ಆಂಧ್ರ ಪ್ರದೇಶ: ಮಾಂಸಾಹಾರಿಗಳಿಗೆ ಮೀನು (fish) ಅತ್ಯಂತ ಪ್ರಿಯವಾದ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಮೀನುಗಳಲ್ಲಿ ಸಾಕಷ್ಟು ಭಿನ್ನ, ವಿಭಿನ್ನ ಬಗೆಯ ಮತ್ತು ನಾನಾ ಬೆಲೆಯ ಅಷ್ಟೇ ಅಲ್ಲದೇ ನಾನಾ ರುಚಿಯ ಮೀನುಗಳಿವೆ. ಆದರೆ ನಾವು ಈಗ ಹೇಳಹೋರಟಿರುವ ಅಂತಿಂಥ ಮೀನಿನ ವಿಷಯವಲ್ಲ. ಇದು ಅತ್ಯಂತ ದುಬಾರಿ ಮತ್ತು ಬೃಹತ್ ಗಾತ್ರದ್ದು. ಸಮುದ್ರದಲ್ಲಿ ಬೇಟೆಗೆ ತೆರೆಳಿದ್ದ ಮೀನುಗಾರರ ಬಲೆಗೆ ಸುಮಾರು 1500 ಕೆಜಿ ತೂಕದ ಬೃಹತ್ ತೇಗದ ಮೀನು ಸಿಕ್ಕಿರುವಂತಹ ಘಟನೆ ಅನಕಾಪಲ್ಲಿ ಜಿಲ್ಲೆಯ ಎಸ್.ರಾಯವರಂ ಮಂಡಲದ ಬಂಗಾರಮ್ಮಪಾಲೆಂ ಸಮುದ್ರದಲ್ಲಿ ಕಂಡುಬಂದಿದೆ. ಕರೆ ಡುಬೆನ್ನವರ ತಂಡ ಬೇಟೆಗೆ ತೆರಳಿದ್ದು, ಸಮುದ್ರದಲ್ಲಿ ಬೇಟೆಗೆಂದು ಬೀಸಿದ ಬಲೆಯಲ್ಲಿ ಈ ಅಪರೂಪದ ಬೃಹತ್ ತೇಗದ ಮೀನು ಸೆರೆಸಿಕ್ಕಿದೆ.
ಇದು ಅಪರೂಪದ ಮೀನಾಗಿದ್ದು, ಇದನ್ನು ಔಷಧ ತಯಾರಿಕೆಯಲ್ಲಿ ಮಾತ್ರ ಬಳಸುತ್ತಾರೆ ಎನ್ನಲಾಗುತ್ತಿದೆ. ಈ ಬೃಹತ್ ಮೀನಿನ ಮೌಲ್ಯ ಸುಮಾರು ಮೂರು ಲಕ್ಷ ರೂಪಾಯಿ ಎಂದು ಮೀನುಗಾರರು ತಿಳಿಸಿದ್ದಾರೆ ಎಂದು ದ ಹನ್ಸ್ ಇಂಡಿಯಾ (www.thehansindia.com) ಸೈಟ್ ವರದಿ ಮಾಡಿದೆ.
ಇದನ್ನೂ ಓದಿ: ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿಯ ನಾಟು ನಾಟು ನೃತ್ಯಕ್ಕೆ ಮನಸೋತ ಜನ; ಪ್ರಧಾನಿ ಮೋದಿ ಮೆಚ್ಚುಗೆ
ಇನ್ನು ಈ ಬೃಹತ್ ಗಾತ್ರದ ತೇಗದ ಮೀನನ್ನು ಮೀನುಗಾರರು ಹೆಚ್ಚಿನ ಶ್ರಮವಹಿಸಿ ದಡಕ್ಕೆ ಸೆರೆಹಿಡಿಕೊಂಡು ಬಂದಿದ್ದಾರೆ. ಈ ಅಪರೂಪದ ಮೀನನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ ಇಂಥಹದೇ ಅಪರೂಪದ ತೇಗದ ಮೀನು ವಿಶಾಖಪಟ್ಟಣಂ ಜಿಲ್ಲೆಯ ಅಚ್ಚುತಪುರಂ ವಲಯದ ಪುಡಿಮಾಡಕದಲ್ಲಿ ಮೀನುಗಾರರು ಸೆರೆಹಿಡಿದಿದ್ದರು. ಮೈಲಪಲ್ಲಿ ರಾಮು ಎಂಬುವವರು ಸೇರಿದಂತೆ ನಾಲ್ವರು ಬೇಟೆಗೆ ತೆರಳಿದ್ದರು. ಸ್ವಲ್ಪ ದೂರದ ನಂತರ ಬಲೆಯನ್ನು ಬಿಸಿದ್ದಾರೆ. ಒಂದು ಸಾವಿರ ಕಿಲೋಗ್ರಾಂಗಳಷ್ಟು ತೂಕದ ಬೃಹತ್ ತೇಗದ ಮೀನನ್ನು ಅವರು ಹಿಡಿದಿದ್ದರು.
ಅದನ್ನು ದೋಣಿಗೆ ತುಂಬಿಸಲು ಸಾಕಷ್ಟು ಪ್ರಯತ್ನ ಮಾಡಿದರು ಸಾಧ್ಯವಾಗಿರಲಿಲ್ಲ ಎಂದು ಹೇಳಿಕೊಂಡಿದ್ದರು. ಕೊನೆಗೆ ಬೃಹತ್ ಮೀನನ್ನು ದೊಡ್ಡ ಹಗ್ಗದಿಂದ ಕಟ್ಟಿ ದೋಣಿಯ ಹಿಂಭಾಗಕ್ಕೆ ಕಟ್ಟಿ ಇತರೆ ಮೀನುಗಾರರ ಸಹಾಯದಿಂದ ದಡಕ್ಕೆ ತರಲಾಯಿತು. ಬಳಿಕ ಸುಮಾರು 40,000 ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:09 pm, Mon, 27 February 23