ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ; ಕೇರಳದಲ್ಲಿ ಕಟ್ಟೆಚ್ಚರ

|

Updated on: Apr 22, 2023 | 1:09 PM

ಪ್ರಧಾನಿ ನರೇಂದ್ರ ಮೋದಿ ಅವರ ಕೇರಳ ಪ್ರವಾಸದ ಸಂದರ್ಭದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಬೆದರಿಕೆ ಸಂದೇಶವುಳ್ಳ ಪತ್ರ ದೊರೆತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ; ಕೇರಳದಲ್ಲಿ ಕಟ್ಟೆಚ್ಚರ
ಪ್ರಧಾನಿ ನರೇಂದ್ರ ಮೋದಿ
Image Credit source: PTI
Follow us on

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕೇರಳ (Kerala) ಪ್ರವಾಸದ ಸಂದರ್ಭದಲ್ಲಿ ಆತ್ಮಾಹುತಿ ಬಾಂಬ್ ದಾಳಿ (Suicide Bomb Attack Threat) ನಡೆಯುವ ಸಾಧ್ಯತೆ ಇದೆ ಎಂಬ ಬೆದರಿಕೆ ಸಂದೇಶವುಳ್ಳ ಪತ್ರ ದೊರೆತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೋದಿ ಅವರು ಏಪ್ರಿಲ್ 24ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಬಾಂಬ್ ದಾಳಿ ನಡೆಯಲಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿಯ ರಾಜ್ಯ ಕಚೇರಿಗೆ ಪತ್ರ ಬಂದಿದ್ದು, ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್​ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಪತ್ರದಲ್ಲಿ ವ್ಯಕ್ತಿಯೊಬ್ಬರ ಹೆಸರು ಮತ್ತು ವಿವರಗಳಿದ್ದವು. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ, ತನ್ನ ಹೆಸರಿನಲ್ಲಿ ಬೇರೆ ಯಾರೋ ಕೃತ್ಯ ಎಸಗಿದ್ದಾರೆ ಎಂದು ಆ ವ್ಯಕ್ತಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಕೇಂದ್ರದ ತನಿಖಾ ಸಂಸ್ಥೆಗಳು ರಾಜ್ಯ ಪೊಲೀಸರಿಂದ ಹೆಚ್ಚಿನ ಮಾಹಿತಿ ಕೋರಿವೆ.

ರಾಜ್ಯ ಪೊಲೀಸರಿಂದ ಭದ್ರತಾ ಲೋಪ; ಮುರಳೀಧರನ್

ಮೋದಿ ರಾಜ್ಯ ಭೇಟಿ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಎಡಿಜಿಪಿ ಅವರು ಸಿದ್ಧಪಡಿಸಿರುವ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ನಿಷೇಧಿತ ಪಿಎಫ್​ಐ ಸಂಘಟನೆ ಸೇರಿದಂತೆ ಇತರ ಸಂಘಟನೆಗಳ ಬೆದರಿಕೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ವರದಿಯಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ಎಂ ಮುರಳೀಧರನ್, ರಾಜ್ಯ ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Vande Bharat Express: ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಸರಗೋಡಿಗೂ ವಿಸ್ತರಣೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ಈ ಮಧ್ಯೆ, ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳೆಲ್ಲ ನಿಗದಿಯಂತೆಯೇ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್​ ತಿಳಿಸಿದ್ದಾರೆ.

ಏಪ್ರಿಲ್ 24ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿರುವ ಮೋದಿ, ‘ಯುವಂ’ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ನಂತರ ಕೊಚ್ಚಿಯಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಮರುದಿನ ತಿರುವನಂತಪುರಕ್ಕೆ ಭೇಟಿ ನೀಡಲಿರುವ ಅವರು, ರಾಜ್ಯಕ್ಕೆ ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲನ್ನು ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ