ತಿರುಪತಿ, ಸೆ.20: ತಿರುಪತಿ ಬೆಟ್ಟದಲ್ಲಿ ಚಿರತೆಗಳ(Leopard) ಕಾಟ ಹೆಚ್ಚಾಗಿದ್ದು ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಸದ್ಯ ತಿರುಪತಿ(Tirupati) ಬೆಟ್ಟದ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಬಳಿ ಚಿರತೆ ಸೆರೆಯಾಗಿದೆ. ತಿರುಪತಿ ಬೆಟ್ಟದ ಕಾಲ್ನಡಿಗೆ ಮಾರ್ಗದ 2850ನೇ ಮೆಟ್ಟಿಲು ಬಳಿ ಅರಣ್ಯ ಸಿಬ್ಬಂದಿ ಬೋನ್ ಇಟ್ಟಿದ್ದರು. ಸದ್ಯ ಚಿರತೆ ಬೋನ್ಗೆ ಬಿದ್ದಿದೆ. ಈವರೆಗೂ ಅರಣ್ಯ ಸಿಬ್ಬಂದಿ ಆರು ಚಿರತೆಗಳನ್ನು ಸೆರೆಹಿಡಿದಿದ್ದಾರೆ. ಒಂದು ಚಿರತೆ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟರೆ ಮತ್ತೊಂದು ಚಿರತೆ ಕಾಣಿಸಿಕೊಳ್ಳುತ್ತಿದೆ. ಈ ಹಿಂದೆ ಸಿಕ್ಕ ಜಾಗದಲ್ಲೇ 6ನೇ ಚಿರತೆಯನ್ನೂ ಅರಣ್ಯ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಪ್ರತಿ ದಿನ ಲಕ್ಷಾಂತರ ಮಂದಿ ಭೇಟಿ ನೀಡುವ ಪುಣ್ಯ ಕ್ಷೇತ್ರದಲ್ಲಿ ಚಿರತೆಗಳ ಕಾಟ ಹೆಚ್ಚುತ್ತಿದೆ.
ಚಿರತೆಗಳ ಕಾಟ ಹೆಚ್ಚಾದ ಹಿನ್ನೆಲೆ ಕೆಲ ದಿನಗಳ ಹಿಂದೆಯೇ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ -ಟಿಟಿಡಿ ಉನ್ನತ ಮಟ್ಟದ ಸಭೆ ನಡೆಸಿ ಬೆಟ್ಟದ ಮೇಲಿನ ಮೆಟ್ಟಿಲುಗಳು ಮತ್ತು ಘಟ್ಟ ಪ್ರದೇಶದ ಮಾರ್ಗಗಳಲ್ಲಿ ಭಕ್ತರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಅಲಿಪಿರಿಯಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರವೇ ಭಕ್ತರ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಮತ್ತು ಮಧ್ಯಾಹ್ನ 2 ರ ನಂತರ ಅನುಮತಿ ಇಲ್ಲ. ವಯಸ್ಕರರಿಗೆ ರಾತ್ರಿ 10 ಗಂಟೆಯವರೆಗೆ ಕಾಲ್ನಡಿಗೆಯಲ್ಲಿ ಅನುಮತಿ ನೀಡಲಾಗಿದೆ. ಘಟ್ಟ ಪ್ರದೇಶದಲ್ಲಿ ಸಂಜೆ ಆರು ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಸುರಕ್ಷತೆಗಾಗಿ ಪರಿಣಿತ ಅರಣ್ಯ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗುವುದು ಎಂದು ತಿಳಿಸಿತ್ತು.
ಇದನ್ನೂ ಓದಿ: ತಿರುಪತಿ ದೇವಸ್ಥಾನದ ಬಳಿ 6 ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆಯ ಸೆರೆ
ಆಗಸ್ಟ್ 11 ರಂದು 6 ವರ್ಷದ ಬಾಲಕಿ ಲಕ್ಷಿತಾಳನ್ನು ಚಿರತೆ ಕೊಂದು ಹಾಕಿತ್ತು. ಮತ್ತು ಜೂನ್‌ನಲ್ಲಿ ಚಿರತೆ ಮರಿಯಿಂದ 3 ವರ್ಷದ ಮತ್ತೋರ್ವ ಬಾಲಕ ಗಾಯಗೊಂಡಿದ್ದ. ಇದಾದ ಬಳಿಕ ಟಿಟಿಡಿ ಮತ್ತು ಅರಣ್ಯ ಇಲಾಖೆ ತಿರುಪತಿ ಸುತ್ತಮುತ್ತ ಹೆಚ್ಚಿನ ಗಮನವಹಿಸುತ್ತಿದೆ. 350 ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮೆರಾಗಳೊಂದಿಗೆ ಕಾಡು ಪ್ರಾಣಿಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಇಲ್ಲಿಯ ವರೆಗೆ 6 ಚಿರತೆಗಳನ್ನು ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ