ದೆಹಲಿ: ಶಿವರಾತ್ರಿ ಕಳೆಯುತ್ತಿದ್ದಂತೆ ಭಕ್ತಾದಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ವಾರ್ಷಿಕ ಅಮರನಾಥ ಯಾತ್ರೆಯು ಜೂನ್ 28ರಿಂದ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಯಾತ್ರೆ ಕೈಗೊಂಡು, ದೇವರ ದರ್ಶನದಿಂದ ಪಾವನರಾಗಬೇಕು ಅನ್ನುವವರು ಏಪ್ರಿಲ್ 1ರ ಬಳಿಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಶ್ರೀ ಅಮರನಾಥ್ ಶ್ರೈನ್ ಬೋರ್ಡ್ನ 40ನೇ ಸಭೆಯಲ್ಲಿ (SASB) ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಾರಿಯ ಅಮರನಾಥ ಯಾತ್ರೆ ಕೊರೊನಾ ನಿಯಮಾವಳಿಗಳ ಅನುಸಾರ ನಡೆಯಲಿದೆ. 56 ದಿನಗಳ ಕಾಲ ನಡೆಯುವ ಯಾತ್ರೆ, ಈ ಬಾರಿ ಆಗಸ್ಟ್ 22 ರಕ್ಷಾಬಂಧನ ದಿನದಂದು ಸಮಾಪ್ತಿಯಾಗಲಿದೆ.
ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇವಾಲಯದಲ್ಲಿ ಸಂಪ್ರದಾಯದ ಪ್ರಕಾರ, 56 ದಿನದ ಯಾತ್ರೆ ನಡೆಯಲಿದೆ. ಈ ಪವಿತ್ರ ಯಾತ್ರೆಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು 446 ಕೇಂದ್ರಗಳು ಕೆಲಸ ಮಾಡಲಿವೆ. ಪಂಜಾಬ್ ನೇಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ 37 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಿಜಿಸ್ಟ್ರೇಷನ್ ಕೆಲಸ ನಿರ್ವಹಿಸಲಿವೆ.
ಮಾರ್ಚ್ 13ರಂದು ನಡೆದ ಸಭೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಆಡಳಿತ ದೇವಾಲಯದ ಪೂಜಾರಿಗಳ ಸಂಭಾವನೆಯನ್ನೂ ನಿಗಧಿ ಪಡಿಸಿದೆ. ದಿನ ಒಂದಕ್ಕೆ 1,500 ರೂಪಾಯಿ ಸಂಬಳ ನೀಡಲು ನಿರ್ಧರಿಸಿದೆ. ಇದೇ ಸಂಭಾವನೆ ಮುಂದಿನ ಮೂರು ವರ್ಷಗಳವರೆಗೆ ಇರಲಿದೆ. ಈ ಮೊದಲು ದೇವಾಲಯದ ಪೂಜಾರಿಗಳಿಗೆ 1,000 ರೂಪಾಯಿ ನೀಡಲಾಗುತ್ತಿತ್ತು.
ಕಳೆದ ವರ್ಷ ಕೊವಿಡ್-19 ಮಹಾಮಾರಿಯ ಕಾರಣದಿಂದ, ಅಮರನಾಥ ಯಾತ್ರೆ ಕೇವಲ ಸಾಧು-ಸಂತರಿಗೆ ಮಾತ್ರ ಸೀಮಿತವಾಗಿತ್ತು. 2019ರಲ್ಲಿ ಭಯೋತ್ಪಾದಕ ದಾಳಿ ಕಾರಣದಿಂದ ಅಮರನಾಥ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಆಗಸ್ಟ್ 2ರಂದು ಯಾತ್ರೆ ನಿಲ್ಲಿಸಲಾಗಿತ್ತು.
ಲಕ್ಷಾನುಲಕ್ಷ ಸಂಖ್ಯೆಯಲ್ಲಿ ಅಮರನಾಥ ಕ್ಷೇತ್ರಕ್ಕೆ ಭಕ್ತರು ಆಗಮಿಸುತ್ತಾರೆ. 2015ರಲ್ಲಿ ಅತಿ ಹೆಚ್ಚು ಸಂಖ್ಯೆಯ, 3.52 ಲಕ್ಷ ಯಾತ್ರಾರ್ಥಿಗಳು ದೇವರ ದರ್ಶನ ಪಡೆದಿದ್ದರು. 2016ರಲ್ಲಿ 3.20 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದರು. 2017ರಲ್ಲಿ 2.60 ಲಕ್ಷ ಹಾಗೂ 2018ರಲ್ಲಿ 2.85 ಲಕ್ಷ ಜನರು ಮತ್ತು 2019ರಲ್ಲಿ 3.42 ಲಕ್ಷ ಜನರು ಯಾತ್ರೆ ಕೈಗೊಂಡಿದ್ದರು.
ಇದನ್ನೂ ಓದಿ: ವಿದ್ವಾಂಸರ ವ್ಯಾಖ್ಯಾನವಿರುವ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಧಾರ್ಮಿಕ ಆರಾಧನಾ ಸ್ಥಳಗಳ ಪುನರುಜ್ಜೀವನದಲ್ಲಿ ಸಮಾನತೆ; ಕೇಂದ್ರ ಸರ್ಕಾರದ ನಿಲುವು ತಿಳಿಸಲು ಸುಪ್ರೀಂ ಸೂಚನೆ
Published On - 6:48 am, Sun, 14 March 21