ಕಮಲ್, ರಜನಿ ನಂತರ ತಮಿಳಿನ ಮತ್ತೋರ್ವ ಸ್ಟಾರ್ ನಟ ರಾಜಕೀಯಕ್ಕೆ ಎಂಟ್ರಿ?
ಈಗಾಗಲೇ ವಿಶಾಲ್ ತಮ್ಮ ಬೆಂಬಲಿಗರ ಜೊತೆ ಚರ್ಚೆ ಆರಂಭಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಇದು ನಿಜವೇ ಆಗಿದ್ದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸೋದು ಬಹುತೇಕ ಖಚಿತವಾಗಲಿದೆ.
ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆಗಳು ನಡೆಯುತ್ತಿವೆ. ಕಮಲ್ ಹಾಸನ್ ಈಗಾಗಲೇ ಪಕ್ಷ ಘೋಷಣೆ ಮಾಡಿದರೆ, ರಜನಿಕಾಂತ್ ಹೊಸ ಪಕ್ಷದ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮತ್ತೋರ್ವ ಸ್ಟಾರ್ ನಟ ರಾಜಕೀಯಕ್ಕೆ ಧುಮುಕುವ ಸೂಚನೆ ಸಿಕ್ಕಿದೆ.
ತಮಿಳಿನಿ ಖ್ಯಾತ ನಟ ವಿಶಾಲ್ ರಾಜಕೀಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎನ್ನುವ ಗುಲ್ಲು ಹರಿದಾಡಿದೆ. ಅವರು 2021ರಲ್ಲಿ ನಡೆಯುವ ವಿಧಾನಸಭೆಯಲ್ಲಿ ಸ್ಪರ್ಧೆ ಕೂಡ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಅದು 2018ರ ಸಮಯ. ತಮಿಳುನಾಡಿನಲ್ಲಿ ಉಪ ಚುನಾವಣೆ ನಡೆದಿತ್ತು. ಈ ವೇಳೆ ವಿಶಾಲ್ ಪ್ರತಿಷ್ಠಿತ ಆರ್ಕೆ ನಗರದಿಂದ ಸ್ಪರ್ಧೆಗೆ ಮುಂದಾಗಿದ್ದರು. ಆದರೆ, ಇವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಹೀಗಾಗಿ, ಅವರಿಗೆ ಸ್ಪರ್ಧೆ ಅಸಾಧ್ಯವಾಗಿತ್ತು. ಇದರಿಂದ ಪಾಠ ಕಲಿತಿರುವ ವಿಶಾಲ್ ಈ ಬಾರಿ ಹೆಚ್ಚು ಜಾಗರೂಕವಾಗಿ ಹೆಜ್ಜೆ ಹಾಕುತ್ತಿದ್ದಾರಂತೆ.
ಈಗಾಗಲೇ ವಿಶಾಲ್ ತಮ್ಮ ಬೆಂಬಲಿಗರ ಜೊತೆ ಚರ್ಚೆ ಆರಂಭಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಇದು ನಿಜವೇ ಆಗಿದ್ದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸೋದು ಬಹುತೇಕ ಖಚಿತವಾಗಲಿದೆ. ಅಂದಹಾಗೆ, ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ.
ಅಂದಹಾಗೆ, ವಿಶಾಲ್ ಆರ್ಕೆ ನಗರ ಕ್ಷೇತ್ರದಿಂದಲೇ ಕಣಕ್ಕೆ ಇಳಿದರೂ ಯಾವುದೇ ಅಚ್ಚರಿ ಇಲ್ಲ. ಏಕೆಂದರೆ, ಉಪಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸೋಕೆ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಪ್ರತಿಷ್ಠೆ ಉಳಿಸಿಕೊಳ್ಳುವ ಅಲೋಚನೆ ವಿಶಾಲ್ ಅವರದ್ದು.
ತಮಿಳುನಾಡಿನಲ್ಲಿ ಮೈತ್ರಿ?
ರಜನಿಕಾಂತ್ ಹಾಗೂ ಕಮಲ್ ಹಾಸನ್ ಪಕ್ಷಗಳು ಮೈತ್ರಿಯೊಂದಿಗೆ ಸ್ಪರ್ಧೆ ಮಾಡುವ ಸೂಚನೆ ಸಿಕ್ಕಿತ್ತು. ಇತ್ತೀಚೆಗೆ ಮಾತನಾಡಿದ್ದ ಕಮಲ್ ಹಾಸನ್, ನಮ್ಮಿಬ್ಬರ ಸಿದ್ಧಾಂತಗಳಲ್ಲಿ ಹೋಲಿಕೆಯಿದ್ದರೆ ಮತ್ತು ಅದರಿಂದ ಜನರಿಗೆ ಪ್ರಯೋಜನವಾಗುತ್ತದೆ ಎಂದಾದರೆ ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧರಿದ್ದೇವೆ. ಇಬ್ಬರ ಮೈತ್ರಿಗೆ ಒಂದು ದೂರವಾಣಿ ಕರೆ ಮಾಡುವುದು ಮಾತ್ರ ಬಾಕಿ ಉಳಿದಿದೆ ಎಂದಿದ್ದರು.
2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ಕಮಲ್ ಹಾಸನ್