ಎರಡು ವಾರದ ಹಿಂದೆಯೇ ಆ್ಯಪಲ್ ತಂತ್ರಾಂಶಗಳಲ್ಲಿ ಭದ್ರತಾ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದ್ದ ಸರ್ಕಾರ

|

Updated on: Nov 01, 2023 | 3:05 PM

Apple Alert Notification: ಹಳೆಯ ಆವೃತ್ತಿಯ ಆ್ಯಪಲ್ ತಂತ್ರಾಂಶಗಳಲ್ಲಿ ಹುಳುಕುಗಳು ಕಂಡುಬಂದಿವೆ. 17.1ಗೆ ಮುಂದಿನ ಐಒಸ್ ಮತ್ತು ಐಪ್ಯಾಡ್ ಒಎಸ್ ಆವೃತ್ತಿಗಳು, 14.1ಕ್ಕೆ ಮುಂಚಿನ ಮ್ಯಾಕ್​ಒಎಸ್ ಸೊನೊಮಾ ಆವೃತ್ತಿಗಳು, 13.6.1ಗೆ ಮುಂಚಿನ ವೆಂಟುರಾ ಆವೃತ್ತಿ, 12.7.1ಕ್ಕೆ ಮುಂಚಿನ ಮಾಂಟೆರೆ ಆವೃತ್ತಿಯ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪವನ್ನು ಸಿಇಆರ್​ಟಿ ತನ್ನ ಅಡ್ವೈಸರಿಯಲ್ಲಿ ತೋರಿಸಿತ್ತೆನ್ನಲಾಗಿದೆ.

ಎರಡು ವಾರದ ಹಿಂದೆಯೇ ಆ್ಯಪಲ್ ತಂತ್ರಾಂಶಗಳಲ್ಲಿ ಭದ್ರತಾ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದ್ದ ಸರ್ಕಾರ
ಆ್ಯಪಲ್
Follow us on

ನವದೆಹಲಿ, ನವೆಂಬರ್ 1: ಮಹುವಾ ಮೋಯಿತ್ರಾ, ರಾಹುಲ್ ಗಾಂಧಿ, ಪ್ರಿಯಾಂಕಾ ಚತುರ್ವೇದಿ ಮೊದಲಾದ ವಿಪಕ್ಷ ಮುಖಂಡರು ತಮಗೆ ಆ್ಯಪಲ್​ನಿಂದ ಥ್ರೆಟ್ ನೋಟಿಫಿಕೇಶನ್ (Threat Notification) ಬಂದಿರುವ ಬಗ್ಗೆ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡುವ ಮುನ್ನವೇ ಕೇಂದ್ರ ಸರ್ಕಾರ ಆ್ಯಪಲ್ ಉತ್ಪನ್ನಗಳಲ್ಲಿರುವ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿತ್ತು. ಅಕ್ಟೋಬರ್ 14ರಂದೇ ಕೇಂದ್ರದ ಕಂಪ್ಯೂಟರ್ ಎಮರ್ಜೆನ್ಸಿ ರಿಸರ್ಚ್ ಟೀಮ್ (CERT-in) ಆ್ಯಪಲ್ ಬಳಕೆದಾರರಿಗೆ ಎಚ್ಚರದ ಸಂದೇಶ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ. ಆ್ಯಪಲ್​ನ ವಿವಿಧ ಆವೃತ್ತಿಯ ತಂತ್ರಾಂಶಗಳಲ್ಲಿ ಹಲವು ದೋಷಗಳನ್ನು ಸರ್ಕಾರದ ಅಡ್ವೈಸರಿಯಲ್ಲಿ ಎತ್ತಿತೋರಿಸಲಾಗಿದೆ.

ಹಳೆಯ ಆವೃತ್ತಿಯ ಆ್ಯಪಲ್ ತಂತ್ರಾಂಶಗಳಲ್ಲಿ ಹುಳುಕುಗಳು ಕಂಡುಬಂದಿವೆ. 17.1ಗೆ ಮುಂದಿನ ಐಒಸ್ ಮತ್ತು ಐಪ್ಯಾಡ್ ಒಎಸ್ ಆವೃತ್ತಿಗಳು, 14.1ಕ್ಕೆ ಮುಂಚಿನ ಮ್ಯಾಕ್​ಒಎಸ್ ಸೊನೊಮಾ ಆವೃತ್ತಿಗಳು, 13.6.1ಗೆ ಮುಂಚಿನ ವೆಂಟುರಾ ಆವೃತ್ತಿ, 12.7.1ಕ್ಕೆ ಮುಂಚಿನ ಮಾಂಟೆರೆ ಆವೃತ್ತಿಯ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪವನ್ನು ಸಿಇಆರ್​ಟಿ ತನ್ನ ಅಡ್ವೈಸರಿಯಲ್ಲಿ ತೋರಿಸಿತ್ತೆನ್ನಲಾಗಿದೆ. ಅದರಲ್ಲೂ ಆ್ಯಪಲ್​ನ ಸಫಾರಿ ಬ್ರೌಸರ್ ಆ್ಯಪ್​ನ 17.1ಕ್ಕೆ ಮುಂಚಿನ ಆವೃತ್ತಿಗಳಲ್ಲಿರುವ ಲೋಪವನ್ನು ಪ್ರಮುಖವಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: ಭಾರತೀಯರ ಖಾಸಗಿ ಡೇಟಾ ಸೋರಿಕೆ ಆರೋಪದ ಕುರಿತು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದೇನು?

ಆ್ಯಪಲ್​ನ ಈ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪಗಳನ್ನು ಎತ್ತಿತೋರಿಸಿ ಅದರ ಬಳಕೆದಾರರಿಗೆ ಹೈ ಸಿವಿಯಾರಿಟಿ ಅಲರ್ಟ್ ಅನ್ನು ಹೊರಡಿಸಲಾಗಿದೆ.

ಆ್ಯಪಲ್ ಉತ್ಪನ್ನಗಳಲ್ಲಿ ಹಲವು ಭದ್ರತಾ ಲೋಪಗಳು ಕಂಡುಬಂದಿದ್ದು, ಹ್ಯಾಕರ್​ಗಳು ಸಾಧನವನ್ನು ಹ್ಯಾಕ್ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಸಿಇಆರ್​ಟಿ ಅಕ್ಟೋಬರ್ 14ರಂದು ಬಿಡುಗಡೆ ಮಾಡಿದ ಅಡ್ವೈಸರಿಯಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಹಳೆಯ ಆ್ಯಪಲ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಮೊಬೈಲ್​ಗಳಲ್ಲಿ ಈ ಲೋಪಗಳು ಇರಬಹುದು. ಅಂತೆಯೇ, ಹೊಸ ಆವೃತ್ತಿಗೆ ಅಪ್​ಡೇಟ್ ಮಾಡಲು ಕೋರಲಾಗಿದೆ. ಸಿಇಆರ್​ಟಿ ಲೋಪಗಳನ್ನು ಎತ್ತಿತೋರಿಸಿದ ಬಳಿಕ ಆ್ಯಪಲ್ ಅ ಸಂಬಂಧಿತ ತಂತ್ರಾಂಶಗಳನ್ನು ಅಪ್​ಡೇಟ್ ಮಾಡಿದೆ. ಹೀಗಾಗಿ, ಆ್ಯಪಲ್ ಬಳಕೆದಾರರು ತಮ್ಮ ತಂತ್ರಾಂಶಗಳನ್ನು ಹೊಸ ಆವೃತ್ತಿಗೆ ಬದಲಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ‘ತಪ್ಪಾಗಿಯೂ ಅಲರ್ಟ್ ಬಂದಿರಬಹುದು…’- ಆ್ಯಪಲ್ ಸ್ಪಷ್ಟನೆ; ನೋಟಿಫಿಕೇಶನ್ ಬುಡ ಶೋಧಿಸಲು ಸರ್ಕಾರದಿಂದ ತನಿಖೆ

ಸರ್ಕಾರದಿಂದಲೂ ತನಿಖೆ…

ವಿಪಕ್ಷಗಳ ಕೆಲ ನಾಯಕರು, ಪತ್ರಕರ್ತರು, ವಕೀಲರು ಹೀಗೆ ಹಲವು ಮಂದಿಗೆ ಅವರ ಆ್ಯಪಲ್ ಐಫೋನ್​ಗಳಲ್ಲಿ ಸೆಕ್ಯೂರಿಟಿ ಬೆದರಿಕೆಯ ಅಲರ್ಟ್ ಮೆಸೇಜ್​ಗಳು ಬಂದಿವೆ. ಸರ್ಕಾರಿ ಪ್ರಾಯೋಜಿತ ದಾಳಿಗೆ ಪ್ರಯತ್ನವಾಗಿದೆ ಎನ್ನುವಂತಹ ಮೆಸೇಜ್ ಎಲ್ಲರನ್ನೂ ಚಕಿತಗೊಳಿಸಿದೆ. ವಿಪಕ್ಷಗಳ ನಾಯಕರು ಈ ಮೆಸೇಜ್​ನ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಸರ್ಕಾರ ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದ್ದು, ಆ್ಯಪಲ್ ಕಳುಹಿಸಿರುವ ಈ ಅಲರ್ಟ್ ಮೆಸೇಜ್ ಸಂಬಂಧ ತನಿಖೆಗೆ ಆದೇಶಿಸಿದೆ. ಆ್ಯಪಲ್ ಯಾವುದೋ ಅಸ್ಪಷ್ಟ ಸುಳಿವನ್ನು ಆಧರಿಸಿ ಈ ಅಲರ್ಟ್ ಮೆಸೇಜ್ ಕಳುಹಿಸಿರಬಹುದು ಎಂಬುದು ಸರ್ಕಾರದ ಶಂಕೆ. ಹಾಗೆಯೇ, ಅಲರ್ಟ್ ನೋಟಿಫಿಕೇಶನ್​ನಲ್ಲಿ, ಸರ್ಕಾರಿ ಪ್ರಾಯೋಜಿತವೆಂಬ ಪದ ಪ್ರಯೋಗ ಮಾಡಿರುವುದಕ್ಕೂ ಸರ್ಕಾರ ವ್ಯಗ್ರಗೊಂಡಿದ್ದು, ಆ್ಯಪಲ್ ಸಂಸ್ಥೆಯನ್ನು ಪ್ರಶ್ನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ