ತಿರುಪತಿ: ಆಂಧ್ರಪ್ರದೇಶದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಭಾರೀ ಭೂಕುಸಿತದಿಂದ ತಿರುಮಲ ಘಾಟ್ ರಸ್ತೆ ಮತ್ತೊಮ್ಮೆ ಬಂದ್ ಆಗಿದೆ. ಇದರಿಂದ ವಾಹನಗಳು ಮಾರ್ಗಮಧ್ಯೆ ಸಿಲುಕಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಿನ್ನೆ ರಾತ್ರಿ ತಿರುಮಲ ಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ವಾಹನಗಳಿಗೆ ತಾತ್ಕಾಲಿಕ ಅಡಚಣೆ ಉಂಟಾಗಿತ್ತು. ಇಂದು ದುರಸ್ತಿಗಾಗಿ ರಸ್ತೆಯನ್ನು ಮುಚ್ಚಲಾಗಿತ್ತು. ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುವ ಅನೇಕ ಭಕ್ತರ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿರುವುದರಿಂದ, ರಸ್ತೆಯನ್ನು ತೆರವುಗೊಳಿಸಲು ಟಿಟಿಡಿ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ವಿಜಿಲೆನ್ಸ್, ಎಂಜಿನಿಯರಿಂಗ್ ಮತ್ತು ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯಿಂದ ಬಂಡೆಗಳನ್ನು ತೆಗೆಯುವ ಮೇಲ್ವಿಚಾರಣೆ ನಡೆಸಿದರು.
ಅಲಿಪಿರಿ ಸಮೀಪದ ಎರಡನೇ ಘಾಟ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಹಲವು ವಾಹನಗಳು ಜಖಂಗೊಂಡಿವೆ. ಬೆಟ್ಟಗಳಿಂದ ಘಾಟ್ ರಸ್ತೆಗೆ ಬಂಡೆಗಳು ಬಿದ್ದಿದ್ದು, ರಸ್ತೆ ಹಲವು ಕಡೆ ಹಾಳಾಗಿದೆ. ನವೆಂಬರ್ 18ರಂದು ತಿರುಮಲದಲ್ಲಿ ಸುರಿದ ವಿಪರೀತ ಮಳೆಯಿಂದ ಉಂಟಾದ ಅವಾಂತರಗಳೇ ಇನ್ನೂ ಸರಿಯಾಗಿಲ್ಲ. ಅದರ ಪರಿಣಾಮವಾಗಿ ಘಾಟ್ ರಸ್ತೆಗಳಲ್ಲಿ ಅನೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಮಳೆಯ ಮುನ್ಸೂಚನೆಯಿಂದಾಗಿ ಎರಡು ದಿನಗಳ ಕಾಲ ಘಾಟ್ ರಸ್ತೆಗಳನ್ನು ಮುಚ್ಚುವುದಾಗಿ ಟಿಟಿಡಿ ಈಗಾಗಲೇ ಘೋಷಿಸಿತ್ತು. ದುರಸ್ತಿ ಕಾರ್ಯದ ನಂತರ ಕೆಲವು ದಿನಗಳ ನಂತರ ಘಾಟ್ ರಸ್ತೆಗಳನ್ನು ವಾಹನ ಸಂಚಾರಕ್ಕೆ ತೆರೆಯಲಾಯಿತು. ಮೊದಲ ಘಾಟ್ ರಸ್ತೆಯಲ್ಲಿ ಅಕ್ಕಗರ್ಲ ದೇವಸ್ಥಾನದ ಬಳಿ ತಡೆಗೋಡೆಗೆ ಹಾನಿಯಾಗಿದ್ದು, ನಾಲ್ಕು ಕಡೆ ಬಂಡೆಗಳು ರಸ್ತೆಗೆ ಬಿದ್ದಿವೆ ಎಂದು ಟಿಟಿಡಿ ತಿಳಿಸಿದೆ.
#Tirumala: Heavy #landslide on Second Ghat Road .. Road destroyed in two areas due to landslides.Diversion of vehicles into First Ghat Road over Link Road. ? #ttd #AndhraPradesh #tirumalahills pic.twitter.com/5E9Uudt5a1
— ur’sGirivsk (@girivsk) December 1, 2021
ಎರಡನೇ ಘಾಟಿ ರಸ್ತೆಯಲ್ಲಿ ಈ ಹಿಂದೆ 13 ಕಡೆ ಭೂಕುಸಿತ ಸಂಭವಿಸಿದ್ದು, ಐದು ಕಡೆ ತಡೆಗೋಡೆ ಹಾನಿಯಾಗಿದೆ. ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಯಿಂದ ಶೇಷಾಚಲಂ ಬೆಟ್ಟದಲ್ಲಿ ಕಪಿಲ ತೀರ್ಥಂ ಜಲಪಾತದ ಮೂಲಕ ಅಣೆಕಟ್ಟುಗಳು ಮತ್ತು ಚೆಕ್‌ಡ್ಯಾಮ್‌ಗಳು ತುಂಬಿ ಹರಿದಿದ್ದು, ತಿರುಪತಿ ನಗರದಲ್ಲಿಯೂ ಪ್ರವಾಹ ಉಂಟಾಗಿದ್ದು, ಸುಮಾರು 4 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಟಿಟಿಡಿ ಹೇಳಿತ್ತು. ಮಳೆಯಿಂದ ಕಪಿಲ ತೀರ್ಥಂ ದೇವಸ್ಥಾನದ ಆವರಣವೊಂದಕ್ಕೆ ಹಾನಿಯಾಗಿದ್ದು, ದುರಸ್ತಿಗೆ ಸುಮಾರು 70 ಲಕ್ಷ ರೂ. ಖರ್ಚಾಗಿದೆ. ನಿನ್ನೆ ತಡರಾತ್ರಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿದ್ದು, ಪ್ರಮುಖ ಸಂಪರ್ಕಕ್ಕೆ ಹಾನಿಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಒಂದು ತಿಂಗಳ ಅವಧಿಯಲ್ಲಿ ತಿರುಮಲ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು ಇದು ಎರಡನೇ ಬಾರಿ. ಭೂಕುಸಿತಕ್ಕೆ ಕಾರಣವಾದ ಭಾರೀ ಮಳೆಯ ನಂತರ, ನವೆಂಬರ್ 11ರಂದು ಘಾಟ್ ರಸ್ತೆಗಳನ್ನು ಮುಚ್ಚಲಾಗಿತ್ತು. ನವೆಂಬರ್ 20ರಂದು ಮತ್ತೆ ಘಾಟ್ ರಸ್ತೆಯನ್ನು ತೆರೆಯಲಾಗಿತ್ತು. ಇದೀಗ ಮತ್ತೆ ಭೂಕುಸಿತವಾಗಿದೆ.
ನಾಲ್ಕೈದು ಕಡೆ ಭೂಕುಸಿತದಿಂದ ಮೊದಲ ಘಾಟ್ ರಸ್ತೆಯಲ್ಲಿ ರಕ್ಷಣಾ ಗೋಡೆ ಹಾನಿಯಾಗಿದ್ದು, ಎರಡನೇ ಘಾಟ್ ರಸ್ತೆಯಲ್ಲಿ 13 ಕಡೆ ಭೂಕುಸಿತವಾಗಿದೆ. ಟಿಟಿಡಿ ಅಧ್ಯಕ್ಷರ ಪ್ರಕಾರ, ಟಿಟಿಡಿಗೆ ಸುಮಾರು 4 ಕೋಟಿ ರೂಪಾಯಿ ಹಾನಿಯಾಗಿದೆ. ತಿರುಮಲ ಮತ್ತು ತಿರುಪತಿಯಲ್ಲಿ ನವೆಂಬರ್ 17ರಿಂದ 19ರವರೆಗೆ 19 ಸೆಂ.ಮೀ ಮಳೆ ದಾಖಲಾಗಿದೆ. ಇದು 30 ವರ್ಷಗಳಲ್ಲಿಯೇ ಅತಿ ಹೆಚ್ಚು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Karnataka Rain: ಬೆಂಗಳೂರು, ಕರಾವಳಿ ಸೇರಿ ಹಲವೆಡೆ ಡಿ. 4ರವರೆಗೆ ವ್ಯಾಪಕ ಮಳೆ; ಗುಜರಾತ್ನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ
Tamil Nadu Rain: ತಮಿಳುನಾಡಿನಲ್ಲಿ ಮಳೆಯಿಂದ 106 ಜನ ಸಾವು; ಚೆನ್ನೈನಲ್ಲಿ ದಾಖಲೆಯ ಮಳೆ