದರು. ನಂತರ ಖಿನ್ನರಾಗಿದ್ದ ಚಿರಂಜೀವಿ ಮದ್ಯಪಾನದ ದಾಸರಾಗಿದ್ದರು.
ಆದಾಗ್ಯೂ, ಘಟನೆಗೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಮದ್ಯದ ಅಮಲೇರಿದ ಸ್ಥಿತಿಯಲ್ಲಿ ಚಿರಂಜೀವಿ ಕಚ್ಚಾ ಬಾಂಬ್ ಕಚ್ಚಿದ್ದಾರೆ. ಅದು ಸ್ಫೋಟಗೊಂಡು ಮುಖಕ್ಕೆ ತೀವ್ರ ಗಾಯವಾಗಿತ್ತು.
ನೆರೆಹೊರೆಯವರು ಮತ್ತು ಸ್ಥಳೀಯ ಪೊಲೀಸರು ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರೂ, ಬಂಗಾರುಪಾಳ್ಯಂನ ಸರ್ಕಾರಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಚಿರಂಜೀವಿ ಸಾವನ್ನಪ್ಪಿದ್ದರು. ಬಂಗಾರುಪಾಳ್ಯಂ ಪೊಲೀಸರು ಪ್ರಕರಣ ತನಿಖೆ ಆರಂಭಿಸಿದ್ದು, ಮೃತರ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದಾರೆ. ಚಿರಂಜೀವಿಗೆ ಹೇಗೆ ಕಚ್ಚಾ ಬಾಂಬ್ ದೊರೆಯಿತು ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಅತ್ತಿಗೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಿದ್ದಾನೆಂದು ಅಣ್ಣನನ್ನೇ ಕೊಂದು ಪರಾರಿಯಾದ!
ಈ ವರ್ಷದ ಆರಂಭದಲ್ಲಿ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮಧುಪುರ್ ಗ್ರಾಮದಲ್ಲಿ ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಅದು ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ